ಕನಕಪುರ ಬಂಡೆಯನ್ನು ಡೈನಾಮೆಟ್ ಇಟ್ಟು ಉಡಾಯಿಸಿದ್ದೇವೆ, ಸಿದ್ದರಾಮಯ್ಯ ಭವಿಷ್ಯ ಡೋಲಾಯಮಾನ: ಆರ್.ಅಶೋಕ್ 

ಉಪ ಚುನಾವಣೆ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೀಗ ಉಪ ಚುನಾವಣೆ ಫಲಿತಾಂಶದಿಂದ ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಸಂಚಕಾರ ಬಂದೊದಗಿದೆ. ಅವರ ರಾಜಕೀಯ ಭವಿಷ್ಯ ಅಂತ್ಯವಾಗಲಿದೆ.
ಆರ್ ಅಶೋಕ್
ಆರ್ ಅಶೋಕ್

ಬೆಂಗಳೂರು: ಉಪ ಚುನಾವಣೆ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೀಗ ಉಪ ಚುನಾವಣೆ ಫಲಿತಾಂಶದಿಂದ ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಸಂಚಕಾರ ಬಂದೊದಗಿದೆ. ಅವರ ರಾಜಕೀಯ ಭವಿಷ್ಯ ಅಂತ್ಯವಾಗಲಿದೆ. ಕನಕಪುರ ಬಂಡೆಯನ್ನು ಡೈನಾಮೆಟ್ ಇಟ್ಟು ಉಡಾಯಿಸಿ ಪುಡಿ ಮಾಡಿದ್ದೇವೆ ಎಂದು ಸಚಿವ ಆರ್​. ಅಶೋಕ್ ಅವರು ಕಾಂಗ್ರೆಸ್ ನಾಯಕರ ಕಾಲೆಳೆದಿದ್ದಾರೆ.
 
ಉಪ ಚುನಾವಣೆ ಫಲಿತಾಂಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್​ ಈ ಚುನಾವಣೆಯಲ್ಲಿ ಜಾತಿ ರಾಜಕಾರಣವನ್ನು ಮುಂದಿಟ್ಟುಕೊಂಡು ಆಟವಾಡಲು ಮುಂದಾದರು. ಆದರೆ ಬೆಂಗಳೂರಿನ ಒಕ್ಕಲಿಗರು ಬಿಜೆಪಿ, ಆರ್.ಅಶೋಕ್ ಜೊತೆಗೆ ಇದ್ದಾರೆ ಎಂಬುದು ಈ ಮೂಲಕ ಮತ್ತೊಮ್ಮೆ ಸ್ಪಷ್ಟವಾಗಿದೆ ಎಂದರು.

ಉಪ ಚುನಾವಣೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ಥಾನಕ್ಕೆ ಮತ್ತಷ್ಟು ಶಕ್ತಿ ತುಂಬಿದೆ. ಬಿಎಸ್​ವೈ ನಾಯಕತ್ವ ಬದಲಾವಣೆ ಇಲ್ಲ. ಕರ್ನಾಟಕದ ಜನ ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಬೆಂಬಲಿಸಿದ್ದಾರೆ. ಇನ್ನಷ್ಟು ಅಭಿವೃದ್ದಿ ಕೆಲಸ ಮಾಡಲು ಆಶೀರ್ವಾದ ಮಾಡಿದ್ದಾರೆ. ಯಡಿಯೂರಪ್ಪ ಅವರು ಎರಡೂವರೆ ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ನಾಯಕರ ಕನಸು ಛಿದ್ರವಾಗಿದ್ದು, ಅವರ ಎಲ್ಲಾ ಭವಿಷ್ಯವಾಣಿಗಳು ತಲೆಕೆಳಗಾಗಿವೆ. ಕನಕಪುರ ಬಂಡೆ ಚುನಾವಣೆ ಫಲಿತಾಂಶದ ಮೂಲಕ ಪುಡಿಗಟ್ಟಲಾಗಿದೆ. ಹೀಗಾಗಿ ಕಾಂಗ್ರೆಸ್​ನವರಿಗೆ ಸಿದ್ದರಾಮಯ್ಯ ಅವರು ಬೇಕಾ? ಅಥವಾ ಡಿ.ಕೆ.ಶಿವಕುಮಾರ್ ಬೇಕಾ ಎಂಬುದನ್ನು ನಿರ್ಧರಿಸಿಕೊಳ್ಳುವ ಕಾಲ ಬಂದಿದೆ ಎಂದು ಲೇವಡಿ ಮಾಡಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಮೇಲೆ ನಂಬಿಕೆ ಇಟ್ಟು ಆರ್ ಆರ್ ನಗರ ಉಪ ಚುನಾವಣೆಯ ಉಸ್ತುವಾರಿಯನ್ನು ತಮಗೆ ವಹಿಸಿದ್ದರು. ಅದನ್ನು ಸಮರ್ಥವಾಗಿ ಹಾಗೂ ಸೂಕ್ತವಾಗಿ ನಿರ್ವಹಿಸಿ ಅಭ್ಯರ್ಥಿಗೆ 50 ಸಾವಿರ ಮತಗಳ ಗೆಲುವು ತಂದುಕೊಟ್ಟಿದ್ದೇವೆ. ಹಿಂದೆ ಮುಖ್ಯಮಂತ್ರಿ ಅವರು ಹೇಳಿದಂತೆ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿದ್ದೇವೆ. ಕ್ಷೇತ್ರದಲ್ಲಿ ಬಿ.ವೈ.ವಿಜಯೇಂದ್ರ ಅಥವಾ ಅಶೋಕ್ ಮುಖ್ಯವಲ್ಲ ಪಕ್ಷ ಮುಖ್ಯ. ಪಕ್ಷವೇ ತಾಯಿ. ನಾವು ಮಕ್ಕಳಿದ್ದಂತೆ. ವಿಜಯೇಂದ್ರ ಸಹ ಶಿರಾದಲ್ಲಿ ಕುಳಿತು ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಮುಂದಿನ ಎಲ್ಲಾ ಚುನಾವಣೆಗಳನ್ನು ನಾವು ಗೆಲ್ಲಲಿದ್ದೇವೆ. ಮುಂಬರುವ ಬಿಬಿಎಂಪಿ ಚುನಾವಣೆಗೆ ಆರ್ ಆರ್ ನಗರದ ಚುನಾವಣೆ ದಿಕ್ಸೂಚಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com