ಸಚಿವ ಶ್ರೀರಾಮುಲು ಖಾತೆ ಬದಲಾವಣೆ ಬೆನ್ನಲ್ಲೇ ಅಸಮಾಧಾನ ಸ್ಫೋಟ; ಖಾತೆ ವಾಪಸ್ ಗೆ ಕಾರಜೋಳ ಸಹಮತ!

ರಾಜ್ಯ ಸಚಿವ ಸಂಪುಟ ಪುನರ್ ರಚನೆ,ನಾಯಕತ್ವ ಬದಲಾವಣೆ ಕಸರತ್ತು ನಡೆದಿರುವಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಖಾತೆಗಳನ್ನು ಬದಲಾವಣೆ ಮಾಡಿರುವುದಕ್ಕೆ ಸಚಿವ ಶ್ರೀರಾಮುಲು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಶ್ರೀರಾಮುಲು
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಶ್ರೀರಾಮುಲು

ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನರ್ ರಚನೆ, ನಾಯಕತ್ವ ಬದಲಾವಣೆ ಕಸರತ್ತು ನಡೆದಿರುವಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಖಾತೆಗಳನ್ನು ಬದಲಾವಣೆ ಮಾಡಿರುವುದಕ್ಕೆ ಸಚಿವ ಶ್ರೀರಾಮುಲು ಅಸಮಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಖಾತೆ ಬದಲಾವಣೆಗೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಶ್ರೀರಾಮುಲು ಚರ್ಚೆ ನಡೆಸಲಿದ್ದಾರೆ.

ಸಚಿವ ಶ್ರೀರಾಮುಲು ಅವರ ಖಾತೆ ದಿಢೀರ್ ಬದಲಾವಣೆಗೆ ಸಂಬಂಧ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಶಾಸಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಖಾತೆ ಬದಲಾವಣೆಗೆ ಮೊದಲು ತಮ್ಮನ್ನು ಕನಿಷ್ಟ ಸೌಜನ್ಯಕ್ಕಾದರೂ ಮುಖ್ಯಮಂತ್ರಿ ಚೆರ್ಚೆ ನಡೆಸಲಿಲ್ಲ.ಏಕಾಏಕಿ ಖಾತೆ ಬದಲಾವಣೆ ಮಾಡುವ ಮೂಲಕ ತಮ್ಮನ್ನು ಅಪಮಾನಿಸಿದ್ದಾರೆ ಎಂದು ಆಪ್ತರ ಬಳಿ ಸಚಿವ ರಾಮುಲು ಅಳಲು ತೋಡಿಕೊಂಡಿದ್ದಾರೆ.

ಖಾತೆ ಬದಲಾವಣೆ ಬಗ್ಗೆ ಹಲವಾರು ಶಾಸಕರು ಸಚಿವ ರಾಮುಲುಗೆ ಕರೆ ಮಾಡಿ, ಖಾತೆ ಬದಲಾವಣೆ ಮಾಡುವ ಬಗ್ಗೆ ಸಿಎಂ ನಿಮ್ಮ ಬಳಿ ಚೆರ್ಚಿಸಿದ್ದಾರೆಯೇ ಎಂದು ಹಲವು ಶಾಸಕರು ಪ್ರಶ್ನಿಸಿದ್ದಾರೆ. ಕೊರೊನಾ ಸೋಂಕು ವ್ಯಾಪಿಸಿದಾದ ಸಂಪುಟದ ಸಚಿವರು ಯಾರೂ ಜನರ ಸಮಸ್ಯೆ ಆಲಿಸಲಿಲ್ಲ. ಆ ಸಂದರ್ಭ ದಲ್ಲಿ ಅಪಾಯವನ್ನು ಲೆಕ್ಕಿಸದೆ ರಾಜ್ಯದ್ಯಾಂತ ಪ್ರವಾಸ ಮಾಡಿದ್ದೀರಿ.ಕೋವಿಡ್ ಆಸ್ಪತ್ರೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಳ್ಳಾರಿ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಕೊರೊನಾ ಪಾಸಿಟಿವ್ ಆದವರನ್ನು ಭೇಟಿ ಮಾಡಿ ಆತ್ಮವಿಶ್ವಾಸ ತುಂಬುವ ಪ್ರಯತ್ನವನ್ನು ಮಾಡಿದ್ದೀರಿ ಎಂದು ಬಳ್ಳಾರಿ ಮೂಲದ ಶಾಸಕರು ಶ್ರೀರಾಮುಲು ಅವರೊಂದಿಗೆ ಚೆರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ನಿಮಗೆ ಕೊರೊನಾ ವೈರಸ್ ಪಾಸಿಟಿವ್ ಆದಾಗ ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುವ ಮೂಲಕ ಜನ ಪ್ರತಿನಿಧಿಗಳಿಗೆ ಮಾದರಿ ಆಗಿದ್ದೀರಿ. ಈಗ ಏಕಾಏಕಿ ನಿಮ್ಮ ಖಾತೆಯನ್ನು ಏಕೆ ಬದಲಾವಣೆ ಮಾಡಿದ್ದಾರೆ. ಇದರ ಹಿಂದಿರುವವರು ಯಾರು,ಉದ್ದೇಶಪೂರ್ವಕವಾಗಿ ನಿಮ್ಮ ಖಾತೆ ಬದಲಾವಣೆ ಮಾಡುವ ಮೂಲಕ ಯಾವ ಸಂದೇಶ ನೀಡುತ್ತಿದ್ದಾರೆ ಎಂದು ಸರಣಿ ಪ್ರಶ್ನೆಗಳನ್ನು ರಾಮುಲುಗೆ ಶಾಸಕರು ಕೇಳಿದ್ದಾರೆ.

ರಾಮುಲು ಬೆಂಬಲಿತ ಶಾಸಕರ ಮಾತಿಗೆ ಸಚಿವ ರಾಮುಲು,ಖಾತೆ ಬದಲಾವಣೆ ವಿಚಾರ ತಮಗೆನೂ ಗೊತ್ತಿಲ್ಲ .ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ. ಅವರ ಅಭಿಪ್ರಾಯ ಕೇಳಿದ ಬಳಿಕ ಮುಂದಿನ ವಿಚಾರ ಚೆರ್ಚಿಸೋಣವೆಂದಿದ್ದಾರೆ. ಸುಗಮ ಆಡಳಿತಕ್ಕೆ ಹಾಗೂ ಖಾತೆ ನಿರ್ವಹಣೆಗೆ ಕೆಲವರ ಅನುಮತಿ ಅಗತ್ಯವಿತ್ತು.ಆದರೀಗ ಆರೋಗ್ಯ ಖಾತೆ ಬದಲಾವಣೆ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ ಎಂದೂ ಶ್ರೀರಾಮುಲು ಹೇಳಿದ್ದಾರೆ ಎನ್ನಲಾಗಿದೆ.

ಸಮಾಜ ಕಲ್ಯಾಣ ಇಲಾಖೆ ಖಾತೆ ವಾಪಸ್ ಪಡೆದಿರುವುದಕ್ಕೆ ಡಿಸಿಎಂ ಗೋವಿಂದ ಕಾರಜೋಳ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ ಕೋವಿಡ್ ವೇಳೆ ಶಾಲಾ ಮಕ್ಕಳಿಗೆ ಶಿಕ್ಷಣ, ವಸತಿ, ಸೌಲಭ್ಯ ಕಲ್ಪಿಸಲು ಸಾಧ್ಯವಾಗಲಿಲ್ಲವೆಂದು ಬೇಸರವನ್ನು ವ್ಯಕ್ತಪಡಿಸುವ ಮೂಲಕ ಖಾತೆ ಬದಲಾವಣೆ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿ ದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com