ಗ್ರಾಮ ಪಂಚಾಯಿತಿ ಚುನಾವಣೆ: ಹೈಕೋರ್ಟ್ ಆದೇಶದ ಬಳಿಕ ರಾಜಕೀಯ ಪಕ್ಷಗಳು ಮತ್ತಷ್ಟು ಚುರುಕು

ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕಗಳು ಘೋಷಣೆಯಾಗದಿದ್ದರೂ ಈಗಾಗಲೇ ಚುನಾವಣೆಗೆ ರಾಜ್ಯದ ಪ್ರಮುಖ ಮೂರು ಪಕ್ಷಗಳು ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿದ್ದು, ಈ ನಡುವಲ್ಲೇ ಶೀಘ್ರಗತಿಯಲ್ಲಿ ಚುನಾವಣಾ ದಿನಾಂಕವನ್ನು ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಸೂಚನೆ ನೀಡಿರುವುದು ರಾಜಕೀಯ ಪಕ್ಷಗಳ ಕಾರ್ಯಗಳು ಮತ್ತಷ್ಟು ಚುರುಕುಗೊಳ್ಳುವಂತೆ ಮಾಡಿದೆ. 
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ

ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕಗಳು ಘೋಷಣೆಯಾಗದಿದ್ದರೂ ಈಗಾಗಲೇ ಚುನಾವಣೆಗೆ ರಾಜ್ಯದ ಪ್ರಮುಖ ಮೂರು ಪಕ್ಷಗಳು ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿದ್ದು, ಈ ನಡುವಲ್ಲೇ ಶೀಘ್ರಗತಿಯಲ್ಲಿ ಚುನಾವಣಾ ದಿನಾಂಕವನ್ನು ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಸೂಚನೆ ನೀಡಿರುವುದು ರಾಜಕೀಯ ಪಕ್ಷಗಳ ಕಾರ್ಯಗಳು ಮತ್ತಷ್ಟು ಚುರುಕುಗೊಳ್ಳುವಂತೆ ಮಾಡಿದೆ. 

ಹೈಕೋರ್ಟ್ ಆದೇಶವನ್ನು ಗಮನಿಸಿದರೆ ಡಿಸೆಂಬರ್ ಅಂತ್ಯದ ವೇಳೆಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ದತಿದೆ. 

ರಾಜ್ಯದ 6,025 ಗ್ರಾಮ ಪಂಚಾಯಿತಿಗಳ ಅಧಿಕಾರಾವಧಿಯು ಜೂನ್/ಜುಲೈ ತಿಂಗಳಿನಲ್ಲಿಯೇ ಅಂತ್ಯಗೊಂಡಿದೆ. ಕೊರೋನಾ ಕಾರಣದಿಂದಾಗಿ ಚುನಾವಣೆಯನ್ನು ಮುಂದೂಡಲಾಗುತ್ತಿತ್ತು. ಹೀಗಾಗಿ ಚುನಾವಣೆ ಆಯೋಜಿಸುವ ಕುರಿತು ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಕೆಯಾಗಿತ್ತು. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ತಡ ಮಾಡದೆ ಚುನಾವಣೆಗೆ ಭರ್ಜರಿ ಸಿದ್ಥತೆಗಳನ್ನು ನಡೆಸುತ್ತಿವೆ. 

ಬಿಜೆಪಿ ಈಗಾಗಲೇ ಮಂಗಳೂರಿನಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಸಿದ್ದು, ಗ್ರಾಮ ಪಂಚಾಯಿತಿ ಚುನಾವಣೆ ಕುರಿತು ಚರ್ಚೆಗಳನ್ನು ನಡೆಸಿವೆ. ಇದಲ್ಲದೆ ಕುಟುಂಬ ಮಿಲನ ಎಂಬ ಕಾರ್ಯಕ್ರಮವನ್ನೂ ಕೂಡ ಪಂಚಾಯಿತಿ ಮಟ್ಟದಲ್ಲಿ ಆಯೋಜನೆ ಮಾಡಿದೆ. ಈ ಕಾರ್ಯಕ್ರಮದಲ್ಲಿ ಪ್ರತೀ ಪಂಚಾಯಿತಿ ನಾಯಕರು ಪಾಲ್ಗೊಳ್ಳಲಿದ್ದಾರೆಂದು ತಿಳಿದುಬಂದಿದೆ. 

ಕಾರ್ಯಕ್ರಮದ ವೇಳೆ ಸರ್ಕಾರ ಸಾಧನೆಗಳು ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದು, ಈ ಮೂಲಕ ಮತದಾರರನ್ನು ತಲುಪಲಿದ್ದೇವೆಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ. 

ಇನ್ನು ಕಾಂಗ್ರೆಸ್ ಕೂಡ ಚುನಾವಣೆಗೆ ಸಿದ್ಧತೆಗಳನ್ನು ಆರಂಭಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ  ಸಲೀಮ್ ಅಹ್ಮದ್ ಅವರು, ಕಾಂಗ್ರೆಸ್ ಈಗಾಗೇ ಚುನಾವಣೆಗೆ ಸಿದ್ಧತೆ ನಡೆಸಿದೆ. ಬೂತ್ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಕಾರ್ಯಕರ್ತರೆಲ್ಲರಿಗೂ ಚುನಾವಣೆಗೆ ಸಿದ್ಧತೆ ನಡೆಸುವಂತೆ ಸೂಚಿಸಲಾಗಿದೆ. ಜನರನ್ನು ಸಂಪರ್ಕಿಸಲು ಈಗಾಗಲೇ ಎಲ್ಲರೂ ತಮ್ಮ ತಮ್ಮ ಕಾರ್ಯಗಳನ್ನು ಆರಂಭಿಸಿದ್ದಾರೆ. ಕೊರೋನಾ ನಿರ್ವಹಣೆ, ಪ್ರವಾಹ ಪರಿಸ್ಥಿತಿ ನಿರ್ವಹಣೆ ಹಾಗೂ ಸ್ಥಳೀಯ ಸಮಸ್ಯೆಗಳ ಬಗೆಹರಿಸುವಲ್ಲಿ ಸರ್ಕಾರದ ವಿಫಲತೆ ಬಗ್ಗೆ ಜನರಿಗೆ ವಿವರಿಸಲಾಗುತ್ತದೆ. ಚುನಾವಣೆಗೆ ನಾವು ಸಿದ್ಧರಿದ್ದೇವೆಂದು ಹೇಳಿದ್ದಾರೆ. 

ಜೆಡಿಎಸ್ ಕೂಡ ಸಿದ್ಧತೆ ನಡೆಸುತ್ತಿದ್ದು, ಮತದಾರರ ಮನವೊಲಿಸಲು ಶ್ರಮಪಡುತ್ತಿದೆ. ಉಪಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಳಿಕ ಪಕ್ಷ ಇದೀಗ ಗ್ರಾಮ ಪಂಚಾಯಿತಿ ಚುನಾವಣೆಗಳತ್ತ ಗಮನ ಹರಿಸಿದೆ. ಪಂಚಾಯಿತಿ ಚುನಾವಣೆ ಮೂಲಕ ತನ್ನ ಅಸ್ತಿತ್ವವನ್ನು ಸಾಬೀತು ಪಡಿಸಲು ಮಾಡು ಇಲ್ಲವೇ ಮಡಿ ಪರಿಸ್ಥಿತಿಯನ್ನು ಜೆಡಿಎಸ್ ಎದುರಿಸುತ್ತಿದೆ ಎಂದು ಜೆಡಿಎಸ್ ನಾಯಕರೊಬ್ಬರು ಹೇಳಿದ್ದಾರೆ. 

ಈ ನಡುವೆ ರಾಜ್ಯ ಚುನಾವಣಾ ಆಯೋಗಕ್ಕೆ ಸರ್ಕಾರ ಪತ್ರ ಬರೆದಿದ್ದು, ಕೊರೋನಾ ಸಾಂಕ್ರಾಮಿಕ ಪರಿಸ್ಥಿತಿ ಇರುವುದರಿಂದ ಚುನಾವಣೆ ಮುಂದೂಡುವಂತೆ ಮನಿ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ. 

ಇದಲ್ಲದೆ ತಜ್ಞರ ಸಮಿತಿ ಕೂಡ ಚುನಾವಣೆ ನಡೆಸಿದ್ದೇ ಆದರೆ, ಗ್ರಾಮೀಣ ಭಾಗದ ಪರಿಸ್ಥಿತಿ ಯಾವ ರೀತಿಯಲ್ಲಿ ಅಪಾಯಕ್ಕೆ ಸಿಲುಕಲಿದೆ ಎಂಬುದರ ಕುರಿತು ವರದಿಯನ್ನೂ ಸಲ್ಲಿಸಿದ್ದಾರೆ. ಆದರೆ, ಈ ಎಲ್ಲಾ ಬೆಳವಣಿಗೆ ನಡುವಲ್ಲೇ ಹೈಕೋರ್ಟ್ ಆದೇಶದಂತೆ ಚುನಾವಣಾ ಆಯೋಗವು ಇನ್ನೂ ಮೂರು ವಾರಗಳಲ್ಲಿ ದಿನಾಂಕವನ್ನು ಪ್ರಕಟಿಸುವ ಪರಿಸ್ಥಿತಿ ಎಂದುರಾಗಿದೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥ ಬಸವರಾಜು ಅವರು, ನ್ಯಾಯಾಲಯದ ಆದೇಶದಂತೆ ನಾವು ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಲೇಬೇಕಿದೆ. ಚುನಾವಣೆಗೆ ದಿನಾಂಕ ಘೋಷಣೆ ಮಾಡುವುದಕ್ಕೂ ಮುನ್ನ ಸಿದ್ಧತೆಗಳಿಗೆ ಕನಿಷ್ಟ 1 ತಿಂಗಳಾದರೂ ಕಾಲಾವಕಾಶ ಬೇಕಾಗುತ್ತದೆ. ಡಿಸೆಂಬರ್ ಅಂತ್ಯದಲ್ಲಿ ಚುನಾವಣೆ ನಡೆಸಲು ಚಿಂತನೆ ನಡೆಸಲಾಗಿತ್ತು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com