ಸರ್ಕಾರ ರಚನೆಯಲ್ಲಿ ನಮ್ಮ ಕೊಡುಗೆಯೂ ಇದೆ, ನಾನು ಬ್ಲ್ಯಾಕ್ ಮೇಲ್ ಮಾಡುವುದಿಲ್ಲ: ರೇಣುಕಾಚಾರ್ಯ
17 ಜನರಿಂದ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ ಎಂದು ನಾನು ಎಲ್ಲೂ ಹೇಳಿಲ್ಲ. 17 ಜನರು ಬಿಜೆಪಿಗೆ ಬಂದಿದ್ದರಿಂದಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು. ಸರ್ಕಾರ ರಚನೆಯಲ್ಲಿ ನಿಮ್ಮ ತ್ಯಾಗವೂ ಇದೆ, ನಮ್ಮ ಕೊಡುಗೆಯೂ ಇದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
Published: 26th November 2020 01:40 PM | Last Updated: 26th November 2020 01:44 PM | A+A A-

ರೇಣುಕಾಚಾರ್ಯ
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯ 105 ಶಾಸಕರು ಇರುವುದರಿಂದಲೇ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಮಗೆ 17 ಶಾಸಕರ ಬಗ್ಗೆ ಗೌರವವಿದೆ. ಪಕ್ಷದಲ್ಲಿ ಅವರಿಗೆ ಸೂಕ್ತ ಸ್ಥಾನಮಾನಗಳನ್ನೂ ನೀಡಲಾಗಿದೆ. ಆದರೆ 105 ಜನ ಇಲ್ಲದಿದ್ದರೆ ಸರ್ಕಾರ ರಚನೆ ಆಗುತ್ತಿರಲಿಲ್ಲ ಎಂಬುದನ್ನು ಯಾರೂ ಮರೆಯಬಾರದು. ಜೆಡಿಎಸ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಂದವರಿಗೆ ಸ್ಥಾನಮಾನ ನೀಡಲಾಗಿದೆ’ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ರೇಣುಕಾಚಾರ್ಯ ಈ ಹೇಳಿಕೆಗೆ ಎಂಟಿಬಿ ನಾಗರಾಜ್ ತಿರುಗೇಟು ನೀಡಿದ್ದರು, 17 ಜನರಿಂದ ಸರ್ಕಾರ ಬಂದಿಲ್ಲ ಎಂದಾದರೆ, ಉಳಿದ 105 ಜನರಿಂದ ಯಾಕೆ ಸರ್ಕಾರ ರಚಿಸಲು ಆಗಲಿಲ್ಲ ಎಂದು ಪ್ರಶ್ನಿಸಿದ್ದರು.
ಈ ಸಂಬಂಧ ಇಂದು ಮತ್ತೆ ಪ್ರತಿಕ್ರಿಯೆ ನೀಡಿರುವ ರೇಣುಕಾಚಾರ್ಯ, 17 ಜನರಿಂದ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ ಎಂದು ನಾನು ಎಲ್ಲೂ ಹೇಳಿಲ್ಲ. 17 ಜನರು ಬಿಜೆಪಿಗೆ ಬಂದಿದ್ದರಿಂದಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು. ಸರ್ಕಾರ ರಚನೆಯಲ್ಲಿ ನಿಮ್ಮ ತ್ಯಾಗವೂ ಇದೆ, ನಮ್ಮ ಕೊಡುಗೆಯೂ ಇದೆ. ಒಬ್ಬ ವ್ಯಕ್ತಿಯಿಂದ ಅಧಿಕಾರಕ್ಕೆ ಬಂದಿಲ್ಲ ಎಂದು ನಾನು ಹೇಳಿದ್ದೇನೆಯೇ ಹೊರತು 17 ಜನರ ವಿಚಾರವನ್ನು ನಾನೆಲ್ಲೂ ಪ್ರಸ್ತಾಪಿಸಿಲ್ಲ ಎಂದು ವಾದಿಸಿದ್ದಾರೆ.
ಇನ್ನೂ ಜಾರಕಿಹೊಳಿ ಭೇಟಿಯ ಬಗ್ಗೆ ಮಾತನಾಡಿದ ಅವರು, ನಾನು ಸಾದಾ ಸೀದಾ ವ್ಯಕ್ತಿ, ನಾನು ಯಾರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿಲ್ಲ , ನಾವೆಲ್ಲರೂ ಆಗಾಗ್ಗೆ ಸೇರುತ್ತಿರುತ್ತೇವೆ ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಹೇಳಿದ್ದಾರೆ.