ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆಗೆ ಯತ್ನಕ್ಕೆ ರಾಜಕೀಯ ತಿರುವು: 'ಆ ವಿಡಿಯೊ'ದಲ್ಲಿ ಏನಿದೆ? 

ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. 
ಎನ್ ಆರ್ ಸಂತೋಷ್, ಸಿಎಂ ಯಡಿಯೂರಪ್ಪ (ಸಂಗ್ರಹ ಚಿತ್ರ)
ಎನ್ ಆರ್ ಸಂತೋಷ್, ಸಿಎಂ ಯಡಿಯೂರಪ್ಪ (ಸಂಗ್ರಹ ಚಿತ್ರ)

ಬೆಂಗಳೂರು: ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. 

ಸಂತೋಷ್ ಅವರು ತೀವ್ರ ರಾಜಕೀಯ ಒತ್ತಡದಲ್ಲಿದ್ದರು ಎಂದು ಕಾಂಗ್ರೆಸ್ ಆರೋಪ ಮಾಡಿದ್ದು ಈ ಬಗ್ಗೆ ವಿಸ್ತೃತ ತನಿಖೆಯಾಗಬೇಕೆಂದು ಒತ್ತಾಯಿಸಿದೆ. ಕಾಂಗ್ರೆಸ್ ಈ ವಿಷಯವನ್ನು ರಾಜಕೀಯ ಮಾಡಲು ಹೊರಟು ಪಕ್ಷಕ್ಕೆ ಮಸಿ ಬಳಿಯಲು ನೋಡುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ.

ಈ ಮಧ್ಯೆ ಸಂತೋಷ್ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಬಹುದು ಎಂದು ಎಂ ಎಸ್ ರಾಮಯ್ಯ ಆಸ್ಪತ್ರೆಯ ಅಧ್ಯಕ್ಷ ಡಾ ನರೇಶ್ ಶೆಟ್ಟಿ ತಿಳಿಸಿದ್ದಾರೆ. 

ನಿನ್ನೆ ಸಿಎಂ ಯಡಿಯೂರಪ್ಪ ಆಸ್ಪತ್ರೆಗೆ ಭೇಟಿ ನೀಡಿ ಸಂತೋಷ್ ಅವರ ಆರೋಗ್ಯ ವಿಚಾರಿಸಿದ್ದರು.

ಸಂತೋಷ್ ಆತ್ಮಹತ್ಯೆ ಯತ್ನದ ಬಗ್ಗೆ ತನಿಖೆಯಾಗಬೇಕು: ವಿಡಿಯೊಗೆ ಸಂಬಂಧಪಟ್ಟಂತೆ ಸಂತೋಷ್ ವಿರುದ್ಧ ದೂರು ನೀಡಲಾಗಿತ್ತು, ಈ ಹಿನ್ನೆಲೆಯಲ್ಲಿ ತೀವ್ರ ಒತ್ತಡದಿಂದ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ, ಅವರ ಆತ್ಮಹತ್ಯೆ ಯತ್ನದ ಬಗ್ಗೆ ತನಿಖೆಯಾಗಬೇಕು ಎಂದು ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಆಗ್ರಹಿಸಿದ್ದಾರೆ. ಹಾಗಾದರೆ ಆ ವಿಡಿಯೊದಲ್ಲಿ ಏನಿದೆ ಎಂದು ಸುದ್ದಿಗಾರರು ಕೇಳಿದಾಗ ಡಿ ಕೆ ಶಿವಕುಮಾರ್ ಉತ್ತರಿಸಲಿಲ್ಲ. 

ವಿಡಿಯೊ ಬಗ್ಗೆ ಮುಜುಗರವಾಗಿ ಆತ್ಮಹತ್ಯೆಗೆ ಯತ್ನಿಸಿರಬಹುದು. 4 ತಿಂಗಳ ಹಿಂದೆ ಸಂತೋಷ್ ಅವರು ಈ ವಿಡಿಯೊ ಮಾಡಿ ಅದನ್ನು ಬಿಜೆಪಿ ವಿಧಾನಪರಿಷತ್ ಸದಸ್ಯರಿಗೆ ಕಳುಹಿಸಿದ್ದರು, ಅವರು ಅದನ್ನು ಪಕ್ಷದ ನಾಯಕರಿಗೆ ಕಳುಹಿಸಿದ್ದಾರೆ, ಹಾಗಾದರೆ ಆ ವಿಧಾನ ಪರಿಷತ್ ಸದಸ್ಯರು ಯಾರು, ಅವರು ಕಳುಹಿಸಿದ್ದ ವಿಡಿಯೊದಲ್ಲಿ ಏನಿತ್ತು ಎಂದು ಕೇಳಿದಾಗ ಅವನ್ನೆಲ್ಲ ನಾನು ಮಾಧ್ಯಮ ಮುಂದೆ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ, ನನಗೆ ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಂದಲೇ ತಿಳಿಯಿತು. ಈ ಬಗ್ಗೆ ಸಮಗ್ರ ತನಿಖೆಯಾಗಿ ಸತ್ಯ ಹೊರಬರಬೇಕು ಎಂದಷ್ಟೇ ಡಿಕೆಶಿ ನಿನ್ನೆ ಶಿರಸಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. 

ಕಾಂಗ್ರೆಸ್ ನ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಕೂಡ ಈ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದರು. ಸರ್ಕಾರ ತನಿಖೆ ನಡೆಸಲು ಆದೇಶ ನೀಡದಿದ್ದರೆ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದರು. 

ಸಂತೋಷ್ ಪತ್ನಿ ಜಾಹ್ನವಿ ಹೇಳುವುದೇನು?: ಹಲವು ರಾಜಕೀಯ ಬೆಳವಣಿಗೆಗಳು, ಬದಲಾವಣೆಗಳಿಂದ ಸಂತೋಷ್ ಅವರು ಕಳೆದ ಒಂದು ವರ್ಷದಿಂದ ತೀವ್ರ ರಾಜಕೀಯ ಒತ್ತಡದಲ್ಲಿದ್ದರು. ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ವೈಯಕ್ತಿಕವಾಗಿ ಯಾವುದೇ ಸಮಸ್ಯೆಗಳಿರಲಿಲ್ಲ ಎಂದು ಸಂತೋಷ್ ಪತ್ನಿ ಜಾಹ್ನವಿ ಹೇಳುತ್ತಾರೆ. 

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ ವಿರೋಧ ಪಕ್ಷದ ನಾಯಕರು ವೃಥಾ ಆರೋಪ ಮಾಡುತ್ತಿದ್ದು, ಶಿವಕುಮಾರ್ ಅವರ ಬಳಿ ವಿಡಿಯೊ ಇದ್ದರೆ ಅದನ್ನು ನೀಡಲಿ, ಪೊಲೀಸರು ತನಿಖೆ ಮಾಡಲಿ ಎಂದರು.

ಕಂದಾಯ ಸಚಿವ ಆರ್ ಅಶೋಕ್, ಸಂತೋಷ್ ಅವರ ವಿರುದ್ಧ ಆಧಾರರಹಿತ ಹೇಳಿಕೆ ನೀಡುವುದು ಸರಿಯಲ್ಲ, ಶಿವಕುಮಾರ್ ಅವರು ರಾಜಕೀಯ ಲಾಭಕ್ಕಾಗಿ ವೃಥಾ ಆರೋಪ, ಟೀಕೆ ಮಾಡುತ್ತಿದ್ದಾರೆ ಎಂದರು. ಜನರನ್ನು ತಪ್ಪುದಾರಿಗೆಳೆಯಲು ಕಾಂಗ್ರೆಸ್ ನಾಯಕರು ಇಲ್ಲಸಲ್ಲದ ಆಪಾದನೆ, ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಮತ್ತು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com