ಆರ್‌ ಆರ್‌ ನಗರ ಉಪ ಚುನಾವಣೆ: ಡಿಕೆ ರವಿ ಪತ್ನಿ ಕುಸುಮಾ ಕಾಂಗ್ರೆಸ್ ಅಭ್ಯರ್ಥಿ ಎಂದ ಸಿದ್ದರಾಮಯ್ಯ

ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ ರವಿ ಅವರ ಪತ್ನಿ ಕುಸುಮಾ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಮೈಸೂರು: ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ ರವಿ ಅವರ ಪತ್ನಿ ಕುಸುಮಾ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ತೀವ್ರ ಕುತೂಹಲ ಕೆರಳಿಸಿರುವ ಕರ್ನಾಟಕ ಉಪ ಚುನಾವಣೆ ಕಣ ದಿನಗಳೆದಂತೆ ರಂಗೇರುತ್ತಿದ್ದು, ಬೆಂಗಳೂರಿನ ಆರ್‌ ಆರ್‌ ನಗರ ಕ್ಷೇತ್ರಕ್ಕೆ ಕುಸುಮಾ ಅವರೇ ಕಣಕ್ಕಿಳಿಯುವ ವಿಶ್ವಾಸವಿದೆ. ಕುಸುಮಾ ಅವರನ್ನೇ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದೇವೆ. ಅವರೇ  ಅಭ್ಯರ್ಥಿಯಾಗಿ ಘೋಷಣೆಯಾಗುವ ಸಾಧ್ಯತೆ ಇದೆ. ಬುಧವಾರದೊಳಗೆ ಅಭ್ಯರ್ಥಿ ಹೆಸರು ಅಧಿಕೃತವಾಗಿ ಘೋಷಣೆ ಆಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಮಾತನಾಡಿದ ಅವರು, 'ಕುಸುಮಾ ಅವರ ಸ್ಪರ್ಧೆಗೆ ಯಾರು ಬೇಕಾದರೂ ವಿರೋಧ ವ್ಯಕ್ತಪಡಿಸಬಹುದು. ಆದರೆ, ನಮ್ಮ ಪಕ್ಷದ ಅಭ್ಯರ್ಥಿಗೆ ವೋಟ್‌ ಕೊಡಿ ಎಂದು ಕೇಳುವುದು ನಮ್ಮ ಕರ್ತವ್ಯ. ವಿರೋಧ ಮಾಡುವವರನ್ನು ನಾವು ಬೇಡ ಎನ್ನುವುದಿಲ್ಲ. ಆರ್‌ ಆರ್‌ ನಗರ ಹಾಗೂ ಶಿರಾ ಎರಡೂ  ಕ್ಷೇತ್ರದಲ್ಲಿ ನಾವೇ ಗೆಲ್ಲುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ದಸರಾ ಪೂಜೆಗೆ ಸೀಮಿತವಾಗಿರಲಿ
ಇದೇ ವೇಳೆ ಮೈಸೂರು ದಸರಾ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈ ಬಾರಿಯ ದಸರೆಯನ್ನು ಪೂಜೆಗೆ ಸೀಮಿತ ಮಾಡಿ ಎಂದರು. ಬೆಟ್ಟದಲ್ಲಿ ಉದ್ಘಾಟನೆ ಮಾಡಿ, ಅರಮನೆಯಲ್ಲಿ ಪೂಜೆ ಮಾಡಿ ಸಾಕು. ಸುಮ್ಮನೆ ಜನ ಸೇರಿಸಿ ಕೊರೊನಾ ಹಬ್ಬಲು ಕಾರಣವಾಗುವುದು ಬೇಡ. ಈಗಾಗಲೇ ಮೈಸೂರಿನಲ್ಲಿ  ಕೊರೊನಾ ಹೆಚ್ಚಾಗಿದೆ. ದಸರಾ ಆಚರಿಸಿ, ಆದರೆ ಅದಕ್ಕೆ ತುಪ್ಪ ಸುರಿಯಬೇಡಿ. ಈ ಬಾರಿಯ ದಸರಾ ಪೂಜೆಗೆ ಸೀಮಿತವಾಗಲಿ ಎಂದು ಅವರು ಮನವಿ ಮಾಡಿದರು.

ಯೋಗಿ ಆದಿತ್ಯಾನಾಥ್ ನಾಲಾಯಕ್
ಇನ್ನು ಹತ್ರಾಸ್‌ನಲ್ಲಿ ನಡೆದ ದಲಿತ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಆಗಿ ಮುಂದುವರಿಯಲು ನಾಲಾಯಕ್ ಎಂದರು. ಯೋಗಿ ಆದಿತ್ಯನಾಥ್ ವಿರುದ್ದ 27 ಪ್ರಕರಣಗಳು ದಾಖಲಾಗಿವೆ. ನಾಲ್ಕೈದು ಪ್ರಕರಣಗಳು  ದಾಖಲಾದರೆ ರೌಡಿ ಶೀಟರ್ ಎಂದು ಘೋಷಿಸುತ್ತಾರೆ. ಹೀಗಾಗಿ, ಯೋಗಿ ಆದಿತ್ಯನಾಥ್ ಕಾವಿ ಬಟ್ಟೆ ತೊಡಲು ಯೋಗ್ಯರಲ್ಲ. ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ಕೂಡಲೇ ಯೋಗಿ ಆದಿತ್ಯನಾಥ್ ಅವರನ್ನು ವಜಾಗೊಳಿಸಬೇಕು ಎಂದರು. ಪ್ರಧಾನಿ ಮೋದಿಗೆ ನವಿಲುಗಳಿಗೆ ಆಹಾರ ನೀಡಲು, ಟ್ರಂಪ್ ಅವರಿಗೆ  ಟ್ವೀಟ್ ಮಾಡಲು ಸಮಯವಿರುತ್ತದೆ. ಆದರೆ ಹತ್ರಾಸ್ ಘಟನೆ ಕುರಿತು ಮಾತನಾಡಲು ಸಮಯವಿಲ್ಲ. ನಿಜಕ್ಕೂ ದುರದೃಷ್ಟಕರ. ಯುಪಿಎ ಹತ್ರಾಸ್ ಸಂತ್ರಸ್ಥ ಕುಟುಂಬಕ್ಕೆ ಈಗಾಗಲೇ ಸಂಪೂರ್ಣ ಬೆಂಬಲ ಘೋಷಣೆ ಮಾಡಿದೆ ಎಂದು ಹೇಳಿದರು.

ಡಿಕೆಶಿ ಸಹೋದರರು ಮಾತ್ರ ಕಾಣುತ್ತಾರೆ
ಇದೇ ವೇಳೆ ಡಿಕೆ ಶಿವಕುಮಾರ್ ಅವರ ಮೇಲಿನ ಸಿಬಿಐ ದಾಳಿ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ತನಿಖಾ ಸಂಸ್ಥೆಗಳಿಗೆ ಬಿಜೆಪಿ ನಾಯಕರೇ ಕಾಣುವುದಿಲ್ಲವೇ.. ನಿಜಕ್ಕೂ ಅಚ್ಚರಿ ಎಂದು ವ್ಯಂಗ್ಯವಾಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com