ಬಿಜೆಪಿ ಸರ್ಕಾರ ಕರ್ನಾಟಕವನ್ನು ಭಿಕ್ಷುಕ ರಾಜ್ಯವನ್ನಾಗಿ ಮಾಡುತ್ತಿದೆ: ಸಿದ್ದರಾಮಯ್ಯ ಆಕ್ರೋಶ

ನಾನು ಮುಖ್ಯಮಂತ್ರಿಯಾಗಿದ್ದ 5 ವರ್ಷಗಳ ಅವಧಿಯಲ್ಲಿ ರಾಜ್ಯದ ಜನರ ತಲೆ ಮೇಲೆ ಸಾಲದ ಹೊರೆ ಹೊರಿಸಿದ್ದೇನೆ ಎಂದು ಬಿಜೆಪಿ ಕರ್ನಾಟಕ ನಿರಾಧಾರವಾಗಿರುವ ಅಂಕಿ-ಅಂಶಗಳನ್ನು ಹುಟ್ಟುಹಾಕಿ ರಾಜ್ಯದ.....
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ನಾನು ಮುಖ್ಯಮಂತ್ರಿಯಾಗಿದ್ದ 5 ವರ್ಷಗಳ ಅವಧಿಯಲ್ಲಿ ರಾಜ್ಯದ ಜನರ ತಲೆ ಮೇಲೆ ಸಾಲದ ಹೊರೆ ಹೊರಿಸಿದ್ದೇನೆ ಎಂದು ಬಿಜೆಪಿ ಕರ್ನಾಟಕ ನಿರಾಧಾರವಾಗಿರುವ ಅಂಕಿ-ಅಂಶಗಳನ್ನು ಹುಟ್ಟುಹಾಕಿ ರಾಜ್ಯದ ಜನತೆಯ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸತ್ಯ ಸಂಗತಿಯನ್ನು ಜನತೆಯ ಮುಂದಿಡುವುದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಟ್ವೀಟ್ ಗೆ ತಿರುಗೇಟು ನೀಡಿದ್ದಾರೆ. 

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ತನ್ನ ನಾಯಕರಿಗೆ ದೇಶ, ಧರ್ಮ, ಸಮಾಜ ಒಡೆಯುವ ತರಬೇತಿಯನ್ನಷ್ಟೇ ನೀಡದೆ. ಆಡಳಿತ ಮತ್ತು ಆರ್ಥಿಕ ನಿರ್ವಹಣೆ ಬಗ್ಗೆಯೂ ಪಾಠ ಮಾಡಿದ್ದರೆ ಅವರಿಂದ ಇಂತಹ ಅಜ್ಞಾನದ ಮುತ್ತುಗಳು ಉದುರಿ ಬೀಳುತ್ತಿರಲಿಲ್ಲ. ತರಬೇತಿದಾರರ ಕೊರತೆಯಿದ್ದರೆ ನಾನೇ ಬಂದು ಪಾಠ ಮಾಡ್ತೇನೆ ಎಂದು ಅಂಕಿ ಅಂಶಗಳ ಸಮೇತ ಮಾಹಿತಿ ನೀಡಿದ್ದಾರೆ. 

2008-09 ರಿಂದ 2013-14ರ ವರೆಗಿನ ಬಿಜೆಪಿ ಕರ್ನಾಟಕ ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಸಾಲದ ಪ್ರ ಮಾಣ ಶೇಕಡಾ 212ರಷ್ಟು ಹೆಚ್ಚಿತ್ತು. 2013-14ರಿಂದ 2018-19ರ ನಮ್ಮ ಸರ್ಕಾರದ ಅವಧಿಯಲ್ಲಿ ಸಾಲದ ಪ್ರ ಮಾಣ ಹೆಚ್ಚಿದ್ದು ಕೇವಲ ಶೇಕಡಾ 65ರಷ್ಟು ಮಾತ್ರ. ಹಿಂದಿನ ಅವಧಿಯ ಸಾಲವನ್ನು ಸೇರಿಸಿ ರಾಜ್ಯದ ಒಟ್ಟು ಸಾಲದ ಪ್ರಮಾಣ 2008-09ರಿಂದ 2013-14ರ ಅವಧಿಯಲ್ಲಿ ಶೇಕಡಾ 94.18ರಷ್ಟು ಹೆಚ್ಚಿದ್ದರೆ, 2013-14ರಿಂದ 2018-19ರ ಅವಧಿಯಲ್ಲಿ ಒಟ್ಟು ಸಾಲದ ಪ್ರಮಾಣ ಹೆಚ್ಚಿದ್ದು ಕೇವಲ ಶೇಕಡಾ 78.19ರಷ್ಟು ಮಾತ್ರ ಎಂದು ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಬಜೆಟ್ ಅಂದಾಜಿನ ಪ್ರಕಾರ ರಾಜ್ಯದ ಸಾಲ ರೂ.53,000 ಕೋಟಿ. ಕೊರೊನಾದಿಂದಾದ ಆದಾಯ ನಷ್ಟ ತುಂಬಲು ಹೆಚ್ಚುವರಿ ರೂ.33,000 ಕೋಟಿ ಸಾಲದ ಜೊತೆ, ಜಿಎಸ್ ಟಿ ಪರಿಹಾರ ಭರಿಸಲು ಮತ್ತೆ ರೂ. 12,000 ಕೋಟಿ ಸಾಲ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಒಂದೇ ವರ್ಷದಲ್ಲಿ ಸಾಲದ ಮೊತ್ತ ದುಪ್ಪಟ್ಟು ಮಾಡಿರುವುದು ಬಿಜೆಪಿಯ ಸಾಧನೆ. ಸಾಲದ ಹೊರೆಯ ಸುಳ್ಳು ಆರೋಪ ಮಾಡುವುದಕ್ಕಿಂತ ಮೊದಲು ಬಿಜೆಪಿ ನಾಯಕರು ವಿತ್ತೀಯ ಹೊಣೆಗಾರಿಕೆ ಅಧಿನಿಯಮವನ್ನೊಮ್ಮೆ ಓದಿಕೊಳ್ಳಬೇಕಿತ್ತು. ಅದರ ಪ್ರಕಾರ ನಮ್ಮ ಸಾಲ ರಾಜ್ಯದ ಆಂತರಿಕ ಉತ್ಪನ್ನದ 25%ರ ಮಿತಿಯಲ್ಲಿರಬೇಕು. ನನ್ನ ಕೊನೆಯ ಬಜೆಟ್ ನಲ್ಲಿ ರಾಜ್ಯದ ಸಾಲ 20.36 %ರ ಮಿತಿಯೊಳಗಿತ್ತು. ಈಗಿನ ಬಿಜೆಪಿ ಆಡಳಿತದಲ್ಲಿ ಅದು 33%ರ ಮಿತಿ ದಾಟಲಿದೆ ಎಂದು ಅವರೇ ಹೇಳಿದ್ದಾರೆ.

ರಾಜ್ಯದ ವಿತ್ತೀಯ ಕೊರತೆ ನಮ್ಮ ಆಂತರಿಕ ಉತ್ಪನ್ನದ(GSDP) ಶೇಕಡಾ ಮೂರನ್ನು ಮೀರಬಾರದು ಎಂದು ವಿತ್ತೀಯ ಹೊಣೆಗಾರಿಕೆ ಅಧಿನಿಯಮ ಹೇಳಿದೆ. ಮುಖ್ಯಮಂತ್ರಿಯಾಗಿ ನಾನು ಮಂಡಿಸಿದ್ದ ಆರು ಆಯವ್ಯಯ ಪತ್ರಗಳಲ್ಲಿ ವಿತ್ತೀಯಕೊರತೆ ಎಂದೂ ಶೇಕಡಾ ಮೂರರ ಮಿತಿಯನ್ನು ಮೀರಿರಲಿಲ್ಲ. ನನ್ನ ಕೊನೆಯ ಬಜೆಟ್ ನಲ್ಲಿ ಈ ಮಿತಿ ಶೇಕಡಾ 2.49ರಷ್ಟಿತ್ತು.ರಾಜ್ಯದ ಬಿಜೆಪಿ ಸರ್ಕಾರ ವಿತ್ತೀಯ ಕೊರತೆಯ ಮಿತಿಯನ್ನು 3% ಇಂದ 5%ಗೆ ಏರಿಕೆ ಮಾಡುವ ಅಪಾಯಕಾರಿ ನಿಲುವು ತೆಗೆದುಕೊಂಡಿದೆ. 5%ಕ್ಕೆ ಏರಿಕೆಯಿಂದ ರಾಜ್ಯ ಆರ್ಥಿಕವಾಗಿದಿ ವಾಳಿಯಾಗಲಿದೆ. ಹೆಚ್ಚೆಂದರೆ 3.5ಕ್ಕೆ ಏರಿಕೆ ಮಾಡಿ, ಮುಂದಿನ ದಿನಗಳಲ್ಲಿ ಮತ್ತೆ ಇಳಿಕೆ ಮಾಡಬಹುದಿತ್ತು. ಈ ಕಿವುಡು ಸರ್ಕಾರಕ್ಕೆ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಲೇವಡಿ ಮಾಡಿದ್ದಾರೆ. 

2020-21ರ ಆಯವ್ಯಯದಲ್ಲಿ ನಮ್ಮ ಒಟ್ಟು ಆಂತರಿಕ ಉತ್ಪನ್ನ 18 ಲಕ್ಷ ಕೋಟಿ ಎಂದು ಅಂದಾಜು ಮಾಡಲಾಗಿದೆ. ಆದರೆ ಕೊರೊನಾ ಹಾವಳಿ ಮತ್ತು ರಾಜ್ಯ ಸರ್ಕಾರದ ಆರ್ಥಿಕ ಎಡವಟ್ಟುಗಳ ಕಾರಣದಿಂದ ಅದು 12ಲಕ್ಷ ಕೋಟಿಗಿಂತಲೂ ಕೆಳಗಿಳಿಯಬಹುದು. ಆಗ ನಮ್ಮ ಸಾಲದ ಸಾಮರ್ಥ್ಯ ಕೂಡಾ ಕಡಿಮೆಯಾಗಲಿದೆ. ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 18ರ ಪ್ರಕಾರ 5 ವರ್ಷಗಳ ಕಾಲ ಜಿಎಸ್ ಟಿ ಪರಿಹಾರ ನೀಡಬೇಕಾಗಿರುವುದು ಸಂವಿಧಾನಾತ್ಮಕ ಕರ್ತವ್ಯ. 2020-2021ರ ಆರ್ಥಿಕ ವರ್ಷದ ಅಂತ್ಯಕ್ಕೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಜಿಎಸ್ ಟಿ ಪರಿಹಾರವಾಗಿ ರೂ.30,000 ಕೋಟಿ ನೀಡಬೇಕಾಗುತ್ತದೆ. ಈ ಪರಿಹಾರದ ನಿರಾಕರಣೆ ನಮ್ಮ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಕಿಡಿಕಾರಿದ್ದಾರೆ. 

14ನೇ ಹಣಕಾಸು ಆಯೋಗದಲ್ಲಿ 4.71% ಇದ್ದ ರಾಜ್ಯದ ಪಾಲನ್ನು 15ನೇ ಹಣಕಾಸು ಆಯೋಗದಲ್ಲಿ 3.64% ಗೆ ಇಳಿಸಲಾಗಿದೆ. ಇದರಿಂದ ರಾಜ್ಯಕ್ಕೆ ರೂ.12 ಸಾವಿರ ಕೋಟಿ ನಷ್ಟವಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಆಯೋಗ ಶಿಫಾರಸು ಮಾಡಿದ್ದ ರೂ.5495 ಕೋಟಿ ವಿಶೇಷ ಅನುದಾನವನ್ನು ಹಣಕಾಸು ಸಚಿವೆ ತಿರಸ್ಕರಿಸಿ ರಾಜ್ಯಕ್ಕೆ ದ್ರೋಹ ಬಗೆದಿದ್ದಾರೆ. ಈಗಿನ ಆರ್ಥಿಕ ಸಂಕಷ್ಟದಿಂದ ಪಾರಾಗಬೇಕಾದರೆ ರಾಜ್ಯ ಸರ್ಕಾರ ಬದ್ಧತಾ ವೆಚ್ಚಕ್ಕೆ ಕಡಿವಾಣ ಹಾಕಬೇಕಾಗಿದೆ. ದುಂದು ವೆಚ್ಚಗಳನ್ನು ನಿಲ್ಲಿಸಬೇಕು, ಅನಗತ್ಯ ಹುದ್ದೆಗಳನ್ನು ರದ್ದು ಮಾಡಬೇಕು, ತೆರಿಗೆಯೇತರ ಆದಾಯವನ್ನು ಹೆಚ್ಚಿಸಬೇಕು. ಆರ್ಥಿಕ ಶಿಸ್ತನ್ನು ಪಾಲಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. 

ರಾಜ್ಯ ಸರ್ಕಾರ 1 ಲಕ್ಷ ಕೋಟಿ ಸಾಲ ಎತ್ತಲು ಹೊರಟರೂ ಪ್ರವಾಹದಿಂದ ಬದುಕು ಕಳೆದುಕೊಂಡು ಬೀದಿಗೆ ಬಿದ್ದಿರುವ ಜನರಿಗೆ ಪರಿಹಾರ ಕೊಡಲು ದುಡ್ಡಿಲ್ಲ, ಕೊರೋನಾ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯವಾಗಿಲ್ಲ. ಜನರ ತೆರಿಗೆಯ ದುಡ್ಡಿನ ಜೊತೆ ಸಾಲದ ದುಡ್ಡು ಕೂಡ ಯಾರ ಜೇಬಿಗೆ ಹೋಗಿದೆ ಎನ್ನುವುದನ್ನು ಮುಖ್ಯಮಂತ್ರಿಗಳು ತಿಳಿಸಬೇಕು. ಬಿಜೆಪಿ ಆಡಳಿತದ ಹಿಂದಿನ ಅವಧಿಯಲ್ಲಿ ದೇಶದ ಅತ್ಯಂತ ಭ್ರಷ್ಟ ಸರ್ಕಾರ ಕರ್ನಾಟಕದ್ದು ಎಂದು ಮಾಧ್ಯಮಗಳು ತುಚ್ಚೀಕರಿಸುತ್ತಿತ್ತು. ನಮ್ಮ ಆಡಳಿತದ ಕಾಲದಲ್ಲಿ ಅತ್ಯಂತ ಸಮರ್ಥವಾಗಿ ಹಣಕಾಸು ನಿರ್ವಹಿಸಿದ ರಾಜ್ಯವೆಂದು ದೇಶ ಕೊಂಡಾಡುತ್ತಿತ್ತು. ಇಂತಹ ಕರ್ನಾಟಕವನ್ನು ಬಿಜೆಪಿ ಸರ್ಕಾರ ಮತ್ತೆ ಭಿಕ್ಷುಕ ರಾಜ್ಯವನ್ನಾಗಿ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com