ಸರ್ಕಾರದ ಕಾರ್ಯವೈಖರಿ ಜನರಲ್ಲಿ ಅಸಮಾಧಾನವನ್ನುಂಟು ಮಾಡಿದ್ದು, ಚುನಾವಣೆ ಮೂಲಕ ಉತ್ತರ ನೀಡಬೇಕಿದೆ: ಡಿ.ಕೆ.ಶಿವಕುಮಾರ್

ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದ ಕಾರ್ಯವೈಖರಿ ಜನರಲ್ಲಿ ಅಸಮಾಧಾನವನ್ನುಂಟು ಮಾಡಿದ್ದು, ಉಪ ಚುನಾವಣೆ ಮೂಲಕ ಉತ್ತರ ನೀಡಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. 
ಡಿಕೆ. ಶಿವಕುಮಾರ್
ಡಿಕೆ. ಶಿವಕುಮಾರ್

ಬೆಂಗಳೂರು: ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದ ಕಾರ್ಯವೈಖರಿ ಜನರಲ್ಲಿ ಅಸಮಾಧಾನವನ್ನುಂಟು ಮಾಡಿದ್ದು, ಉಪ ಚುನಾವಣೆ ಮೂಲಕ ಉತ್ತರ ನೀಡಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಶಿರಾ ಹಾಗೂ ರಾಜರಾಜೇಶ್ವರಿ ನಗರದ ಉಪಚುನಾವಣೆ ಕುರಿತ ಸಿದ್ಧತೆ ಹಾಗೂ ಸರ್ಕಾರದ ಕಾರ್ಯವೈಖರಿ ಕುರಿತಂತೆ ಮಾತನಾಡಿದ್ದಾರೆ. 

ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ನಿಮ್ಮ ನಾಯಕತ್ವದಲ್ಲಿ ಕಾಂಗ್ರೆಸ್ ಚುನಾವಣೆಯನ್ನು ಎದುರಿಸುತ್ತಿದೆ. ಈ ಉಪಚುನಾವಣೆ ನಿಮಗೆಷ್ಟು ಮುಖ್ಯ? 
ಇದು ಕೇವಲ ನನ್ನ ನಾಯಕತ್ವಕ್ಕೆ ಸಂಬಂಧಿಸಿದ್ದಲ್ಲ. ಸಂಘಟಿತ ನಾಯಕತ್ವಕ್ಕೆ ಸಂಬಂಧಿಸಿದ ಚುನಾವಣೆಯಾಗಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದ್ದು, ಸರ್ಕಾರ ಮಾಡುತ್ತಿರುವುದು ಸರಿಯಲ್ಲ ಎಂಬ ಸಂದೇಶವನ್ನು ರವಾನಿಸಬೇಕಿದೆ. 

ಈ ಬಾರಿಯ ಚುನಾವಣೆ ವೇಳೆ ಕಾಂಗ್ರೆಸ್ ಯಾವೆಲ್ಲಾ ವಿಚಾರಗಳನ್ನು ಪ್ರಸ್ತಾಪಿಸಲಿದೆ? 
ರಾಜ್ಯ ಸರ್ಕಾರದ ವರ್ಚಸ್ಸಿನ ಮೇಲೆ ತೀವ್ರ ಹೊಡೆತ ಬೀಳುತ್ತಿದೆ. ಕೊರೋನಾ ಪರಿಸ್ಥಿತಿ, ಪ್ರವಾಹ, ಆರ್ಥಿಕ ನಿಭಾಯಿಸುವುದು ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಸರ್ಕಾರ ವಿಫಲವಾಗಿದೆ. ಉದ್ಯೋಗ ಸೃಷ್ಟಿಸುವಲ್ಲಿ ವಿಫಲ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ರಾಜ್ಯದ ಪರಿಸ್ಥಿತಿ ಕಂಡು ಜನರು ಭೀತಿಗೊಳಗಾಗಿದ್ದಾರೆ. ಜನರಿಗೆ ಸರ್ಕಾರದಿಂದ ಯಾವುದೇ ಸಹಾಯಗಳೂ ಸಿಗುತ್ತಿಲ್ಲ. ಮಕ್ಕಳು ಸುರಕ್ಷಿತದಿಂದಿಲ್ಲ. ಅವರ ಭವಿಷ್ಯದ ಕುರಿತು ಜನರು ಚಿಂತಿತರಾಗುತ್ತಿದ್ದಾರೆ. ಎಲ್ಲಾ ವಿಚಾರಗಳ ಕುರಿತು ಜನರು ಚಿಂತನೆಗಳನ್ನು ನಡೆಸಬೇಕಿದೆ. 

ಈ ಚುನಾವಣಾ ಫಲಿತಾಂಶಗಳು ಸರ್ಕಾರ ಅಥವಾ ಪ್ರತಿಪಕ್ಷಗಳಿಗೆ ಸಂಖ್ಯೆಗಳ ವಿಷಯದಲ್ಲಿ ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ ...
ಇದು ಸಂಖ್ಯೆಯ ಪ್ರಶ್ನೆಯಲ್ಲ. ಜನರು ತಮ್ಮ ಅಸಂತೋಷವನ್ನು ಸರ್ಕಾರಕ್ಕೆ ತಿಳಿಸಬೇಕಿದೆ. ಸಂತೋಷದಿಂದ ಇದ್ದರೆ ಸರಿ. ಇಲ್ಲದೇ ಹೋದರೆ, ಚುನಾವಣೆಯ ಫಲಿತಾಂಶದ ಮೂಲಕ ಸರ್ಕಾರಕ್ಕೆ ಉತ್ತರ ನೀಡಬೇಕಿದೆ. 

ಆರ್.ಆರ್.ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಯಾವುದೇ ರಾಜಕೀಯ ಅನುಭವವಿಲ್ಲದೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಈ ತಂತ್ರ ಕೆಲಸ ಮಾಡುತ್ತದೆ ಎಂದೆನಿಸುತ್ತಿದೆಯೇ? 
ಹೌದು, ಇದು ಖಂಡಿತವಾಗಿಯೂ ಕೆಲಸ ಮಾಡುತ್ತದೆ. ಹೊಸ ಮುಖಗಳು ಹಾಗೂ ಯುವ ಪೀಳಿಗೆಗೆ ನಾವು ಅವಕಾಶವನ್ನು ನೀಡಬೇಕು. ಇಂದಿನ ಯುವಕರು ದೇಶದ ಭವಿಷ್ಯವಾಗಿದ್ದಾರೆ. ಅವರಿಗೆ ನಾವು ಅವಕಾಶ ನೀಡಲೇಬೇಕು. 

ಇಬ್ಬರು ಉಪಮುಖ್ಯಮಂತ್ರಿಗಳು ಸೇರಿದಂತೆ ದೊಡ್ಡ ತಂಡವನ್ನು ನಿಯೋಜಿಸುವ ಮೂಲಕ ಶಿರಾದಲ್ಲಿ ಗೆಲುವು ಸಾಧಿಸಲು ಬಿಜೆಪಿ ಭಾರೀ ತಂತ್ರಗಳನ್ನು ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಯಾವ ರೀತಿಯ ಸಿದ್ಧತೆಗಲನ್ನು ನಡೆಸಲಿದೆ? 
ಶಿರಾ ಮತ್ತು ಆರ್.ಆರ್.ನಗರ ಎರಡೂ ಕ್ಷೇತ್ರದಲ್ಲೂ ಗೆಲುವು ಸಾಧಿಸುವ ಸಂಪೂರ್ಣ ವಿಶ್ವಾಸ ನನಗಿದೆ. ಎರಡು ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಲು ಬಿಜೆಪಿ ಇನ್ನೆಷ್ಟು ಕಾಲಾವಕಾಶ ತೆಗೆದುಕೊಳ್ಳಲಿದೆ? ಅಭ್ಯರ್ಥಿಗಳನ್ನು ಘೋಷಿಸುವಲ್ಲಿಯೇ ವಿಳಂಬ ಮಾಡುತ್ತಿರುವ ಅವರು, ಸಮಸ್ಯೆಯಲ್ಲಿರುವುದನ್ನು ತೋರುತ್ತಿದೆ. ಎರಡೂ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ. 

ನಿಮ್ಮ ಆಸ್ತಿ ಮೇಲೆ ಸಿಬಿಐ ನಡೆಸಿದ ದಾಳಿ ಈ ಬಾರಿಯ ಚುನಾವಣೆಯ ವಿಚಾರವಾಗಲಿದೆಯೇ? 
ಚುನಾವಣೆ ವೇಳೆ ಸಿಬಿಐ ದಾಳಿ ವಿಚಾರವನ್ನು ತೆಗೆದುಕೊಳ್ಳುವುದು ನನಗಿಷ್ಟವಿಲ್ಲ. ಆ ರೀತಿ ನಾನು ಮಾಡುವುದೂ ಇಲ್ಲ. ಜನರೇ ಈ ಬಗ್ಗೆ ನಿರ್ಧರಿಸಲಿ. ನಾನು ಯಾವುದೇ ತಪ್ಪು ಮಾಡಿಲ್ಲ ಎಂಬುದು ನನಗೆ ಗೊತ್ತಿದೆ. ಏನೇ ಬಂದರೂ ಅದನ್ನು ನಾನು ಎದುರಿಸುತ್ತೇನೆ. ಜನರ ಸಮಸ್ಯೆ ಬಗ್ಗೆಯಷ್ಟೇ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com