ಬಂಡೆಯಾಗಲು ಇಚ್ಛಿಸುವುದಿಲ್ಲ, ಜನ ವಿರೋಧಿ ಸರ್ಕಾರದ ವಿರುದ್ಧ ಜನ ಬೀಸುವ ಕಲ್ಲಾಗುವೆ: ಡಿ.ಕೆ. ಶಿವಕುಮಾರ್

ತಾವು ಬಂಡೆಯಾಗಲು ಇಚ್ಛಿಸುವುದಿಲ್ಲ. ರಾಜ್ಯದ ಜನ ವಿಧಾನಸೌಧಕ್ಕೆ ಹತ್ತಿಕೊಂಡು ಹೋಗುವ ಮೆಟ್ಟಿಲಿನ ಚಪ್ಪಡಿಕಲ್ಲಾಗುವ ಆಸೆ. ಈ ಜನ ವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ಜನ ಬೀಸುವ ಕಲ್ಲಾಗುತ್ತೇನೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್

ಬೆಂಗಳೂರು: ತಾವು ಬಂಡೆಯಾಗಲು ಇಚ್ಛಿಸುವುದಿಲ್ಲ. ರಾಜ್ಯದ ಜನ ವಿಧಾನಸೌಧಕ್ಕೆ ಹತ್ತಿಕೊಂಡು ಹೋಗುವ ಮೆಟ್ಟಿಲಿನ ಚಪ್ಪಡಿಕಲ್ಲಾಗುವ ಆಸೆ. ಈ ಜನ ವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ಜನ ಬೀಸುವ ಕಲ್ಲಾಗುತ್ತೇನೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಪಕ್ಷದ ಅಭ್ಯರ್ಥಿ ಕುಸುಮಾ ಎಚ್ ಅವರ ಪರವಾಗಿ ಆರ್.ಆರ್. ನಗರದ ಐಡಿಯಲ್ ಹೋಂಮ್ಸ್ ನಲ್ಲಿ ಒಕ್ಕಲಿಗ ಸಮುದಾಯದ ನಾನಾ ಸಂಘಟನೆಗಳ ಮುಖಂಡರೊಂದಿಗೆ ಶುಕ್ರವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಡಿಕೆಶಿ, 'ಕೆಲವರು ಬಂಡೆಯನ್ನು ಡೈನಮೇಟ್ ಇಟ್ಟು ಪುಡಿ ಪುಡಿ ಮಾಡುತ್ತೇವೆ ಎಂದಿದ್ದಾರೆ. ಬಂಡೆ ಪುಡಿಯಾಗಿ ಜಲ್ಲಿಕಲ್ಲಾದರೆ ಮನೆಕಟ್ಟಲು, ದೇವರ ಗುಡಿಯ ಮುಂದೆ ಗರಡುಗಂಭವಾಗಿ ನಿಲ್ಲಲು, ವಿಗ್ರಹವಾಗಿ, ಚಪ್ಪಡಿ ಕಲ್ಲಾಗಿ ಜನರಿಗೆ ಉಪಯೋಗಲು ಸಾಧ್ಯ. ಮಿತಿ ಮೀರಿದರೆ ಈ ಜನ ವಿರೋಧಿ ಸರ್ಕಾರಕ್ಕೆ ಜನ ಬೀಸುವ ಕಲ್ಲಾಗುವೆ. ಹೀಗಾಗಿ ತಾವು ಕೇವಲ ಬಂಡೆಯಾಗಲು ಇಚ್ಛಿಸುವುದಿಲ್ಲ. ಜನರಿಗೆ ನನ್ನಿಂದ ಉಪಯೋಗವಾದರೆ ಸಾಕು ಎಂದು ಹೇಳಿದರು.

ಬೀಜ ಬಿತ್ತುವಾಗ ಅದು ಮರವಾಗಿ ಹಣ್ಣಾದರೂ ನೀಡಲಿ, ನೆರಳಾದರು ನೀಡಲಿ ಎಂಬ ಒಳ್ಳೆ ಭಾವನೆಯಿಂದ ಬಿತ್ತುತ್ತೇವೆ. ಎಲ್ಲ ಬೀಜಗಳು ಹಣ್ಣನ್ನೇ ನೀಡಬೇಕು ಎಂದು ಬಯಸುವುದಿಲ್ಲ. ಕೆಲವೊಮ್ಮೆ ಒಬ್ಬರು ಮರ ಬೆಳೆಸುವವರೆ, ಮತ್ತೊಬ್ಬರು ಹಣ್ಣು ತಿನ್ನುತ್ತಾರೆ. ಯಾರೋ ಕಟ್ಟಿದ ಹುತ್ತದಲ್ಲಿ ವಿಷ ಸರ್ಪ ಬಂದು ಸೇರುತ್ತದೆ. ಇದು ಪ್ರಕೃತಿ ನಿಯಮ ಎಂದು ಮಾರ್ಮಿಕವಾಗಿ ಹೇಳಿದರು.

ಡಿ.ಕೆ. ರವಿ ಪತ್ನಿ ಕುಸುಮ ಅವರ ಕುಟುಂಬ ತಮಗೆ ಮುಂಚೆಯಿಂದಲೂ ಗೊತ್ತಿದೆ. ಪಾಪ ಆತ ಯಾವುದೋ ಕಾರಣಕ್ಕೆ ಹೇಡಿತನ ತೋರಿಸಿಬಿಟ್ಟ. ಆತ ಯಾವುದೇ ಪರಿಸ್ಥಿತಿ ಇದ್ದರೂ ಧೈರ್ಯದಿಂದ ಎದುರಿಸಿ ತಂದೆ-ತಾಯಿ, ಕಟ್ಟಿಕೊಂಡ ಹೆಂಡತಿಯನ್ನು ನೋಡಿಕೊಳ್ಳಬೇಕಿತ್ತು. ನಮ್ಮ ಸಮಾಜ ಅವರನ್ನು ಎಷ್ಟು ಪ್ರೀತಿ, ಗೌರವದಿಂದ ನೋಡುತ್ತಿತ್ತು. ಆದರೆ ನಷ್ಟ ಆಗಿದ್ದು ಯಾರಿಗೆ? ಆತನ ಸಾವಿಗೆ ಅನೇಕರು ಕೊಲೆಯಾಯ್ತು ಎಂದು ಧರಣಿ ಮಾಡಿದ್ದನ್ನು ನೋಡಿದ್ದೇವೆ. ನಮ್ಮದೇ ಸರ್ಕಾರ ಸಿಬಿಐ ತನಿಖೆಗೆ ಕೊಟ್ಟಿತು. ಯಾವ ಯಾವ ಹೇಳಿಕೆ ಕೊಡಿಸಿದ್ದಾರೆ ಎಂಬ ದಾಖಲೆಯೂ ತಮ್ಮ ಬಳಿ ಇದೆ. ಆದರೆ ನಾವು ಈ ವಿಚಾರವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವುದು ಬೇಡ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಹೆಣ್ಣು ಮಗಳು ಕುಸುಮಾ ಎಲ್ಲರ ಸಾಕ್ಷಿಯಾಗಿ ತಾಳಿ ಕಟ್ಟಿಸಿಕೊಂಡು, ಸಪ್ತಪದಿ ತುಳಿದು ಮದುವೆಯಾಗಿದ್ದಾಳೆ. ಆದರೆ ಸಂಸದೆ ಶೋಭ ಕರಂದ್ಲಾಜೆ ಚುನಾವಣೆ ವೇಳೆ ಗಂಡನ ಹೆಸರು ಬಳಸಿಕೊಳ್ಳಬೇಡ ಎಂದಿದ್ದಾರೆ, ಅದು ಹೇಗೆ ಸಾಧ್ಯ? ಶೋಭಕ್ಕ ನೀನು, ನಿನ್ನ ಮಗಳೋ, ತಂಗಿನೋ ಆ ಸ್ಥಾನದಲ್ಲಿ ಇದ್ದಿದ್ದರೆ ಏನು ಹೇಳುತ್ತಿದ್ದೆ. ರಾಜಕಾರಣಕ್ಕೆ ಸಂಪ್ರದಾಯವನ್ನೇ ತೆಗೆಯಬೇಕು ಎನ್ನುವುದು ಎಷ್ಟು ಸರಿ? ಎಂದು ಖಾರವಾಗಿ ಪ್ರಶ್ನಿಸಿದರು.

ಈಗ ನವರಾತ್ರಿ ನಡೆಯುತ್ತಿದೆ. ಈ ಕ್ಷೇತ್ರಕ್ಕೆ ರಕ್ಷಣೆ ನೀಡಲು ದುರ್ಗಾದೇವಿ, ರಾಜರಾಜೇಶ್ವರಿ ಆಶೀರ್ವಾದ ಬೇಕಿದೆ. ಈ ದೇವತೆಗಳ ಆಶೀರ್ವಾದದೊಂದಿಗೆ ನಾವು ಕ್ಷೇತ್ರದ ಹಿತ ಕಾಯಲು ನೊಂದು ಬೆಂದಿರುವ ಹೆಣ್ಣು ಮಗಳನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದೇವೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com