ಎಲ್ಲರೂ ಸೇರಿ ನಮ್ಮನ್ನು ಮುಗಿಸಿಬಿಟ್ಟರು, ಮಗನ ಸೋಲನ್ನು ನೆನೆದು ಭಾವುಕರಾದ ಹೆಚ್.ಡಿ.ಕುಮಾರಸ್ವಾಮಿ
ಎಲ್ಲರೂ ಸೇರಿ ಮುಗಿಸಬೇಕು ಎಂದು ಮುಗಿಸಿದರು. ಆದರೆ, ನನಗೆ ಮಂಡ್ಯ ಜಿಲ್ಲೆಯ ಜನರ ಬಗ್ಗೆ ಬೇಸರವಿಲ್ಲ. ರಾಜಕಾರಣಕ್ಕೆ ಬಂದ ದಿನದಿಂದ ಮಂಡ್ಯ ಜನರ ಜೊತೆ ನನ್ನ ಒಡನಾಟವಿದೆ. ಜಿಲ್ಲೆಯ ಜನರು ತುಂಬಾ ಮುಗ್ಧರು, ಎಲ್ಲರನ್ನೂ...
Published: 22nd November 2020 12:38 PM | Last Updated: 22nd November 2020 12:38 PM | A+A A-

ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಎಲ್ಲರೂ ಸೇರಿ ಮುಗಿಸಬೇಕು ಎಂದು ಮುಗಿಸಿದರು. ಆದರೆ, ನನಗೆ ಮಂಡ್ಯ ಜಿಲ್ಲೆಯ ಜನರ ಬಗ್ಗೆ ಬೇಸರವಿಲ್ಲ. ರಾಜಕಾರಣಕ್ಕೆ ಬಂದ ದಿನದಿಂದ ಮಂಡ್ಯ ಜನರ ಜೊತೆ ನನ್ನ ಒಡನಾಟವಿದೆ. ಜಿಲ್ಲೆಯ ಜನರು ತುಂಬಾ ಮುಗ್ಧರು, ಎಲ್ಲರನ್ನೂ ನಂಬುತ್ತಾರೆಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ,ಕುಮಾರಸ್ವಾಮಿಯವರು ಚುನಾವಣೆಯಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯವರ ಸೋಲು ನೆನೆದು ಭಾವುಕರಾಗಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬ್ಯಾಡರಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಕುಮಾರಸ್ವಾಮಿಯವರು, ಚುನಾವಣೆಯಲ್ಲಿ ಮಗನ ಸೋಲನ್ನು ನೆನೆದು ಭಾವುಕರಾದರು.
ನಿಖಿಲ್ ಚುನಾವಣೆಗೆ ನಿಲ್ಲುವುದು ಬೇಡ ಎಂದು ಹೇಳಿದ್ದೆ. ಆದರೆ, ಎಲ್ಲರೂ ಸೇರಿ ನಿಖಿಲ್'ನನ್ನು ಚುನಾವಣೆಯಲ್ಲಿ ನಿಲ್ಲಿಸಿದರು. ಎಲ್ಲರೂ ಸೇರಿ ನಮ್ಮನ್ನು ಸೋಲಿಸಬೇಕೆಂದು ನಿರ್ಧರಿಸಿಯೇ ಸೋಲಿಸಿದರು. ಎಲ್ಲರೂ ಸೇರಿ ನಮ್ಮನ್ನು ಮುಗಿಸಿಬಿಟ್ಟರು. ಆದರೂ ನಮಗೆ ಮಂಡ್ಯ ಜಿಲ್ಲೆ ಬಗ್ಗೆ ಬೇಸರವಿಲ್ಲ. ಮಂಡ್ಯದ ಜನರು ಮುಗ್ಧರು ಎಲ್ಲರನ್ನೂ ನಂಬುತ್ತಾರೆ. ಮಂಡ್ಯವನ್ನು ಹೆಚ್.ಡಿ.ದೇವೇಗೌಡ ಕುಟುಂಬ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.
ನಾನು ರಾಜಕೀಯದಿಂದಲೇ ನಿವೃತ್ತಿ ಪಡೆಯಬೇಕೆಂದುಕೊಂಡಿದ್ದೆ. ಆದರೆ, ಜನರು ನಮಗೆ ತೋರಿಸುವ ಪ್ರೀತಿನೋಡಿದಾಗ ನಿವೃತ್ತಿಯಾದ್ರೆ ಅವರಿಗೆ ಅನ್ಯಾಯ ಮಾಡಿದಂತೆ ಅನಿಸುತ್ತೆ. ಈ ಕಾರಣಕ್ಕಾಗಿಯೇ ರಾಜಕೀಯದಲ್ಲಿ ಮುಂದುವರೆದಿದ್ದೇನೆ. ವೈಯಕ್ತಿಕವಾಗಿ ರಾಜಕೀಯದಲ್ಲಿ ಮುಂದುವರೆಯುವ ಆಸೆಯಿಲ್ಲ ಎಂದು ತಿಳಿಸಿದ್ದಾರೆ.