ಶಿರಾ, ಆರ್​​​.ಆರ್​​ ನಗರ ವಿಧಾನಸಭಾ ಉಪಚುನಾವಣೆ: ಕೊರೋನಾ ಭೀತಿ ನಡುವಲ್ಲೇ ಪ್ರಚಾರ ಕಾರ್ಯಕ್ಕೆ ರಾಜಕೀಯ ಪಕ್ಷಗಳ ಸಿದ್ಧತೆ!

ಶಿರಾ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಾಕ ನಿಗದಿಯಾಗಿದ್ದು, ಕೊರೋನಾ ಸೋಂಕು ಆತಂಕದ ನಡುವೆ ಪ್ರಚಾರ ಕಾರ್ಯ ನಡೆಸುವುದು ರಾಜಕೀಯ ನಾಯಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಶಿರಾ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಾಕ ನಿಗದಿಯಾಗಿದ್ದು, ಕೊರೋನಾ ಸೋಂಕು ಆತಂಕದ ನಡುವೆ ಪ್ರಚಾರ ಕಾರ್ಯ ನಡೆಸುವುದು ರಾಜಕೀಯ ನಾಯಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. 

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್, ಜೆಡಿಎಸ್ ನಾಯಕ ಹೆಚ್.ಡಿ.ರೇವಣ್ಣೆ ಹಾಗೂ ಇತರೆ ಪ್ರಮುಖ ರಾಜಕೀಯ ನಾಯಕರು ಕೊರೋನಾ ಸೋಂಕಿಗೊಳಗಾಗಿ ಈಗಷ್ಟೇ ಚೇತರಿಸಿಕೊಂಡಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರಿಗೆ ವಯಸ್ಸಾಗಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಪ್ರತೀಯೊಬ್ಬ ರಾಜಕೀಯ ನಾಯಕರಲ್ಲೂ ಕೊರೋನಾ ಸಾಕಷ್ಟು ಆತಂಕವನ್ನು ಸೃಷ್ಟಿಮಾಡಿದೆ. 

ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 2.28 ಲಕ್ಷಕ್ಕೆ ಏರಿಕೆಯಾಗಿದ್ದು, ಉಪಚುನಾವಣೆ ನಡೆಯಬೇಕಿರುವ ರಾಜರಾಜೇಶ್ವರಿ ನಗರ ಒಂದರಲ್ಲಿಯೇ 15,000ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಕಳೆದ 10 ದಿನಗಳಲ್ಲಿ ಬೆಂಗಳೂರಿನಲ್ಲಿ ದಾಖಲಾಗಿರುವ ಸೋಂಕಿತರಲ್ಲಿ ಶೇ.12ರಷ್ಟು ಸೋಂಕಿತರು ಈ ಕ್ಷೇತ್ರದಲ್ಲಿಯೇ ಪತ್ತೆಯಾಗಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸಲು ನಾಯಕರು ಆತಂಕ ಪಡುತ್ತಿದ್ದಾರೆ. 

ಆರೋಗ್ಯ ಸುರಕ್ಷತೆಯ ಜೊತೆಗೆ ಉಪಚುನಾವಣೆ ಕೂಡ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಪ್ರಮುಖವಾಗಿರುವ ಹಿನ್ನೆಲೆಯಲ್ಲಿ ಪಕ್ಷಗಳು ಮತದಾರರನ್ನು ತಲುಪಲು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಲು ಮುಂದಾಗುತ್ತಿವೆ. 

ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಪಕ್ಷನಾಯಕ ಸಿದ್ದರಾಮಯ್ಯ ಅವರು ಶೀಲ್ಡ್ ಇಲ್ಲದೆಯೇ ಮನೆಯಿಂದ ಹೊರಬಾರದಿರಲು ನಿರ್ಧರಿಸಿದ್ದಾರೆ. ಸಾಮಾಜಿಕ ಅಂತರಕ್ಕೂ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈ ನಡುವೆ ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಾಗಿರುವ ಡಿಕೆ.ಶಿವಕುಮಾರ್ ಅವರೂ ಕೂಡ ಆತಂಕದಲ್ಲಿದ್ದಾರೆ. ಇನ್ನು ದೇವೇಗೌಡ ಅವರು ಕೆಲ ತಿಂಗಳುಗಳಿಂದ ಮನೆಯಲ್ಲಿಯೇ ಇದ್ದು, ಫೋನ್ ಹಾಗೂ ಝ್ಯೂಮ್ ಆ್ಯಪ್ ಮೂಲಕ ನಾಯಕರೊಂದಿಗೆ ಸಭೆ, ಮಾತುಕತೆ ನಡೆಸುತ್ತಲಿದ್ದಾರೆ. ಪ್ರಸ್ತುತ ಮತದಾನ ನಡೆಯುವ ಈ ಎರಡೂ ಕ್ಷೇತ್ರಗಳೂ ಕೂಡ ಒಕ್ಕಲಿಗ ಪ್ರಾಬಲ್ಯವಿರುವ ಪ್ರದೇಶಗಳಾಗಿವೆ. ಹೀಗಾಗಿ ಶಿರಾ ಹಾಗೂ ರಾಜರಾಜೇಶ್ವರಿನಗರ ಎರಡೂ ಕ್ಷೇತ್ರವನ್ನು ತನ್ನ ಹಿಡಿತಕ್ಕೆ ಪಡೆದುಕೊಳ್ಳಲು ಜೆಡಿಎಸ್ ಯತ್ನಿಸುತ್ತಿದ್ದು, ಇ-ಪ್ರಚಾರ ನಡೆಸಲು ನಿರ್ಧರಿಸಿದೆ. 

ಈಗಾಗಲೇ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಬವನ್ನು ಡಿಜಿಟಲ್ ಸ್ಟ್ರೀಮಿಂಗ್ ಮಾಡುವ ಮೂಲಕ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಉಪ ಚುನಾವಣೆ ಪ್ರಚಾರವನ್ನು ವಿಡಿಯೋಗಳ ಜೊತೆಗೆ ಫೇಸ್ಬುಕ್, ಝೂಮ್, ಗೂಗಲ್ ನೆಟ್, ವಾಟ್ಸಾಪ್ ಬಳಕೆಯೊಂದಿಗೆ ಕಾರ್ಯಕರ್ತರ ವ್ಯಾಪ್ತಿ ವಿಸ್ತರಿಸಲು ಮುಂದಾಗುತ್ತಿದೆ. 

ಕೆಪಿಸಿಸಿ ಐಟಿ ಕ್ಷೇತ್ರದ ಮುಖ್ಯಸ್ಥ ಪ್ರಿಯಾಂಕ ಖರ್ಗೆಯವರು ಮಾತನಾಡಿ, ಸಾಮಾಜಿಕ ಅಂತರ ನಿಯಮ ಕಾಯ್ದುಕೊಂಡು ಪ್ರಚಾರ ನಡೆಸುವುದು ದೊಡ್ಡ ಸವಾಲಾಗಿದೆ. ಮತದಾರರನ್ನು ತಲುಪಲು ಪಕ್ಷ ತನ್ನದೇ ಹೊಸ ನಿರೂಪಣೆಯನ್ನು ಹೊಂದಿದೆ. ಜಿಟಲ್ ಪ್ರಚಾರ ಕೂಡ ಭವಿಷ್ಯದಲ್ಲಿ ಚುನಾವಣಾ ಕಾರ್ಯತಂತ್ರಗಳ ಅವಿಭಾಜ್ಯ ಅಂಗವಾಗಲಿದೆ, ಪ್ರತಿಯೊಬ್ಬರೂ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಮುಂದಾಗಲಿದ್ದಾರೆಂದು ಎಂದು ಹೇಳಿದ್ದಾರೆ. 

ಇನ್ನು ಬಿಜೆಪಿಯುತ ಈಗಾಗಲೇ ಪಕ್ಷದ ಕಾರ್ಯಕ್ರಮಗಳು ಹಾಗೂ ಪಕ್ಷದ ಸಂಘಟನಾ ಚಟುವಟಿಕೆಗಳಿಗೆ ಸಾಮಾಜಿಕ ಮಾಧ್ಯಮಗಳನ್ನು ಬಳಕೆ ಮಾಡಿಕೊಂಡಿದ್ದು, ಎರಡೂ ಕ್ಷೇತ್ರಗಳಲ್ಲಿ ಅಭಿಯಾನ ನಡೆಸಲು ಇದು ಸಹಾಯಕವಾಗಲಿದೆ. 

ಉಪಚುನಾವಣೆಯ ತಂತ್ರಗಳು ಹಾಗೂ ಸಾಮಾಜಿಕ ಮಾಧ್ಯಮಗಳ ಬಳಕೆ ಬಗ್ಗೆ ಚರ್ಚಿಸಲು ಶೀಘ್ರದಲ್ಲಿಯೇ ಸಭೆ ನಡೆಸಲಾಗುವುದು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಹೇಳಿದ್ದಾರೆ. 

ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಬಳಕೆಯ ಬಗ್ಗೆ ಪಕ್ಷವು ಹೈಕಮಾಂಡ್‌ನಿಂದ ನಿರ್ದೇಶನಗಳನ್ನು ಪಡೆಯಲಿದೆ. ಚುನಾವಣೆ ವೇಳೆ ರಾಜಕೀಯ ನಾಯಕರು ಮತ್ತು ಮತದಾರರ ಆರೋಗ್ಯವು ಅಪಾಯದಲ್ಲಿದ್ದು, ಕೊರೋನಾ ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಪ್ರಚಾರ ನಡೆಸುವುದು ಕಷ್ಟ ಎಂದು ಜೆಡಿಎಸ್ ನಾಯಕ ಸಾ ರಾ ಮಹೇಶ್ ಹೇಳಿದ್ದಾರೆ. 

ಮತದಾರರನ್ನು ತಲುಪಲು ಸಾಮಾಜಿಕ ಮಾಧ್ಯಮವನ್ನು ಬಳಸಲು, ಪಕ್ಷದ ಕೇಡರ್‌ಗಳಿಗೆ ಬೂತ್ ಮಟ್ಟದಲ್ಲಿ ತರಬೇತಿ ನೀಡಲು ಮತ್ತು ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಕೋರಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಭಾಷಣಗಳನ್ನು ಅಪ್‌ಲೋಡ್ ಮಾಡಲು ಪಕ್ಷವು ಸಾಧ್ಯವಿರುವ ಎಲ್ಲ ವಿಧಾನಗಳನ್ನು ಪರಿಶೀಲಿಸಲಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com