ಉಪಚುನಾವಣೆ ಬಳಿಕ ಪಂಚಾಯತ್ ಚುನಾವಣೆ ಮೇಲೆ ಬಿಜೆಪಿ ಕಣ್ಣು!

ತುಮಕೂರಿನ ಶಿರಾ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಇದೀಗ ಪಂಚಾಯತ್ ಚುನಾವಣೆಗಳ ಮೇಲೆ ಕಣ್ಣು ಹಾಯಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ತುಮಕೂರಿನ ಶಿರಾ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಇದೀಗ ಪಂಚಾಯತ್ ಚುನಾವಣೆಗಳ ಮೇಲೆ ಕಣ್ಣು ಹಾಯಿಸಿದೆ.
 
ಕಾಂಗ್ರೆಸ್ ಹಾಗೂ ಜೆಡಿಎಸ್ ವಶದಲ್ಲಿದ್ದ ಶಿರಾ ಮತ್ತು ರಾಜರಾಜೇಶ್ವರಿ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಪಡೆದ ಬಳಿಕ ಮುಂದಿನ ಚುನಾವಣೆಗಳಿಗೆ ಈ ಚುನಾವಣೆ ಮನೋಸ್ಥೈರ್ಯವನ್ನು ಹೆಚ್ಚಿಸಿದೆ. ಕಳೆದರಡು ವರ್ಷಗಳಲ್ಲಿ ಕಮಲ ಪಾಳಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುವಲ್ಲಿ ನಾಯಕರು ಯಶಸ್ವಿಯಾಗಿದೆ. ಚಾಮರಾಜನಗರ, ಮೈಸೂರು ಜಿಲ್ಲೆ ಮತ್ತು ಹಳೇ ಮೈಸೂರು ಭಾಗ ಕಾಂಗ್ರೆಸ್ ನ ಸಾಂಪ್ರಾದಾಯಿಕ ಭದ್ರಕೋಟೆಯಾಗಿದ್ದು, ನಿಧಾನವಾಗಿ ಬಿಜೆಪಿ ನೆಲೆಯೂರುತ್ತಿದೆ.

ಕಳೆದ ವರ್ಷ ಕೆ.ಆರ್.ಪೇಟೆಯಲ್ಲಿ ನಡೆಯ ಉಪಚುನಾವಣೆಯೊಂದಿಗೆ ಬಿಜೆಪಿ ಈ ವಿಜಯ ಮೆರವಣಿಗೆ ಮುಂದುವರೆದಿದೆ. ಬಿಜೆಪಿಯ ಈ ಗೆಲುವಿನ ಹಾದಿಯು ಜೆಡಿಎಸ್ ಪಕ್ಷವನ್ನು ಮೂರನೇ ಸ್ಥಾನಕ್ಕೆ ಇಳಿಯುವಂತೆ ಮಾಡಿದೆ. ಈ ನಡುವೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರೂ ಕೂಡ ಪಕ್ಷವನ್ನು ಮೇಲೆತ್ತಲು ಹೆಣಗಾಡುವಂತಹ ಪರಿಸ್ಥಿತಿ ಎದುರಾಗಿದೆ. 

ಆರ್.ಆರ್.ನಗರ ಮತ್ತು ಶಿರಾ ಉಪಚುನಾವಣಾ ತೀರ್ಪುಗಳು ಒಕ್ಕಲಿಗ ಸಮುದಾಯವು ದೇವೇಗೌಡ-ಕುಮಾರಸ್ವಾಮಿ ಮತ್ತು ಡಿಕೆ.ಶಿವಕುಮಾರ್ ಅವರಿಗೇ ಸೀಮಿತಗೊಂಡಿರುವ ಕ್ಷೇತ್ರಗಳಲ್ಲ ಎಂಬುದನ್ನು ಸಾಬೀತುಪಡಿಸಿದೆ. ಕೆ.ಆರ್.ಪೇಟೆ ಹಾಗೂ ಶಿರಾದಲ್ಲಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಬಿಜೆಪಿಯು ಮಂಡ್ಯ ಮತ್ತು ತುಮಕೂರು ಜಿಲ್ಲೆಗಳನ್ನು ನಿಯಂತ್ರಿಸಲು ಇವುಗಳನ್ನೇ ಬಳಕೆ ಮಾಡಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. 

ಈ ನಡುವೆ ಕಾಂಗ್ರೆಸ್ ಮತ್ತು ಜೆಡಿಯುಗಳ ಪ್ರಾಬಲ್ಯವನ್ನು ಕೊನೆಗೊಳಿಸಲು ಕಮಲ ಪಾಳಯವು ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಪಂಚಾಯತ್ ಚುನಾವಣೆಗೆ ಸಿದ್ಧತೆಗಳನ್ನು ಪ್ರಾರಂಭಿಸುತ್ತಿದೆ.

94,775 ಸದಸ್ಯರನ್ನು ಹೊಂದಿರುವ 6,022 ಗ್ರಾಮ ಪಂಚಾಯಿತಿಗಳು, 3,903 ಸದಸ್ಯರನ್ನು ಹೊಂದಿರುವ 176 ತಾಲ್ಲೂಕು ಪಂಚಾಯಿತಿಗಳು ಮತ್ತು 1,083 ಸದಸ್ಯರನ್ನು ಹೊಂದಿರುವ ಜಿಲ್ಲಾ ಪಂಚಾಯಿತಿಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ.

ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರವೇಶಿಸಲೂ ಕೂಡ ಅವಕಾಶವಿಲ್ಲದಿರುವ ಒಂದು ಕಾಲವಿತ್ತು. ಆದರೆ, ಇದೀಗ ಪರಿಸ್ಥಿತಿ ಬದಲಾಗಿದೆ, ಅದರಲ್ಲೂ ವಿಶೇಷವಾಗಿ ಬಿಜೆಪಿ ಪಕ್ಷವು ಒಕ್ಕಲಿಗ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಸ್ಥಾನಗಳನ್ನು ಗೆದ್ದ ಬಳಿಕವಂತೂ ಪರಿಸ್ಥಿತಿ ಮತ್ತಷ್ಟು ಬದಲಾಗಿದೆ ಎಂದು ಎಂದು ಬಿಜೆಪಿ ಮುಖಂಡ ಶಿವಣ್ಣ ಹೇಳಿದ್ದಾರೆ. 

ಪ್ರಧಾನಮಂತ್ರಿಗಳ ಜನ ಧನ್ ಮತ್ತು ಕಿಸಾನ್ ಸನ್ಮನ್ ಯೋಜನೆಗಳು ಮತ್ತು ಸಕ್ಕರೆ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸುವ ಸಿಎಂ ಬಿಎಸ್ ಯಡಿಯೂರಪ್ಪ ಅವರ ನಿರ್ಧಾರವು ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ಸಹಾಯ ಮಾಡಿದೆ. ಎಂದು ತಿಳಿಸಿದ್ದಾರೆ. 

ಡಿವಿ ಸದಾನಂದ ಗೌಡ, ಆರ್ ಅಶೋಕ, ಡಾ ಸಿಎನ್ ಅಶ್ವತ್ ನಾರಾಯಣ್, ಎಸ್.ಟಿ ಸೋಮಶೇಖರ್, ಡಾ ಕೆ ಸುಧಾಕರ್, ನಾರಾಯಣ ಗೌಡ ಮತ್ತು ಸಂಸದ ಪ್ರತಾಪ್ ಸಿಂಹ ಸೇರಿದಂತೆ ಪಕ್ಷದಲ್ಲಿ ಸಾಕಷ್ಟು ಒಕ್ಕಲಿಗ ನಾಯಕರಿದ್ದು, ಇದೀಗ ಯಾರೊಬ್ಬರೂ ಬಿಜೆಪಿ ಲಿಂಗಾಯತ ಪಕ್ಷವೆಂದು ಆರೋಪಿಸಲು ಸಾಧ್ಯವಿಲ್ಲ ಎಂದು ಪಕ್ಷದ ನಾಯಕ ನಂಜುಂಡೇಗೌಡ ಅವರು ಹೇಳಿದ್ದಾರೆ. 

ಆದರೆ, ಉಪಚುನಾವಣೆಯು ಜನಾಭಿಪ್ರಾಯ ಸಂಗ್ರಹವಲ್ಲ. ಮುಂದಿನ ಪಂಚಾಯತ್ ಚುನಾವಣೆಯಲ್ಲೂ ಬಿಜೆಪಿ ಗೆಲುವನ್ನು ಬಿಂಬಿಸುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಎರಡೂ ಚುನಾವಣೆಗಳೂ ಬೇರೆ ವಿಚಾರಗಳನ್ನು ಪ್ರಮುಖವಾಗಿಟ್ಟುಕೊಂಡು ಕಣಕ್ಕಿಳಿಯಲಾಗುತ್ತದೆ. ಹಿಂದಿನ ಕಾಂಗ್ರೆಸ್ ಸರ್ಕಾರ ಹಾಗೂ ಬಿಜೆಪಿ ಸರ್ಕಾರವನ್ನು ಜನರು ಹೋಲಿಕೆ ಮಾಡುತ್ತಿದ್ದಾರೆ. ಜನರು ಮತ್ತೆ ನಮ್ಮ ಮೇಲೆ ವಿಶ್ವಾಸವಿಡುತ್ತಾರೆಂಬ ವಿಶ್ವಾಸ ನನಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

ಈ ನಡುವೆ ಉಪಚುನಾವಣೆಯಲ್ಲಿ ಜೆಡಿಎಸ್ ಕಳಪೆ ಪ್ರದರ್ಶನ ನೀಡಿರುವುದನ್ನು ಜೆಡಿಎಸ್ ನಾಯಕ ಸಾರಾ ಮಹೇಶ್ ಅವರು ಒಪ್ಪಿಕೊಂಡಿದ್ದು, ಮುಂದಿನ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಪಕ್ಷ ಮತ್ತೆ ಬಲವಾಗಿ ಹಿಂತಿರುಗಲಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com