ಡಿಕೆಶಿ ಭೇಟಿಯಾದ ಜಿಟಿಡಿ; ರಾಜಕೀಯ ಪ್ರೇರಿತ ದಾಳಿ ಎಂದ ಮಾಜಿ ಸಚಿವ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಮನೆ, ಕಚೇರಿ ಮೇಲೆ ಸಿಬಿಐ ದಾಳಿ ನಡೆದ ಹಿನ್ನೆಲೆಯಲ್ಲಿ ಅವರಿಗೆ ನೈತಿಕ ಬೆಂಬಲ ನೀಡುವ ಸಲುವಾಗಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಇಂದು ಡಿಕೆಶಿ ನಿವಾಸಕ್ಕೆ ಭೇಟಿ ನೀಡಿ ಧೈರ್ಯ ತುಂಬಿದರು.

Published: 07th October 2020 12:27 PM  |   Last Updated: 07th October 2020 12:37 PM   |  A+A-


JDS MLA GT Devegowda Meets KPCC President DK Shivakumar

ಡಿಕೆ ಶಿವಕುಮಾರ್ ಭೇಟಿಯಾದ ಜಿಟಿ ದೇವೇಗೌಡ

Posted By : Manjula VN
Source : UNI

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಮನೆ, ಕಚೇರಿ ಮೇಲೆ ಸಿಬಿಐ ದಾಳಿ ನಡೆದ ಹಿನ್ನೆಲೆಯಲ್ಲಿ ಅವರಿಗೆ ನೈತಿಕ ಬೆಂಬಲ ನೀಡುವ ಸಲುವಾಗಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಇಂದು ಡಿಕೆಶಿ ನಿವಾಸಕ್ಕೆ ಭೇಟಿ ನೀಡಿ ಧೈರ್ಯ ತುಂಬಿದರು.

ಭೇಟಿ ಬಳಿಕ ಜಿ.ಟಿ.ದೇವೇಗೌಡ ಮಾತನಾಡಿ, ಶಿವಕುಮಾರ್ ಅವರಿಗೆ ಸೇರಿದ 14 ಕಡೆಗಳಲ್ಲಿ ಸಿಬಿಐ ದಾಳಿ ನಡೆಸಿದ್ದು, ಪದೇ ಪದೇ ಈ ರೀತಿಯ ದಾಳಿಯಿಂದ ಶಿವಕುಮಾರ್ ಬಹಳ ನೊಂದಿದ್ದಾರೆ. ಶಿವಕುಮಾರ್ ಹಾಗೂ ತಾವು ಬಹಳ ವರ್ಷದ ಸ್ನೇಹಿತರು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೂ ದಾಳಿ ನಡೆದಿತ್ತು‌. ಐಟಿ ದಾಳಿ ನಡೆಸಿ ಶಿವಕುಮಾರ್ ಅವರನ್ನು ಬಂಧಿಸಿದ್ದರು. ಎಸ್. ಎಂ. ಕೃಷ್ಣಾ ಕಾಂಗ್ರೆಸ್ ಸಂಪುಟದಲ್ಲಿ ಶಿವಕುಮಾರ್ ತಮ್ಮನ್ನು ಮಹಾಮಂಡಲದ ಅಧ್ಯಕ್ಷರನ್ನಾಗಿ ಮಾಡಿದ್ದರು. ಯಾವುದೇ ಸರ್ಕಾರ ಇರಲಿ ಯೋಚನೆ ಮಾಡಬೇಕು, ಚುನಾವಣೆ ಘೋಷಣೆಯಾದ ಬಳಿಕ ಈ ರೀತಿ ದಾಳಿ ಮಾಡಿಸುವುದು ಸರಿ ಅಲ್ಲ. ಡಿ.ಕೆ. ಶಿವಕುಮಾರ್ ಪತ್ನಿ ನಮ್ಮ ಮೈಸೂರಿನವರು. ಅವರ ಕುಟುಂಬದ ಎಲ್ಲರಿಗೂ ಧೈರ್ಯ ತುಂಬಿದ್ದೇನೆ. ಇದು ರಾಜಕೀಯ ಪ್ರೇರಣೆ ದಾಳಿ ಎಂದು ಜನರು ಭಾವಿಸಿದ್ದಾರೆ ಎಂದರು.

ಜೆಡಿಎಸ್ ಪಕ್ಷದಿಂದ ನಾಯಕರಿಂದ ಅಂತರ ಕಾಯ್ದುಕೊಳ್ಳುತ್ತಿದ್ದೀರಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಜಿಟಿಡಿ, ಕೊರೊನಾದಿಂದಾಗಿ ಹೆಚ್ಚು ಓಡಾಡುವ ಹಾಗಿಲ್ಲ. ಎಲ್ಲವೂ ನಿಮಗೆ ಗೊತ್ತಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ತಾವು ಸಚಿವರಾಗಿದ್ದೆವು. ಮೈತ್ರಿ ಸರ್ಕಾರ 5 ವರ್ಷಗಳು ಇರಬೇಕೆಂದು ಕೆಲಸ ಮಾಡಿದೆವು. ಈಗ ನಾನು ಬರೀ ಜೆಡಿಎಸ್ ಶಾಸಕ ಮಾತ್ರ ಎಂದು ಮಾರ್ಮಿಕವಾಗಿ ನುಡಿದರು.

ಬಹಳ ವರ್ಷಗಳಿಂದ ಸ್ನೇಹಿತರಾಗಿರುವ ತಾವು ಮತ್ತು ಡಿ.ಕೆ.ಶಿವಕುಮಾರ್, ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನಿಸಿ, ಮುಂಬೈಗೂ ಸಹ ಹೋಗಿದ್ದೆವು. ಉಪಮುಖ್ಯಮಂತ್ರಿಯಾಗುವುದಾಗಿದ್ದರೆ ಬಿಜೆಪಿಯಿಂದ ಆಗಲೇ ಆಗಬಹುದಿತ್ತು. ಮೊದಲೇ ತಮಗೆ ಬಿಜೆಪಿಯಿಂದ ಆಫರ್ ಬಂದಿತ್ತು. ಆದರೆ ನಾವು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕೆಂದು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡೆವು. ಐದು ವರ್ಷ ಅವರೇ ಇರಬೇಕೆಂದು ಬಯಸಿದ್ದೆವು. ಅವರನ್ನು ನಾವೇ ಮುಖ್ಯಮಂತ್ರಿ ಮಾಡಿ ನಾವೇ ಅವರನ್ನು ಅಧಿಕಾರದಿಂದ ಇಳಿಸಲು ಪ್ರಯತ್ನಿಸಿದ್ದೆವು ಎನ್ನುವುದೆಲ್ಲ ಸುಳ್ಳು ಎಂದರು.

ಸದ್ಯ ಬಿಜೆಪಿ ಆಡಳಿತದಲ್ಲಿದೆ. ಚಾಮುಂಡೇಶ್ವರಿ ಕ್ಷೇತ್ರದ ಜನತೆ ಮುಂದಿನ ಚುನಾವಣೆಯಲ್ಲಿ ನನ್ನ ಬಗ್ಗೆ
ಸ್ಪರ್ಧೆ ನಿರ್ಧಾರ ಮಾಡುತ್ತಾರೆ. ಚುನಾವಣೆ ಬರಲು ಇನ್ನೂ ಎರಡೂವರೆ ವರ್ಷ ಇದೆ. ಅಲ್ಲಿಯವರೆಗೆ ನೋಡೋಣ ಎಂದರು.

ಡಿ.ಕೆ ಶಿವಕುಮಾರ್ ಮಾತನಾಡಿ, ಜಿ.ಟಿ. ದೇವೇಗೌಡ ತಮ್ಮ ಆತ್ಮೀಯ ಸ್ನೇಹಿತ. ರಾಜಕಾರಣವೇ ಬೇರೆ ಸ್ನೇಹವೇ ಬೇರೆ ಎಂದರು.

ಆದಿಚುಂಚನಗಿರಿ ನಿರ್ಮಲಾನಂದ ಸ್ವಾಮೀಜಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಲು ಇಚ್ಛಿಸದ ಶಿವಕುಮಾರ್, ಗುರು- ಶಿಷ್ಯರ ನಡುವೆ ನಡೆದ ಸಂಭಾಷಣೆ ಬಗ್ಗೆ ಹೇಳುವುದಿಲ್ಲ. ಇಂತಹ ಕಷ್ಟಕಾಲದಲ್ಲಿ ಎಲ್ಲರೂ ಬಂದು ಕೈ ಹಿಡಿಯುತ್ತಿರುವುದೇ ತಮಗೆ ಸಂತೋಷ ಎಂದರು.

ಇಂದು ಸಂಜೆಯೊಳಗೆ ಶಿರಾ ಹಾಗೂ ಆರ್.ಆರ್.ನಗರ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಅಖೈರುಗೊಳಿಸಿ, ಚುನಾವಣೆಗೆ ಉಸ್ತುವಾರಿಗಳನ್ನು ನೇಮಕ ಮಾಡಲಾಗುವುದೆಂದು ಡಿಕೆಶಿ ಹೇಳಿದರು.

Stay up to date on all the latest ರಾಜಕೀಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp