ಕರ್ನಾಟಕದಲ್ಲಿ ಕುಟುಂಬ ರಾಜಕಾರಣದ ಕಾರುಬಾರು: ವಂಶವಾಹಿ ಉತ್ತರಾಧಿಕಾರಿಗಳ ದರ್ಬಾರು!

ಕರ್ನಾಟಕದಲ್ಲಿ ಕುಟುಂಬ ರಾಜಕಾರಣ ಉದ್ಯಮವಾಗುತ್ತಿದೆ. ಸರಿಸುಮಾರು ಅಂದಾಜಿನ ಪ್ರಕಾರ ರಾಜ್ಯಸಭೆ, ಲೋಕಸಭೆ, ವಿಧಾನ ಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಸುಮಾರು 150 ಕುಟುಂಬ ಸದಸ್ಯರಿದ್ದಾರೆ.
ಕುಮಾರಸ್ವಾಮಿ ಕುಟುಂಬ
ಕುಮಾರಸ್ವಾಮಿ ಕುಟುಂಬ

ಬೆಂಗಳೂರು: ಕರ್ನಾಟಕದಲ್ಲಿ ಕುಟುಂಬ ರಾಜಕಾರಣ ಉದ್ಯಮವಾಗುತ್ತಿದೆ. ಸರಿಸುಮಾರು ಅಂದಾಜಿನ ಪ್ರಕಾರ ರಾಜ್ಯಸಭೆ, ಲೋಕಸಭೆ, ವಿಧಾನ ಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಸುಮಾರು 150 ಕುಟುಂಬ ಸದಸ್ಯರಿದ್ದಾರೆ.

ರಾಜಕಾರಣಿಗಳು ಮತ್ತು ಅವರ ಕುಟುಂಬಸ್ಥರು ತಮ್ಮ ವಂಶವಾಹಿ ರಾಜಕಾರಣವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಎಲ್ಲಾ ಚುನಾಯಿತ ಪ್ರತಿನಿಧಿಗಳಲ್ಲಿ 40 ಪ್ರತಿಶತಕ್ಕೂ ಹೆಚ್ಚು - ಸಂಸದರು ಮತ್ತು ಶಾಸಕರು, ಜಿಲ್ಲಾ ಪಂಚಾಯಿತಿಗಳು ಮತ್ತು ನಾಗರಿಕ ಸಂಸ್ಥೆಗಳ ಸದಸ್ಯರು - ಒಂದು ರಾಜಕೀಯ ಕುಟುಂಬ ಸೇರಿದವರಾಗಿದ್ದಾರೆ. ಕುಟುಂಬ ರಾಜಕಾರಣದಲ್ಲಿ ಸದಾ ಜೆಡಿಎಸ್ ಮುಂದಿದೆ, ಹಾಗೆಂದ ಮಾತ್ರಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲವೆಂದಲ್ಲ
ಈ ಎರಡು ಪಕ್ಷಗಳು ವಂಶವಾಹಿ ರಾಜಕಾರಣದಲ್ಲಿ ಹಿಂದುಳಿದಿಲ್ಲ.

ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪುತ್ರ ಡಾ.ಯತೀಂದ್ರ ಶಾಸಕರಾಗಿದ್ದಾರೆ. ರಾಮಲಿಂಗಾ ರೆಡ್ಡಿ ಮತ್ತು ಅವರ ಪುತ್ರಿ ಸೌಮ್ಯಾ ರೆಡ್ಡಿ ಕೂಡ ಶಾಸಕಿ, ಪ್ರಕಾಶ್ ಹುಕ್ಕೇರಿ ಮತ್ತವರ ಪುತ್ರ ಗಣೇಶ್ ಹುಕ್ಕೇರಿ ಶಾಸಕರಾಗಿದ್ದಾರೆ.

ರಮೇಶ್ ಜಾರಕಿ ಹೊಳಿ ಕುಟುಂಬದಲ್ಲಿ ಅವರ ಇಬ್ಬರು ಸಹೋದರರಾದ ಸತೀಶ್ ಮತ್ತು ಬಾಲಚಂದ್ರ ಇಬ್ಬರು ಶಾಸಕರು. ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ಸದಸ್ಯರಾಗಿದ್ದರೇ ಪುತ್ರ ಪ್ರಿಯಾಂಕ್ ಖರ್ಗೆ ಶಾಸಕ. 

ಮಾಜಿ ಸಿಎಂ ದಿವಂಗತ ಧರ್ಮಸಿಂಗ್ ಪುತ್ರ ಅಜಯ್ ಸಿಂಗ್ ಶಾಸಕರಾಗಿದ್ದರೇ ಅವರ ಮತ್ತೊಬ್ಬ ಸಹೋದರ ವಿಜಯ್ ಸಿಂಗ್ ಎಂಎಲ್ ಸಿಯಾಗಿದ್ದಾರೆ, ಇನ್ನೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಸಂಸದ.

ಇನ್ನೂ ಬಿಜೆಪಿ ಕೂಡ ಕುಟುಂಬ ರಾಜಕಾರಣದಲ್ಲಿ ಹಿಂದುಳಿದಿಲ್ಲ, ಸಿಎಂ ಯಡಿಯೂರಪ್ಪ ಪುತ್ರ ರಾಘವೇಂದ್ರ ಸಂಸದ, ವಿಜಯೇಂದ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಪುತ್ರಿ ಅರುಣಾ ವೀರಶೈವ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಯಾಗಿದ್ದಾರೆ.

ಸಂಸದ ಉಮೇಶ್ ಜಾಧವ್ ಪುತ್ರ ಡಾ.ಅವಿನಾಶ್ ಜಾಧವ್ ಶಾಸಕ, ಜಗದೀಶ್ ಶೆಟ್ಟರ್ ಅವರ ಸಹೋದರ ಎಂಎಲ್ ಸಿ, ಸಚಿವ ಬಸವರಾಜ ಬೊಮ್ಮಾಯಿ ಅವರ ತಂದೆ ಮಾಜಿ ಸಿಎಂ ಆಗಿದ್ದವರು.

ಶಾಸಕ ರಘು ಮತ್ತು ಅರವಿಂದ ಲಿಂಬಾವಳಿ ಇಬ್ಬರು ಕೂಡ ಸಂಬಂಧದಲ್ಲಿ ಭಾವಮೈದುನ. ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿ ಮಾಜಿ ಸಂಸದ, ಸಿ ಎಂ ಉದಾಸಿ ಪುತ್ರ ಶಿವಕುಮಾರ್ ಉದಾಸಿ ಸಂಸದ, ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಅವರ ಸೋದರ ಸಂಬಂಧಿ ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ.

ರಾಜಕೀಯ ರಕ್ತ ಸಂಬಂಧಕ್ಕಿಂತ ಗಟ್ಟಿ ಎಂಬುದಕ್ಕ ಹಲವು ಉದಾಹರಣೆಗಳಿವೆ, ಮಾಜಿ ಸಿಎಂ ಬಂಗಾರಪ್ಪ ಪುತ್ರ ಕುಮಾರ್ ಬಂಗಾರಪ್ಪ ಬಿಜೆಪಿ ಶಾಸಕರಾಗಿದ್ದು ಅವರ ಮತ್ತೊಬ್ಬ ಪುತ್ರ ಮಧು ಬಂಗಾರಪ್ಪ ಜೆಡಿಎಸ್ ಮಾಜಿ ಶಾಸಕರಾಗಿದ್ದಾರೆ. ಇನ್ನೂ ರೆಡ್ಡಿ ಸಹೋದರರು ಕೂಡ ಇದರಿಂದ ಹೊರತಾಗಿಲ್ಲ, ಶ್ರೀರಾಮುಲು ಸಹೋದರಿ ಶಾಂತಾ ಮತ್ತು ಅವರ ಚಿಕ್ಕಪ್ಪ ಸಣ್ಣ ಪಕೀರಪ್ಪ ಕೂಡ ರಾಜಕೀಯದಲ್ಲಿದ್ದಾರೆ.

ಜೆಡಿಎಸ್ ನಲ್ಲಿ ಕುಟಂಬ ರಾಜಕೀಯದ ಕಾರುಬಾರು ಅಧಿಕವಾಗಿದ್ದು ಮೂರನೇ ತಲೆಮಾರು ಕೂಡ ರಾಜಕೀಯಕ್ಕಿಳಿದಿದೆ, ಜೆಡಿಎಸ್ ಸರ್ವೋಚ್ಚ ನಾಯಕ ಎಚ್.ಡಿ ದೇವೇಗೌಡ, ಮಾಜಿ ಪ್ರಧಾನಿ ಮತ್ತು ರಾಜ್ಯಸಭೆ ಸದಸ್ಯ,ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಸಂಸದ, ಮಕ್ಕಳಾದ ಕುಮಾರಸ್ವಾಮಿ ಮತ್ತು ರೇವಣ್ಣ ಶಾಸಕರು, ಸೊಸೆ ಅನಿತಾ ಕುಮಾರಸ್ವಾಮಿ
ಕೂಡ ಶಾಸಕಿ, ರೇವಣ್ಣ ಪತ್ನಿ ಭವಾನಿ ಜಿಲ್ಲಾ ಪಂಚಾಯತಿ ಸದಸ್ಯೆ, ದೇವೇಗೌಡರ ಬೀಗರಾದ ಡಿಸಿ ತಮ್ಮಣ್ಣ ಕೂಡ ಶಾಸಕ.

ಜಾರಕಿಹೊಳಿ ಸಹೋದರರು, ಜೊಲ್ಲೆ ದಂಪತಿಗಳು ಸಹಾನುಭೂತಿ ಆಧಾರದಲ್ಲಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ದಿವಂಗತ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರನ್ನು ಶಿರಾ ಉಪಚುನಾವಣೆಗೆ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು. ರಾಜಕೀಯದಲ್ಲಿದ್ದವರ ಕುಟುಂಬಸ್ಥರನ್ನು ಕಣಕ್ಕಿಳಿಸುವುದರಿಂದ ಲಾಭ ಹೆಚ್ಚು ಎಂಬುದನ್ನು ಪಕ್ಷಗಳು ಮನಗಂಡಿವೆ.

ಕೆಲವೊಮ್ಮೆ ಕುಟುಂಬದ ಹೆಸರು ಮುಖ್ಯವಾಗುತ್ತದೆ, ಆದರೆ ದೀರ್ಘಕಾಲದಲ್ಲಿ ಇದನ್ನು ಮುಂದುವರಿಸಿಕೊಂಡು ಹೋಗಬೇಕಾದ ಅವಶ್ಯಕತೆಯಿರುತ್ತದೆ, ಕೇವಲ ರಾಜಕೀಯ ವಂಶವಾಹಿ ಮುಂದುವರಿಸಿಕೊಂಡು ಹೋಗುವುದು ಸರಿಯಾಗುವುದಿಲ್ಲ, ಸದ್ಯ ಕುಟುಂಬ ರಾಜಕಾರಣ ಎಂಬುದು ಉದ್ಯಮವಾಗುತ್ತಿದೆ, ಇದು ರಾಜಕೀಯದಲ್ಲಿ ಹೆಚ್ಚು ಕಾಣುತ್ತಿದೆ ಎಂದು ಪ್ರೊ. ಸಂದೀಪ್ ಶಾಸ್ತ್ರಿ ಹೇಳಿದ್ದಾರೆ, ಪ್ರಜಾಪ್ರಭುತ್ವದಲ್ಲಿ ಇದು ಅನಾರೋಗ್ಯಕರ ಬೆಳವಣಿಗೆಯಾಗಿದೆ, ಹೀಗಾಗಿ ಇದಕ್ಕೆ ಪ್ರೋತ್ಸಾಹ ನೀಡಬಾರದು ಎಂದು ಮತ್ತೊಬ್ಬ ರಾಜಕೀಯ ತಜ್ಞ ಬಿಎಸ್ ಮೂರ್ತಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com