ಸಂಪುಟ ವಿಸ್ತರಣೆ/ಪುನಾರಚನೆಗೆ ಸಿಗದ ಹೈಕಮಾಂಡ್ ಗ್ರೀನ್ ಸಿಗ್ನಲ್: ಬರಿಗೈಯಲ್ಲಿ ವಾಪಸ್ಸಾದ ಯಡಿಯೂರಪ್ಪ

ಸಚಿವ ಸಂಪುಟ ವಿಸ್ತರಣೆ ಸಂಬಂಧ ಬುಧವಾರ ದೆಹಲಿಗೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ 20 ನಿಮಿಷಗಳ ಕಾಲ ಚರ್ಚೆ ನಡೆಸಿ ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ.
ಜೆಪಿ ನಡ್ಡಾ - ಯಡಿಯೂರಪ್ಪ
ಜೆಪಿ ನಡ್ಡಾ - ಯಡಿಯೂರಪ್ಪ

ನವದೆಹಲಿ: ಸಚಿವ ಸಂಪುಟ ವಿಸ್ತರಣೆ ಸಂಬಂಧ ಬುಧವಾರ ದೆಹಲಿಗೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ 20 ನಿಮಿಷಗಳ ಕಾಲ ಚರ್ಚೆ ನಡೆಸಿ ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ.

ಚರ್ಚೆಯ ವೇಳೆ ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರಿಗೆ ಸಂಪುಟ ವಿಸ್ತರಣೆಗೆ ಅನುಮತಿ ಕೋರಿದ್ದಾರೆ. ಜೊತೆಗೆ ಸಚಿವಾಕಾಂಕ್ಷಿಗಳ ಪಟ್ಟಿಯನ್ನು ಅಧ್ಯಕ್ಷರಿಗೆ ಸಲ್ಲಿಸಿದ್ದಾರೆ. ಆದರೆ ಹೈಕಮಾಂಡ್ ವರಿಷ್ಠರು ಇನ್ನು ಯಾವುದೇ ಅಂತಿಮ ತೀರ್ಮಾನವನ್ನು ತಿಳಿಸಲಿಲ್ಲವೆಂದು ತಿಳಿದು ಬಂದಿದೆ.

ನಡ್ಡಾ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಿ ತಿಳಿಸುವುದಾಗಿ ಹೇಳಿದ್ದಾರೆ. ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎಂಬುದನ್ನು ಒಂದೆರಡು ದಿನಗಳಲ್ಲಿ ಹೈಕಮಾಂಡ್ ನಿರ್ಧರಿಸಲಿದೆ. ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ನನ್ನ ಅಭಿಪ್ರಾಯವನ್ನು ತಿಳಿಸಿದ್ದೇನೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿದ್ದೇನೆ. ಅಮಿತ್ ಶಾ ಅವರನ್ನು ಭೇಟಿ ಮಾಡುತ್ತಿಲ್ಲ. ಈಗ ನೇರವಾಗಿ ಬೆಂಗಳೂರಿಗೆ ತೆರಳುತ್ತಿದ್ದೇನೆ ಎಂದು ಹೇಳಿದರು.

ಎರಡು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ತುದಿಗಾಲಲ್ಲಿ ನಿಂತಿದ್ದರೂ ಪಕ್ಷದ ಹೈಕಮಾಂಡ್ ನಾಯಕರು ಮತ್ತೊಮ್ಮೆ ಯಡಿಯೂರಪ್ಪರನ್ನು ಬೆಂಗಳೂರಿಗೆ ವಾಪಸ್ ಕಳುಹಿಸಿದ್ದಾರೆ. ಕೆಲವೇ ದಿನಗಳಲ್ಲಿ ರಾಷ್ಟ್ರೀಯ ಅಧ್ಯಕ್ಷ 100 ದಿನಗಳ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಮುಂದಿನ ತಿಂಗಳು ರಾಜ್ಯಕ್ಕೂ ಆಗಮಿಸಲಿದ್ದಾರೆ. ಅಲ್ಲಿಯವರೆಗೂ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಮುಹೂರ್ತ ಕೂಡಿಬರುವ ಲಕ್ಷಣಗಳು ಕಂಡು ಬರುತ್ತಿಲ್ಲ.
 
ಬಹಳ ನಿರೀಕ್ಷೆಯಿಟ್ಟುಕೊಂಡು ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಿರೀಕ್ಷಿತ ಯಶಸ್ಸು ದೊರಕಿಲ್ಲ. ಸಂಪುಟ ವಿಸ್ತರಣೆ ಮಾಡುವ ಉದ್ದೇಶ ಪಕ್ಷದ ಹೈಕಮಾಂಡ್ ಗೆ ಇದೆಯೋ ಅಥವಾ ನಾಯಕತ್ವದ ಬದಲಾವಣೆ ಉದ್ದೇಶವನ್ನು ಮನಸ್ಸಿನಲ್ಲಿಟ್ಟುಕೊಂಡು ಯಡಿಯೂರಪ್ಪಗೆ ಬಿಜೆಪಿ ವರಿಷ್ಟರು ಅನುಮತಿ ನೀಡುತ್ತಿಲ್ಲವೋ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com