ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಸರತ್ತು: 'ಪ್ರಾದೇಶಿಕ ಸಮಾನತೆ' ನೀಡಲು ಬಿಜೆಪಿ ಹೈಕಮಾಂಡ್ ಚಿಂತನೆ
ಕರ್ನಾಟಕ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಸಮಯ ತೆಗೆದುಕೊಳ್ಳುವಂತೆ ಕಾಣುತ್ತಿದೆ. ಪ್ರಾದೇಶಿಕ ಅಸಮಾನತೆಯಾಗದಂತೆ ಸಂಪುಟ ವಿಸ್ತರಣೆ ವೇಳೆ ನೋಡಿಕೊಳ್ಳಲು ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಇದರಿಂದಾಗಿಯೇ ವಿಸ್ತರಣೆ ಇಷ್ಟು ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ.
Published: 24th November 2020 08:30 AM | Last Updated: 24th November 2020 12:10 PM | A+A A-

ಬಿ ಎಸ್ ಯಡಿಯೂರಪ್ಪ
ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಸಮಯ ತೆಗೆದುಕೊಳ್ಳುವಂತೆ ಕಾಣುತ್ತಿದೆ. ಪ್ರಾದೇಶಿಕ ಅಸಮಾನತೆಯಾಗದಂತೆ ಸಂಪುಟ ವಿಸ್ತರಣೆ ವೇಳೆ ನೋಡಿಕೊಳ್ಳಲು ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಇದರಿಂದಾಗಿಯೇ ವಿಸ್ತರಣೆ ಇಷ್ಟು ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಕಳೆದ ಹಲವು ತಿಂಗಳುಗಳಿಂದ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತುಗಳು ಕೇಳಿಬರುತ್ತಲೇ ಇದ್ದವು. ಆದರೆ ಇದುವರೆಗೆ ಯಾವುದೂ ಅಂತಿಮವಾಗಿಲ್ಲ. ಈಗಾಗಲೇ ಸಿಎಂ ಯಡಿಯೂರಪ್ಪ ಮತ್ತು ಡಿಸಿಎಂ ಗೋವಿಂದ ಕಾರಜೋಳ ದೆಹಲಿಗೆ ಹೋಗಿ ಬಂದರೂ ಒಪ್ಪಿಗೆ ಮಾತ್ರ ಸಿಕ್ಕಿಲ್ಲ.ನಂತರ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ದೆಹಲಿಗೆ ಹೋಗಿಬಂದರು. ಬಿಜೆಪಿ ಸರ್ಕಾರ ರಚನೆಯಲ್ಲಿ ಸಹಾಯ ಮಾಡಿದವರಿಗೆಲ್ಲ ಸಚಿವ ಸ್ಥಾನ ದೊರಕಲಿದೆ ಎಂದು ಅವರು ಹೇಳಿದ್ದರೂ ಇದುವರೆಗೆ ಯಾವುದೂ ಅಂತಿಮವಾಗಿಲ್ಲ.
ಕಳೆದ ಭಾನುವಾರ ಸಿಎಂ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಕೂಡ ದೆಹಲಿಗೆ ಹೋಗಿ ಬಂದಿದ್ದಾರೆ. ಪ್ರಸ್ತುತ ಬಿಜೆಪಿಯಿಂದ ಬೆಂಗಳೂರಿನ ಆರು ಮಂದಿ ಸಚಿವರು ಮತ್ತು ಬೆಳಗಾವಿಯಿಂದ ನಾಲ್ವರು ಸಚಿವರಿದ್ದರೆ ಉತ್ತರ ಮತ್ತು ದಕ್ಷಿಣ ಕರ್ನಾಟಕದ ಹಲವರು ಜಿಲ್ಲೆಗಳ ಶಾಸಕರಿಗೆ ಮಂತ್ರಿ ಭಾಗ್ಯ ಇನ್ನೂ ಸಿಕ್ಕಿಲ್ಲ.
ಮುನಿರತ್ನ ಅವರ ಆರ್ ಆರ್ ನಗರ ಕ್ಷೇತ್ರದ ಗೆಲುವಿನಿಂದ, ವಿಧಾನ ಪರಿಷತ್ ಸದಸ್ಯರಾದ ಎಸ್ ವಿಶ್ವನಾಥ್, ಸಿ ಪಿ ಯೋಗೇಶ್ವರ್ ಮತ್ತು ಇತರ ಕೆಲವರು ಸಚಿವ ಸ್ಥಾನ ಆಕಾಂಕ್ಷಿಗಳಾಗಿರುವುದರಿಂದ ಈ ಬಾರಿ ಸಂಪುಟ ವಿಸ್ತರಣೆ ಅಷ್ಟು ಸುಲಭವಾಗಿಲ್ಲ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಬಿಜೆಪಿಯ ಹಿರಿಯ ನಾಯಕ, ಮುನಿರತ್ನ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಬೆಂಗಳೂರಿನಿಂದ ಸಚಿವರ ಸಂಖ್ಯೆ ಶೇಕಡಾ 25ಕ್ಕಿಂತ ಹೆಚ್ಚಾಗುತ್ತದೆ, ಇದರಿಂದ ಅಸಮಾನತೆ ಉಂಟಾಗುತ್ತದೆ ಎಂದರು.
ಬೆಳಗಾವಿಗೆ ಸಹ ಸಿಕ್ಕಿದೆ ಪ್ರಾತಿನಿಧ್ಯ: ಸಂಪುಟ ವಿಸ್ತರಣೆಯಲ್ಲಿ ಜಾತಿವಾರು ಮತ್ತು ಪ್ರದೇಶವಾರು ನೋಡಲು ಪಕ್ಷದ ಹೈಕಮಾಂಡ್ ಬಯಸುತ್ತಿದೆ. ಈ ಬಾರಿ ಸಂಪುಟ ವಿಸ್ತರಣೆ ವೇಳೆ ಸಿಸಿ ಪಾಟೀಲ್, ಶಶಿಕಲಾ ಜೊಲ್ಲೆ ಅವರನ್ನು ಬೆಳಗಾವಿಯಿಂದ, ವಿ.ಸೋಮಣ್ಣ ಅಥವಾ ಎಸ್ ಸುರೇಶ್ ಕುಮಾರ್ ಅವರನ್ನು ಬೆಂಗಳೂರಿನಿಂದ ಕೈಬಿಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.