ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ರೊಂದಿಗೆ ನೇರ ಹಣಾಹಣಿ, ಆದರೆ ಗೆಲ್ಲುವ ವಿಶ್ವಾಸವಿದೆ: ರಾಜೇಶ್ ಗೌಡ

ಶಿರಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಡಾ ಸಿ ಪಿ ರಾಜೇಶ್ ಗೌಡ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು ಹೊಸದು ಇರಬಹುದು. ಆದರೆ ರಾಜಕೀಯ ಜೀವನ ಅವರಿಗೆ ಹೊಸದಲ್ಲ.
ಶಿರಾದಲ್ಲಿ ರಾಜೇಶ್ ಗೌಡ ಬಿಜೆಪಿಗೆ ಸೇರಿದ್ದ ಸಂದರ್ಭ
ಶಿರಾದಲ್ಲಿ ರಾಜೇಶ್ ಗೌಡ ಬಿಜೆಪಿಗೆ ಸೇರಿದ್ದ ಸಂದರ್ಭ

ತುಮಕೂರು: ಶಿರಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಡಾ ಸಿ ಪಿ ರಾಜೇಶ್ ಗೌಡ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು ಹೊಸದು ಇರಬಹುದು. ಆದರೆ ರಾಜಕೀಯ ಜೀವನ ಅವರಿಗೆ ಹೊಸದಲ್ಲ.

ರಾಜೇಶ್ ಗೌಡ ಅವರ ತಂದೆ ಚಿರತಹಳ್ಳಿ ಮುಡಲಗಿರಿಯಪ್ಪ ಮೂರು ಬಾರಿ ಚಿತ್ರದುರ್ಗ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿದ್ದರು. ಶಿರಾ ಕ್ಷೇತ್ರದಿಂದಲೂ ಒಂದು ಬಾರಿ ಶಾಸಕರಾಗಿದ್ದರು. ಇವರ ಚಿಕ್ಕಪ್ಪ ಪಿ ಮುದ್ಲೇಗೌಡ ಸಹ ಶಿರಾ ಕ್ಷೇತ್ರದ ಸ್ವತಂತ್ರ ಶಾಸಕರಾಗಿದ್ದರು.

2016ರಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಡಾ ಯತೀಂದ್ರ ನಿರ್ದೇಶಕರಾಗಿದ್ದಾಗ ಲ್ಯಾಬೊರೇಟರಿ ಸ್ಥಾಪನೆ ವಿಚಾರದಲ್ಲಿ ಟೆಂಡರ್ ಕರೆದ ವಿಷಯದಲ್ಲಿ ವಿವಾದವುಂಟಾಗಿತ್ತು. ರಾಜೇಶ್ ಗೌಡ ನಿರ್ದೇಶಕರಾಗಿರುವ ಮ್ಯಾಟ್ರಿಕ್ಸ್ ಗೆ ಟೆಂಡರ್ ನೀಡಿದ್ದಕ್ಕೆ ಅಂದು ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದಂತೆ ಇಂದಿನ ಶಾಸಕರಾಗಿರುವ ಡಾ ಯತೀಂದ್ರ ಕಂಪೆನಿ ತೊರೆದಿದ್ದರು.

ಈ ಸಂದರ್ಭದಲ್ಲಿ ರಾಜೇಶ್ ಗೌಡ ಶಿರಾ ಕ್ಷೇತ್ರದ ಉಪ ಚುನಾವಣೆ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದಾರೆ.
ಕಾಂಗ್ರೆಸ್ ಶಾಸಕ ಡಾ ಯತೀಂದ್ರ ಈಗಲೂ ನಿಮ್ಮ ಸಂಪರ್ಕದಲ್ಲಿದ್ದಾರಾ?
ಪಕ್ಷದ ಸಿದ್ದಾಂತ ವಿಚಾರದಲ್ಲಿ ಭಿನ್ನತೆಯಿದ್ದರೂ ನಾವು ಈಗಲೂ ನಿಕಟ ಸ್ನೇಹಿತರು. ನಾನು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಸ್ವೀಕರಿಸಲಿಲ್ಲ. ನಾನು ಮತ್ತು ಯತೀಂದ್ರ ಮಾತನಾಡದೆ ಬಹಳ ಸಮಯಗಳಾಯಿತು. 2016ರಲ್ಲಿ ಡಾ ಯತೀಂದ್ರ ನಮ್ಮ ಕಂಪೆನಿಯ ನಿರ್ದೇಶಕ ಸ್ಥಾನದಿಂದ ನಿರ್ಗಮಿತರಾದರು. ಈಗ ನನ್ನ ಪತ್ನಿ ಡಾ ಎಂ ಯು ತೇಜಸ್ವಿನಿ ಅದನ್ನು ನೋಡಿಕೊಳ್ಳುತ್ತಿದ್ದಾರೆ.

ನಿಮ್ಮ ಕಂಪೆನಿಗೆ ಟೆಂಡರ್ ನೀಡಿದ್ದಕ್ಕೆ ಅಂದು ಬಿಜೆಪಿ ವಿರೋಧಿಸಿತ್ತಲ್ಲವೇ?
-ಹೌದು, ಆದರೆ ನಾವು ಉದ್ಯಮಕ್ಕೆ ರಾತ್ರಿ-ಹಗಲಾಗುವುದರೊಳಗೆ ಬಂದವರಲ್ಲ. ಕಡಿಮೆ ಬಿಡ್ಡಿಂಗ್ ಮಾಡಿ ನಮಗೆ ಟೆಂಡರ್ ಸಿಕ್ಕಿತ್ತು. ಪಿಪಿಪಿ ಮಾದರಿಯ ಲ್ಯಾಬೊರೇಟರಿ ಸಾವಿರಾರು ಜನಕ್ಕೆ ಸಹಾಯವಾಯಿತು. ನಮ್ಮದು ಎನ್ ಎಬಿಎಲ್ ಅನುಮೋದಿತ ಲ್ಯಾಬೊರೇಟರಿಯಾಗಿದ್ದು ರಾಜಾಜಿನಗರದ ಇಎಸ್ಐ ಆಸ್ಪತ್ರೆ, ಮುಂಬೈಯಲ್ಲಿ ಕೂಡ ನಮ್ಮ ಸೌಲಭ್ಯಗಳನ್ನು ಸ್ಥಾಪಿಸಿದ್ದೇವೆ.

ಚುನಾವಣಾ ರಾಜಕೀಯ ನಿಮಗೆ ಇದು ಮೊದಲ ಸಲ, ಸವಾಲು ಏನಿದೆ?
-ಇದೇ ಮೊದಲ ಸಲ ಪಕ್ಷದ ಸದಸ್ಯತ್ವ ಪಡೆದು ಚುನಾವಣಾ ರಾಜಕೀಯಕ್ಕೆ ಇಳಿದಿದ್ದೇನೆ. ಕಳೆದ ಎರಡೂವರೆ ವರ್ಷಗಳಿಂದ ಬಗೆಹರಿಸದಿರುವ ಸಾಕಷ್ಟು ವಿಷಯಗಳು, ಸಮಸ್ಯೆಗಳು ಕ್ಷೇತ್ರದಲ್ಲಿವೆ. ನನ್ನ ಮೇಲೆ ನಂಬಿಕೆಯಿಟ್ಟು ಬಿಜೆಪಿ ನಾಯಕರು ಟಿಕೆಟ್ ನೀಡಿದ್ದಾರೆ, ನನ್ನ ಮೇಲೆ ಸಾಕಷ್ಟು ಜವಾಬ್ದಾರಿಗಳಿವೆ.

ನಿಮ್ಮ ಆದ್ಯತೆಗಳೇನು?
ನನ್ನ ಮೊದಲ ಆದ್ಯತೆ ಜಿಲ್ಲೆಗೆ, ಕ್ಷೇತ್ರಕ್ಕೆ ಶಾಶ್ವತ ನೀರಾವರಿ ಯೋಜನೆ ತರುವುದು.ನಾನು ಭೇಟಿ ಕೊಟ್ಟ ಗ್ರಾಮಗಳಲ್ಲೆಲ್ಲ ರೈತರು, ಜನರು ನೀರಾವರಿ ಯೋಜನೆಗೆ ಒತ್ತಾಯಿಸುತ್ತಿದ್ದಾರೆ.

ರಾಜಕೀಯಕ್ಕೆ ಬರಲು ಕಾರಣವೇನು?
ಹಲವು ವರ್ಷಗಳಿಂದ ಸಾಮಾಜಿಕ ಕಾರ್ಯದಲ್ಲಿದ್ದೆ. ಶಿರಾದಿಂದ ಯಾರೇ ಬಂದು ನನ್ನ ಲ್ಯಾಬೊರೇಟರಿಗೆ ಭೇಟಿ ಕೊಟ್ಟವರು, ಬೆಂಗಳೂರಿನಿಂದ ವೈದ್ಯಕೀಯ ಸೌಲಭ್ಯಕ್ಕೆ ಬಂದವರಿಗೆ ಉಚಿತವಾಗಿ ಸಿಗುತ್ತದೆ. ನನ್ನ ಸಮಾಜ ಸೇವೆಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಬೇಕೆಂದು ಶಿರಾ ಕ್ಷೇತ್ರದ ಜನರು ಬಯಸಿದ್ದರು.

ನಿಮ್ಮ ತಂದೆ ಮತ್ತು ಚಿಕ್ಕಪ್ಪ ಶಿರಾ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಟಿ ಬಿ ಜಯಚಂದ್ರ ಆರೋಪಿಸಿದ್ದಾರೆ, ಏನು ಹೇಳುತ್ತೀರಿ?
ಈ ಆರೋಪ ನಿರಾಕರಿಸುತ್ತೇನೆ, ನಾನು ಭೇಟಿಯಾದಾಗಲೆಲ್ಲ ಶಿರಾ ಕ್ಷೇತ್ರದ ಜನರು ನನ್ನ ತಂದೆ ಮತ್ತು ಚಿಕ್ಕಪ್ಪ ಮಾಡಿದ ಕೆಲಸವನ್ನು ತೋರಿಸುತ್ತಿದ್ದರು. ನನ್ನ ತಂದೆ ಯಾವತ್ತಿಗೂ ಜನರೊಂದಿಗೆ ಗುರುತಿಸಿಕೊಂಡವರು. ಅಂದು ಸಂಸದರಿಗೆ, ಶಾಸಕರಿಗೆ ಸಿಗುತ್ತಿದ್ದ ಅನುದಾನ ಕಡಿಮೆಯಿತ್ತು. ಇತಿಮಿತಿಯೊಳಗೆ ಸಹ ಅವರು ಸಾಕಷ್ಟು ಕೆಲಸಗಳನ್ನು ಜನರಿಗೆ ಮಾಡಿದ್ದಾರೆ.

ನಿಮ್ಮ ಪ್ರತಿಸ್ಪರ್ಧಿ ಬಗ್ಗೆ ಏನು ಹೇಳುತ್ತೀರಿ?
ಕಾಂಗ್ರೆಸ್ ಪಕ್ಷದ ನಾಯಕ ಟಿ ಬಿ ಜಯಚಂದ್ರ ನನಗೆ ಪ್ರಮುಖ ಪ್ರತಿಸ್ಪರ್ಧಿ. ನನ್ನ ಮತ್ತು ಅವರ ಮಧ್ಯೆ ನೇರ ಹಣಾಹಣಿಯಾಗಿದ್ದು ನಾನು ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com