ಶಿರಾ ಬಿಜೆಪಿಗೆ ಕಷ್ಟ; ಆರ್ ಆರ್ ನಗರ ಮುನಿರತ್ನಗೆ ಹ್ಯಾಟ್ರಿಕ್ ಅದೃಷ್ಟ!

ಕೊರೋನಾ ಮಹಾಮಾರಿ ದೇಶವನ್ನು, ರಾಜ್ಯವನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಕಾಲಘಟ್ಟದಲ್ಲಿ, ಕೊರೆಯುವ ಚಳಿಯಲ್ಲಿ ಯಾರಿಗೂ ಬೇಡವಾಗಿದ್ದ ಎರಡು ಉಪ ಚುನಾವಣೆಗಳು ಮನೆ ಬಾಗಿಲಿಗೆ ಬಂದು ನಿಂತಿದೆ. ಮುಂದಿನ ತಿಂಗಳ 3ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರ ತುಮಕೂರು  ಜಿಲ್ಲೆಯ ಶಿರಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ.

Published: 22nd October 2020 11:53 AM  |   Last Updated: 22nd October 2020 02:22 PM   |  A+A-


Munirathna1

ಮುನಿರತ್ನ

Posted By : Srinivasamurthy VN
Source : UNI

ಬೆಂಗಳೂರು: ಕೊರೋನಾ ಮಹಾಮಾರಿ ದೇಶವನ್ನು, ರಾಜ್ಯವನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಕಾಲಘಟ್ಟದಲ್ಲಿ, ಕೊರೆಯುವ ಚಳಿಯಲ್ಲಿ ಯಾರಿಗೂ ಬೇಡವಾಗಿದ್ದ ಎರಡು ಉಪ ಚುನಾವಣೆಗಳು ಮನೆ ಬಾಗಿಲಿಗೆ ಬಂದು ನಿಂತಿದೆ. ಮುಂದಿನ ತಿಂಗಳ 3ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರ ತುಮಕೂರು  ಜಿಲ್ಲೆಯ ಶಿರಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ.

ರಾಜ್ಯದ ಮಟ್ಟಿಗೆ ಈ ಎರಡು ಚುನಾವಣೆಗಳು ಅಷ್ಟೇನು ಮಹತ್ವ ಅಲ್ಲ ಎಂದು ಕೊಂಡರೂ ಬೇರೆ ಕಾರಣಗಳಿಂದ ನೋಡಿದರೆ ಈ ಎರಡು ಚುನಾವಣೆಗಳು ಬಹಳ ಪ್ರಾಮುಖ್ಯತೆ ಪಡೆದು ಜನರ ಗಮನ ಸೆಳೆಯುತ್ತಿದೆ. ಇದಕ್ಕೆ ಮುಖ್ಯಕಾರಣ ಎಂದರೆ ನವೆಂಬರ್ 3 ರಂದು ವಿಶ್ವದದೊಡ್ಡಣ್ಣ ಅಮೆರಿಕ ಅಧ್ಯಕ್ಷೀಯ  ಚುನಾವಣೆ ನಡೆಯುತ್ತಿದೆ. ಅದೇ ದಿನ ಶಿರಾ ಮತ್ತುರಾಜರಾಜೇಶ್ವರಿ ನಗರದಲ್ಲಿ ಚುನಾವಣೆ ನಡೆಯುತ್ತಿರುವುದು ಕಾಕತಾಳೀಯ ಎನ್ನಬಹುದು. ಭಾರತದ ಚುನಾವಣಾ ಇತಿಹಾಸದಲ್ಲಿ ಅಮೆರಿಕಾ ಚುನಾವಣೆಯ ದಿನವೇ ಭಾರತದಲ್ಲಿ ಚುನಾವಣೆ ನಡೆಯುತ್ತಿರುವುದು ಬಹಳ ಅಪರೂಪದ ಪ್ರಸಂಗ. ಹೀಗಾಗಿ ಈ ಎರಡೂ  ಚುನಾವಣೆಗಳು ಬೇರೆ ಕಾರಣಗಳಿಂದ ಮಹತ್ವ ಪಡೆದುಕೊಂಡಿರುವುದು ಸ್ಪಷ್ಟವಾಗಿದೆ.

ಇನ್ನು ಶಿರಾದಲ್ಲಿ ಯಾರುಗೆಲ್ಲುತ್ತಾರೆ? ರಾಜರಾಜೇಶ್ವರಿದೇವಿಯ ಕೃಪಾಕಟಾಕ್ಷ ಯಾರ ಪಾಲಿಗೆ ಒಲಿಯಲಿದೆ ಎಂಬ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಶಿರಾದಲ್ಲಿ ಜಾದೂ ಮಾಡಲಿದ್ದಾರೆಯೇ? ಕಮಲವನ್ನು ಅರಳಿಸಲಿದ್ದಾರೆಯೇ  ಎಂಬುದು ರಾಜಕೀಯ ವಲಯದಲ್ಲಿ ಬಾರೀ ಮಿಂಚಿನ ಸಂಚಲನ ಮೂಡಿಸಿದೆ. ಮಂಡ್ಯಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಲಿ ಸಚಿವ ನಾರಾಯಣಗೌಡ ಗೆದ್ದಿರುವುದು ವಿಜಯೇಂದ್ರ ಅವರ ತಂತ್ರಗಾರಿಕೆಯಿಂದಲೇ ಎಂಬುದು ಹೆಚ್ಚು ಪ್ರಚಾರಕ್ಕೆ ಬಂದಿದೆ. ಇದರಲ್ಲಿ ಸತ್ಯ ಎಷ್ಟು? ಮಿತ್ಯ ಎಷ್ಟು?  ಎಂಬುದನ್ನು ಒಳ ಹೊಕ್ಕು ನೋಡಿದರೆ ಮಂಡ್ಯಜಿಲ್ಲೆಯ ಕೆ.ಆರ್.ಪೇಟೆ ಅಭ್ಯರ್ಥಿ ಗೆಲುವಿನಲ್ಲಿ ವಿಜಯೇಂದ್ರ ಪಾತ್ರ ಬಹಳ ಮಹತ್ವವಾಗಿರಲಿಲ್ಲ. ಅವರಿಂದಲೇ ನಾರಾಯಣಗೌಡ ಗೆದ್ದರು ಎಂಬುದು ಸಮಂಜಸವಲ್ಲ , ವಾಸ್ತವವೂ ಅಲ್ಲ. ! ಮಂಡ್ಯ ಮತ್ತು ತುಮಕೂರು ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು  ಮತ್ತು ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸೋತ ನಂತರ ಒಕ್ಕಲಿಗ ಸಾಮ್ರಾಜ್ಯದಲ್ಲಿ ಜೆಡಿಎಸ್ ಪ್ರಾಬಲ್ಯ, ವರ್ಚಸ್ಸು, ಜನಪ್ರಿಯತೆ ಕುಸಿಯತೊಡಗಿತು. ಜೆಡಿಎಸ್ ಬಗ್ಗೆ ಒಕ್ಕಲಿಗ ಸಮುದಾಯದಲ್ಲೇ ಬೇಸರ, ಅಸಮಾಧಾನ, ಆಕ್ರೋಶ ಹುಟ್ಟಿತು. ಇದರ ಜತೆಗೆ ಹಿಂದುಳಿದ ವರ್ಗಗಳ ಇತರೆ ಸಮುದಾಯವೂ  ಸಹ ಜೆಡಿಎಸ್ ಬಿಟ್ಟು ಬಿಜೆಪಿಯನ್ನು ತಬ್ಬಿಕೊಂಡಕಾರಣ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ನಾರಾಯಣಗೌಡ ವಿಜಯ ಸಾಧಿಸಿದರು. ನಂತರ ಮಂತ್ರಿಯೂ ಆದರು. ಅದೇ ರೀತಿ ಬೆಂಗಳೂರಿನಲ್ಲಿ ಗೋಪಾಲಯ್ಯ ದೇವೇಗೌಡರ ವಿರುದ್ಧವೇ ತೋಳು ಮಡಚಿ ವಿಜಯ ಸಾಧಿಸಲು ಈ ಅಂಶಗಳೇ ಕಾರಣವಾಗಿತ್ತು  ಎಂಬುದು ಚುನಾವಣಾ ಪಂಡಿತರ ಅಭಿಪ್ರಾಯವಾಗಿದೆ.

ಇನ್ನು ಶಿರಾದಲ್ಲಿ ಕುಂಚಿಟಿಗ ಒಕ್ಕಲಿಗರ ಪ್ರಾಬಲ್ಯವಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಪರಿಸ್ಥಿತಿ ಅನುಕೂಲಕರವಾಗಿದೆ. ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅನುಕಂಪದ ಆಧಾರದಲ್ಲೇ ಗೆಲುವಿನ ಕಡೆ ನೋಡಬೇಕಿದೆ. ಇಲ್ಲಿ ವಿಜಯೇಂದ್ರ ಅವರ ರಾಜಕೀಯ ತಂತ್ರಗಾರಿಕೆ,  ಜಾಣ್ಮೆ ನಡೆಯುವುದು ಬಹಳ ಕಷ್ಟ ಎಂಬುದು ರಾಜಕೀಯ ಪಂಡಿತರ ಅನುಭವದ ಮಾತು. ವಿಜಯೇಂದ್ರ ಅವರ ರಾಜಕೀಯ ಆಟ ಶಿರಾದಲ್ಲಿ ನಡೆಯುವುದಿಲ್ಲ. ಹಣವನ್ನು ನೀರಿನಂತೆ ಚೆಲ್ಲುವ ಪ್ರಯುತ್ನ ಮಾಡಬಹುದು. ಅದನ್ನು ಬಿಟ್ಟರೆ ಅವರ ತಂತ್ರಗಾರಿಕೆ ಶಿರಾದಲ್ಲಿ ಫಲ ಕೊಡುವ ಸಾಧ್ಯತೆಗಳು ಬಹಳ ಕಡಿಮೆ  ಎಂದೇ ಹೇಳಬಹುದು. ಶಿರಾದಲ್ಲಿ ಹೊರಗಿನವರ ಆಟ ನಡೆಯುವುದಿಲ್ಲ. ರಾಜ್ಯದ ವಿಷಯಗಳು ಇಲ್ಲಿನ ಚುನಾವಣಾ ವಿಷಯವಾಗುವುದಿಲ್ಲ. ಸ್ಥಳೀಯ ವಿಷಯಗಳೇ ಪ್ರಮುಖ ಪಾತ್ರ ವಹಿಸಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಜೆಡಿಎಸ್ ಮತ ಬುಟ್ಟಿಗೆ ಕೈ ಹಾಕಿರುವುದರಿಂದ ಇಲ್ಲಿ ಕಾಂಗ್ರೆಸ್ ಮತ್ತು  ಜೆಡಿಎಸ್ ನಡುವೆ ಪ್ರಬಲ ಪೈಪೋಟಿ ನಡೆಯುವ ಸಾಧ್ಯತೆಗಳೇ ಹೆಚ್ಚಾಗಿ ಕಾಣಿಸುತ್ತಿದೆ. ಮಾಜಿ ಸಂಸದ ಮೂಡಲಗಿರಿಯಪ್ಪ ಜೆ.ಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ನೀಡಿಲ್ಲ. ಹೀಗಾಗಿ ಅವರ ಬೆಂಬಲಿಗರು ಬಿಜೆಪಿ ಕಡೆ ವಾಲಿದ್ದು, ಮೇಲಾಗಿ ಬಿಜೆಪಿ ಅವರ ಮಗನಿಗೆ ಟಿಕೆಟ್ ಕೊಟ್ಟಿರುವ ಕಾರಣ,  ಪರಿಣಾಮ ಜೆಡಿಎಸ್ ಮತ ಕಸಿಯುವ ಸಾಧ್ಯತೆ ಬಹಳವಾಗಿದೆ. ಜಾತಿ ಲೆಕ್ಕಾಚಾರದಲ್ಲೇ ನೋಡಿದರೂ ಶಿರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಅನುಕೂಲವೂ ಇದೆ, ಅನಾನುಕೂಲವೂ ಇದೆ. ಕುರುಬ ಸಮುದಾಯದ ಬಿ.ಕೆ. ಮಂಜುನಾಥ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ಪಕ್ಷ ಟಿಕೆಟ್ ನೀಡದ ಕಾರಣ  ಕುರುಬ ಸಮುದಾಯದ ಅಸಮಾಧಾನ, ಆಕ್ರೋಶ ಸ್ಫೋಟಗೊಂಡು ಅದು ಜಯಚಂದ್ರ ಗೆಲುವಿಗೆ ಕೊಂಚ ಮಟ್ಟಿಗೆ ಸಹಾಯ ಮಾಡಲೂಬಹುದು. ಕಾಂಗ್ರೆಸ್ – ಜೆಡಿಎಸ್ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದ್ದು ಬಿಜೆಪಿ ಹವಾ ಕಾಣುತ್ತಿಲ್ಲ. 

ಆರ್ ಆರ್ ನಗರ ಮುನಿರತ್ನಗೆ ಹ್ಯಾಟ್ರಿಕ್ ಅದೃಷ್ಟ
ಇನ್ನು ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ತಮ್ಮದೇ ಆದ ಮತಬ್ಯಾಂಕ್ ಹೊಂದಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿರುವುದು ತಿಳಿದಿರುವ ಸಂಗತಿ. ರಾಜರಾಜೇಶ್ವರಿ ನಗರ ವಿಧಾನಸಭಾಕ್ಷೇತ್ರ 2008ರಲ್ಲಿ ಹೊಸದಾಗಿ ಜನ್ಮತಾಳಿದ ನಂತರ ಇಲ್ಲಿವರೆಗೆ ಮೂರು ಚುನಾವಣೆಗಳು ನಡೆದಿವೆ.  ಮೊದಲನೇ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಬಿಜೆಪಿಗೆ ಮೊದಲ ಜಯತಂದುಕೊಟ್ಟಿದ್ದರು. ನಂತರದ ಚುನಾವಣೆಗಳಲ್ಲಿ ಮುನಿರತ್ನ ಸತತ ಗೆದ್ದುಕೊಂಡು ಬಂದಿದ್ದಾರೆ. ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತವಿಟ್ಟುಕೊಂಡಿದ್ದಾರೆ. ಇಲ್ಲಿ ಪಕ್ಷ ಎಂಬುದೇ ಗೌಣವಾಗಿದೆ. ಮುನಿರತ್ನ ವಿರುದ್ಧ ಯಾರೇ ನಿಂತರೂ  ಗೆಲ್ಲುವುದು ಕಷ್ಟ ಎಂಬ ಮಾತು ಕ್ಷೇತ್ರದಲ್ಲಿ ಸಹಜವಾಗಿಯೇ ಕೇಳಿ ಬರುತ್ತಿದೆ. ರಾಜರಾಜೇಶ್ವರಿ ಮತಕ್ಷೇತ್ರದಲ್ಲಿ ಗಂಗಟಕಾರ ಒಕ್ಕಲಿಗ ಸಮುದಾಯದ ಪ್ರಾಬಲ್ಯವಿದೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ, ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಇಬ್ಬರೂ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಕಾರಣ ಅವರಿಬ್ಬರ ನಡುವೆ  ಮತ ವಿಭಜನೆಯಾಗಿ ಬಿಜೆಪಿ ಅಭ್ಯರ್ಥಿಗೆ ದೇವಿ ರಾಜರಾಜೇಶ್ವರಿ ಒಲಿಯಬಹುದು ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಮುನಿರತ್ನ ಅವರಿಗೆ ಇಲ್ಲಿ ಪರಿಸ್ಥಿತಿ ಹೆಚ್ಚು ಅನುಕೂಲವಾಗಿದೆ. ಚಿತ್ರರಂಗ ಮತ್ತು ಎಚ್. ಡಿ. ಕುಮಾರಸ್ವಾಮಿ ಅವರ ಜೊತೆ ಉತ್ತಮ ನಂಟಿನ ಕಾರಣಗಳು ಸಹ ಅವರಿಗೆ ವರವಾಗಬಹುದು  ಸದ್ಯಕ್ಕೆ ಕಾಂಗ್ರೆಸ್ ಹೆಚ್ ಡಿ.ಕೆ ಅವರಿಗೆ ಪ್ರಬಲ ರಾಜಕೀಯ ವೈರಿ, ಹೀಗಾಗಿ ಇಲ್ಲಿ ಬಿಜೆಪಿ ಗೆದ್ದರೆ ಅವರಿಗೆ ಬೇಸರವೇನಾಗದು ಎಂಬ ಒಗಟು, ವ್ಯಂಗ್ಯದ ಮಾತುಗಳು ಸಹಜವಾಗಿಯೇ ಕೇಳಿಯೇ ಬರುತ್ತಿವೆ. 

ಇನ್ನುಜಾತಿಯ ಲೆಕ್ಕಾಚಾರವನ್ನು ಮೀರಿ ನೋಡಿದರೂ ಮುನಿರತ್ನ ಅವರಿಗೆ ಹೆಚ್ಚಿನ ಅನುಕೂಲಕರ ಪರಿಸ್ಥಿತಿ ಇದೆ. ಇದಕ್ಕೆ ಮುಖ್ಯಕಾರಣ ಎಂದರೆ ಕೊರೋನಾ ಮತ್ತು ಲಾಕ್ ಡೌನ್ ಸನ್ನಿವೇಶದಲ್ಲಿ ಬಡವರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡಿ ಭಾವನಾತ್ಮಕ, ಮಾನವೀಯ ಸಂಬಂಧ ಕಾಪಾಡಿಕೊಂಡು  ಬಂದಿದ್ದಾರೆ. ಹೇಗೆ ಅಳೆದು ತೂಗಿ ನೋಡಿದರೂ ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಅವರಿಗೆ ಹೆಚ್ಚಿನ ರಾಜಕೀಯ ಅನುಕೂಲ ಪರಿಸ್ಥಿತಿ ಇದೆ. ಇನ್ನು ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಮುಖಂಡರನ್ನು ತಮ್ಮ ಕಡೆಗೆ ಸೆಳೆದುಕೊಳ್ಳುವಲ್ಲಿ ಮಾಡುತ್ತಿರುವ ತಂತ್ರಗಾರಿಕೆ ಅನುಕೂಲಕರವಾಗಿ ಪರಿಣಮಿಸುವ ಸಾಧ್ಯತೆ  ದಟ್ಟವಾಗಿದೆ. ವ್ಯಕ್ತಿಗತವಾಗಿಯೇ ಕ್ಷೇತ್ರದ ಮೇಲೆ ಇಟ್ಟು ಕೊಂಡಿರುವ ಹಿಡಿತ ಗೆಲುವಿಗೆ ಸಹಕಾರಿಯಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಇನ್ನು ಎದುರಾಳಿಗಳನ್ನು ದುರ್ಬಲಗೊಳಿಸುವಲ್ಲಿ ಮುನಿರತ್ನ ಉರುಳಿಸುತ್ತಿರುವ ದಾಳ, ಹಾಕುತ್ತಿರುವ ಪಟ್ಟಿನ ಮುಂದೆ ವಿಜಯೇಂದ್ರ ತಂತ್ರಗಾರಿಕೆ, ಪಟ್ಟು ಬಹಳ ಡಿಮ್ ಎಂಬ  ಮಾತುಗಳು ಸಹ ಕೇಳಿ ಬರುತ್ತಿದೆ. 

-ಕೆ. ಎಸ್. ರಾಜಮನ್ನಾರ್

Stay up to date on all the latest ರಾಜಕೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp