ಉಪ ಚುನಾವಣೆ ಗಂಭೀರವಾಗಿ ಪರಿಗಣಿಸಿ, ಸಂಘಟಿತವಾಗಿ ಹೋರಾಡಿ: ಸಿಎಂ ಯಡಿಯೂರಪ್ಪ

ನವೆಂಬರ್ 3 ರಂದು ನಡೆಯುತ್ತಿರುವ ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆಲ್ಲುವುದು ರಾಜಕೀಯವಾಗಿ ಅತ್ಯಂತ ಅನಿವಾರ್ಯವಾಗಿದ್ದು, ಎಲ್ಲರೂ ಪ್ರತಿಷ್ಠೆ ಬಿಟ್ಟು ಸಂಘಟಿತರಾಗಿ ಹೋರಾಟ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಚಿವ ಸಹೋದ್ಯೋಗಿಗಳಿಗೆ ಸೂಚಿಸಿದ್ದಾರೆ. 
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ

ಬೆಂಗಳೂರು: ನವೆಂಬರ್ 3 ರಂದು ನಡೆಯುತ್ತಿರುವ ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆಲ್ಲುವುದು ರಾಜಕೀಯವಾಗಿ ಅತ್ಯಂತ ಅನಿವಾರ್ಯವಾಗಿದ್ದು, ಎಲ್ಲರೂ ಪ್ರತಿಷ್ಠೆ ಬಿಟ್ಟು ಸಂಘಟಿತರಾಗಿ ಹೋರಾಟ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಚಿವ ಸಹೋದ್ಯೋಗಿಗಳಿಗೆ ಸೂಚಿಸಿದ್ದಾರೆ. 

ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಉಪ ಚುನಾವಣೆ ಬಗ್ಗೆ ಚರ್ಚೆ ನಡೆಸಿದ ಯಡಿಯೂರಪ್ಪ, ಸರ್ಕಾರದ ವಿರುದ್ಧ ಆರೋಪಗಳಲ್ಲಿ ತೊಡಗಿರುವ ಪ್ರತಿಪಕ್ಷಗಳಿಗೆ ಉತ್ತರ ನೀಡಲು ಈ ಉಪ ಚುನಾವಣೆಯಲ್ಲಿ ಗೆಲ್ಲುವುದು ಅತ್ಯಂತ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

ಚುನಾವಣೆಯನ್ನು ಅತ್ಯಂತ ವ್ಯವಸ್ಥಿತವಾಗಿ ಎದುರಿಸಬೇಕಾಗಿದ್ದು, ಇದಕ್ಕಾಗಿ ಸಾಮೂಹಿಕ ಹೋರಾಟ ಮಾಡಬೇಕು. ಸಂಘಟಿತ ಪ್ರಚಾರದ ಮೂಲಕ ಮತದಾರರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುವಂತೆ ಸಚಿವರಿಗೆ ಸೂಚಿಸಿದರು. 

ಭಿನ್ನಾಭಿಪ್ರಾಯ ಮತ್ತು ಪ್ರತಿಷ್ಠೆಯನ್ನು ಬಿಟ್ಟು ಬಿಡಿ. ಬಹಿರಂಗ ಪ್ರಚಾರ ಅಂತ್ಯಗೊಳ್ಳುವತನಕ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಆದೇಶಿಸಿದರು. 

ಎರಡೂ ಕ್ಷೇತ್ರಗಳಲ್ಲಿ ನಮಗೆ ಗೆಲ್ಲುವ ಅವಕಾಶಗಳಿವೆ. ಮೈಮರೆತರೆ ಕಾಂಗ್ರೆಸ್ ಅದರ ಲಾಭ ಮಾಡಿಕೊಳ್ಳಬಹುದು. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕಲ್ಪಿಸಬಾರದು. ಗೆಲುವು ನಮ್ಮಿಂದ ಕೈ ಜಾರಬಾರದು. ಪ್ರತಿಪಕ್ಷಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಹೇಳಿದ್ದಾರೆ. 

ಉಪ ಚುನಾವಣೆ ನಮಗೆ ಪ್ರತಿಷ್ಠೆಯಾಗಿದ್ದು, ಸರ್ಕಾರದ ಅಭಿವೃದ್ಧಿ ಕೆಲಸಕ್ಕೆ ಇದರ ಫಲಿತಾಂಶ ಕೈಗನ್ನಡಿ ಆಗುತ್ತದೆ. ಇದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಂಡು ಪ್ರಚಾರದಲ್ಲಿ ತೊಡಗಿಕೊಳ್ಳಿ. ವಿವಾದಕ್ಕೆ ಆಸ್ಪದ ಕೊಡದೇ ಪ್ರಚಾರ ಮಾಡಿ. ಕ್ಷೇತ್ರದ ಉಸ್ತುವಾರಿ ಕೊಟ್ಟ ಎಲ್ಲಾ ಸಚಿವರು ತಮ್ಮ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಬೇಕು ಎಂದು ಸಚಿವರಿಗೆ ಮಾರ್ಗದರ್ಶನ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com