ಕರ್ನಾಟಕ ಉಪ ಚುನಾವಣೆ: ಅನುಕಂಪದ ಅಲೆ, ಅಭ್ಯರ್ಥಿಗಳಿಗೆ ವಿಜಯದ ಸರಮಾಲೆ!

ರಾಜ್ಯದ ಚುನಾವಣಾ ಇತಿಹಾಸ ಬಗೆದು ನೋಡಿದರೆ ಶಾಸಕರಾಗಿ, ಸಚಿವರಾಗಿ ಕೆಲ ಕಾಲ ಕೆಲಸ ಮಾಡಿ, ಪತಿಯ ಅಕಾಲಿಕ ನಿಧನದ ನಂತರ ವಿಶೇಷವಾಗಿ ಪತ್ನಿಯರೇ ನಿಂತು ನಡೆದಿರುವ ಇದುವರೆಗಿನ ಎಲ್ಲ ಚುನಾವಣಾ ಇತಿಹಾಸ ಒಳ ಹೊಕ್ಕು ನೋಡಿದರೆ ಅನುಕಂಪದ ಅಲೆಯಲ್ಲಿ ವಿಜಯದ ನಗೆ ಬೀರಿದವರೇ ಹೆಚ್ಚು.
ಕರ್ನಾಟಕ ಉಪ ಚುನಾವಣೆ
ಕರ್ನಾಟಕ ಉಪ ಚುನಾವಣೆ

ಬೆಂಗಳೂರು: ಅನುಕಂಪದ ರಾಜಕಾರಣಕ್ಕೆ, ಚುನಾವಣಾ ಗೆಲುವಿಗೆ ಮತದಾರ ಪ್ರಭು ಮಾರು ಹೋಗಿ ಮನಕರಗಲಿದ್ದಾನೆಯೇ?. ರಾಜ್ಯದ ಚುನಾವಣಾ ಇತಿಹಾಸ ಬಗೆದು ನೋಡಿದರೆ ಶಾಸಕರಾಗಿ, ಸಚಿವರಾಗಿ ಕೆಲ ಕಾಲ ಕೆಲಸ ಮಾಡಿ, ಪತಿಯ ಅಕಾಲಿಕ ನಿಧನದ ನಂತರ ವಿಶೇಷವಾಗಿ ಪತ್ನಿಯರೇ ನಿಂತು  ನಡೆದಿರುವ ಇದುವರೆಗಿನ ಎಲ್ಲ ಚುನಾವಣಾ ಇತಿಹಾಸ ಒಳ ಹೊಕ್ಕು ನೋಡಿದರೆ ಅನುಕಂಪದ ಅಲೆಯಲ್ಲಿ ವಿಜಯದ ನಗೆ ಬೀರಿದವರೇ ಹೆಚ್ಚಾಗಿ ವಿಜಯೋತ್ಸವದ ಸರಮಾಲೆಯಾಗಿದೆ.!!  ಯಶೋಗಾಥೆಯಾಗಿದೆ.!

ನವೆಂಬರ್ 3 ರಂದು ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದೆ. ಫಲಿತಾಂಶ ಏನಾಬಹುದು, ಏನಾಗಲಿದೆ ಎಂಬ ಲೆಕ್ಕಾಚಾರವೂ ನಡೆಯುತ್ತಿದೆ. ಅನುಕಂಪದ ಆಧಾರದಲ್ಲಿ ದಡ ಮುಟ್ಟಿದವರ ಕಥೆ, ಲೆಕ್ಕ ನೋಡಿದರೆ ಇಲ್ಲಿಯೂ ಅನುಕಂಪವೇ ವಿಜೃಂಭಿಸಲಿದೆ ಎಂದು  ಸುಲಭವಾಗಿ ಹೇಳಿಬಿಡಬಹುದು. ಅನುಕಂಪದ ರಾಜಕಾರಣದ ವಿಚಾರ ಇಂದು ನಿನ್ನೆಯದಲ್ಲ. ಇದಕ್ಕೆ ಹತ್ತಾರು ವರ್ಷಗಳ ಇತಿಹಾಸದ ಹಿನ್ನೆಲೆಯೂ ಇದೆ. ಇದೇ ನಿಯಮ ರಾಜರಾಜೇಶ್ವರಿ ನಗರಕ್ಕೂ ಅನ್ವಯವಾಗಬಹುದೇ? ಇಲ್ಲ..! ಕಾರಣವಿಷ್ಟೇ, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪತಿ  ಡಿ.ಕೆ. ರವಿ, ಐಎಎಸ್  ಅಧಿಕಾರಿಯಾಗಿದ್ದರೇ ಹೊರತು ಶಾಸಕರಾಗಿ ಜನರಿಂದ ಆಯ್ಕೆಯಾಗಿರಲಿಲ್ಲ. ಹೀಗಾಗಿ ಅನುಕಂಪದ ನಿಯಮ ಇಲ್ಲಿಗೆ ಅನ್ವಯವಾಗುವುದಿಲ್ಲ. ಅವರ ಪತಿ ಶಾಸಕರು ಅಲ್ಲ, ಸಚಿವರೂ ಆಗಿರಲಿಲ್ಲ.ಎಂಬುದು ಬೇರೆ ಮಾತು.!  

ಹಾಲಿ ಶಾಸಕ ಸತ್ಯನಾರಾಯಣ ಅಕಾಲಿಕ ನಿಧನದಿಂದಾಗಿ ಅವರ ಪತ್ನಿ ಅಮ್ಮಾಜಮ್ಮ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಇದರಿಂದಾಗಿ ಕುಟುಂಬ ಮತ್ತು ಅನುಕಂಪದ ರಾಜಕಾರಣ ಚರ್ಚೆ ಈಗ ರಾಜಕೀಯದ ಮುನ್ನೆಲೆಗೆ ಬಂದಿದೆ. ಅನುಕಂಪದ ಅಲೆಯಲ್ಲಿ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಪ್ರಯತ್ನ  ಮಾಡಿದವರಲ್ಲಿ ನೂರಕ್ಕೆ ಶೇಕಡ 99 ಭಾಗ ಜಯಶಾಲಿಗಳಾಗಿದ್ದಾರೆ. ಮೊದಲ ಯತ್ನದಲ್ಲೇ ಗೆಲುವಿನ ನಗೆ ಬೀರಿದ್ದಾರೆ. ಕಲುಬುರಗಿಯಲ್ಲಿ ಚಂದ್ರಶೇಖರ ಪಾಟೀಲ ರೇವೂರ ಅವರ ಅಕಾಲಿಕ ನಿಧನದ ನಂತರ ಅವರ ಪತ್ನಿ ಜೆಡಿಎಸ್ ನಿಂದ ಸ್ಪರ್ಧೆ ಮಾಡಿ ಶಾಸಕಿಯಾಗಿದ್ದರು. ಚಂದ್ರಶೇಖರ ಪಾಟೀಲ ರೇವೂರ  ಬಿಜೆಪಿಯ ಮುಖಂಡರೇ ಆಗಿದ್ದರೂ ಅವರ ಪತ್ನಿಗೆ ಬಿಜೆಪಿ ಟಿಕೆಟ್ ನೀಡಲಿಲ್ಲ. ಇದರ ಸುಳಿವನ್ನು ಅರಿತ ಜೆಡಿಎಸ್ ಪರಮೋಚ್ಚ ನಾಯಕ ಎಚ್.ಡಿ.ದೇವೇಗೌಡ ಕೂಡಲೇ ಅವರ ಮನೆಗೆ ಧಾವಿಸಿ, ಕಣ್ಣೀರು ಹಾಕಿ ಅವರ ಪತ್ನಿಗೆ ಟಿಕೆಟ್ ಕೊಟ್ಟು, ಗೆಲ್ಲಿಸಿ, ಕಲಬುರಗಿಯಂತಹ ಬಿಸಿಲ ನಾಡಿನಲ್ಲಿ ಜೆಡಿಎಸ್ ಖಾತೆ  ತೆರೆಯುವಲ್ಲಿ ಸಫಲರಾದರು.

ನಂತರ ಆಗ ಸಚಿವರಾಗಿದ್ದ ಕಾಶೆಪ್ಪ, ದೇಶ್ ಮುಖ್  ಹಾಗೂ  ಖಮರುಲ್ಇಸ್ಲಾಂ ಸಾವಿನ ನಂತರ ಅವರ ಪತ್ನಿಯೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹೀಗೆ ರಾಜಕೀಯದ ಇತಿಹಾಸ ಕೆದಕಿದರೆ ಅನುಕಂಪದ ಅಲೆಯಲ್ಲಿ ಗೆದ್ದು ದಡ ಸೇರಿದವರ ಸಾಲು- ಸಾಲು ಕತೆಗಳೇ ಕಾಣಿಸುತ್ತವೆ. ಮಂಡ್ಯ ಜಿಲ್ಲೆಯ  ಶ್ರೀರಂಗಪಟ್ಟಣದಲ್ಲಿ ಬಂಡಿಸಿದ್ದೇಗೌಡ ನಿಧನದ ನಂತರ ಅವರ ಪತ್ನಿ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ, ಸಿದ್ದರಾಜು ನಿಧನದ ನಂತರ ಅವರ ಪತ್ನಿ ಕಲ್ಪನಾ ಸಿದ್ದರಾಜು, ಎಸ್.ಡಿ ಜಯರಾಂ, ಪತ್ನಿ ಪ್ರಭಾವತಿ ಜಯರಾಂ ಹಾಗೂ ಇತ್ತೀಚೆಗೆ ಅಂದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿತ್ರನಟ ಅಂಬರೀಶ್ ಪತ್ನಿ  ಸುಮಲತಾ ಅಂಬರೀಶ್ ಹಾಗೂ ಅದಕ್ಕೂ ಮೊದಲು ಕೆ.ಎನ್. ನಾಗೇಗೌಡ ನಿಧನದ ನಂತರ ಅಂದಿನ ಕಿರುಗಾವಲು ವಿಧಾನಸಭಾ ಕ್ಷೇತ್ರದಲ್ಲಿ ಅವರ ಪತ್ನಿ ನಾಗಮಣಿ ನಾಗೇಗೌಡ ಗೆಲುವಿನ ಮಾಲೆ ಧರಿಸಿದ್ದರು.  

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಆಗ ಸಚಿವರಾಗಿದ್ದ ಮಹದೇವ ಪ್ರಸಾದ್ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ  ಕ್ಷೇತ್ರದಲ್ಲಿ ಅವರ ಪತ್ನಿ ಗೀತಾ ಮಹದೇವಪ್ರಸಾದ್,  ಮತ್ತೊಂದು ಕಡೆ ಇದೇ ಚಾಮರಾಜನಗರ ಜಿಲ್ಲೆಯಲ್ಲೇ ಅಂದಿನ ಸಚಿವ ನಾಗಪ್ಪ ಅಕಾಲಿಕ ಮರಣದ  ನಂತರ ಅವರ ಪತ್ನಿ ಪರಿಮಳ ನಾಗಪ್ಪ ಸಹ ಅನುಕಂಪದ ಅಲೆಯಲ್ಲೇ ವಿಜಯದ ನಗೆ ಬೀರಿದ್ದಾರೆ. ಇನ್ನು ಶಿರಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ,  ಕಳೆದುಹೋದ ನಿದರ್ಶನಗಳ ಲೆಕ್ಕದಲ್ಲಿ ನೋಡಿದರೆ ಮಾತ್ರ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಸಹ ಇದೇ ರೀತಿ ಗೆದ್ದು ವಿಜಯದ ನಗೆ ಬೀರಲಿದ್ದಾರೆ  ಎಂಬ ತರ್ಕವನ್ನು ಬಹಳ ಸುಲಭವಾಗಿ ಮುಂದಿಡಬಹುದು. ಇದಕ್ಕೆ ಸಾಕಷ್ಟು ಪುಷ್ಟಿ ಕೊಡಲಿರುವ ಇತರೆ ಪೂರಕ ಅಂಶಗಳೆಂದರೆ ಮಾಜಿ ಸಚಿವ, ಸತ್ಯನಾರಾಯಣ ಅವರು ನಾಲ್ಕು ಬಾರಿ ಶಾಸಕರಾಗಿದ್ದರು. ಎರಡು ಬಾರಿ ಮಂತ್ರಿಯೂ ಆಗಿದ್ದರು. ಅದೆಲ್ಲವನ್ನೂ ಮೀರಿ ಸರಳ, ಸಜ್ಜನ, ಪ್ರಾಮಾಣಿಕ ಎಂಬ ಹೆಸರು  ಪಡೆದುಕೊಂಡಿದ್ದರು. ಹೇಗೆ, ಅಳೆದು ತೂಗಿ ನೋಡಿದರೂ ಇದು ವರ್ತಮಾನ, ಹಾಗೂ ಇತಿಹಾಸದ ಸತ್ಯ.!!.  ಇನ್ನೂ ಹೆಚ್.ಡಿ. ದೇವೇಗೌಡರು ಈ ಚುನಾವಣೆ ಹಣ ಬಲವೋ, ಜನ ಬಲವೋ ನೋಡಿಯೇ ಬಿಡುತ್ತೇನೆ ಎಂದು ಗುಡುಗಿರುವುದನ್ನು ನೋಡಿದರೆ ಅವರು ಎಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುದು  ಗೊತ್ತಾಗುತ್ತದೆ.

ಆದರೆ ರಾಯಚೂರು ಜಿಲ್ಲೆಯಲ್ಲಿ  ವೆಂಕಟೇಶ್ ನಾಯಕ್ ಚಿಕ್ಕಮಗಳೂರಿನ ಕಡೂರಿನಲ್ಲಿ ಶಾಸಕ  ಕೃಷ್ಣಮೂರ್ತಿ ಸಾವಿನ ನಂತರ ನಡೆದ ಚುನಾವಣೆಯಲ್ಲಿ ಹೆಂಡತಿಯರಿಗೆ ಟಿಕೆಟ್ ಕೊಡದ ಕಾರಣ ಸೋಲು ಆಗಿರುವ ಒಂದೆರಡು ಅಪರೂಪದ ಪ್ರಕರಣ ಹೊರತುಪಡಿಸಿದರೆ ಅನುಕಂಪದ ಅಲೆಯಲ್ಲೇ ಇತರೆ ಎಲ್ಲರೂ,  ವಿಶೇಷವಾಗಿ, ಪತ್ನಿಯರಂತೂ ಗೆಲುವಿನ ದಡ ಮುಟ್ಟಿದ್ದಾರೆ, ನಗೆ ಬೀರಿದ್ದಾರೆ. ಇನ್ನು ರಾಜಕೀಯ ನಾಯಕರ ಪೈಕಿ ಎಸ್.ಆರ್.ಕಂಠಿಯವರಿಂದ ಹಿಡಿದು, ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ಕಡಿದಾಳ್ ಮಂಜಪ್ಪ, ಎಸ್.ಆರ್.ಬೊಮ್ಮಾಯಿ, ಗುಂಡೂರಾವ್, ದೇವರಾಜ ಅರಸು, ಜೆ.ಎಚ್.ಪಟೇಲ್,  ರಾಮಕೃಷ್ಣಹೆಗಡೆ, ಎಸ್.ಎಂ.ಕೃಷ್ಣ  ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲಿಲ್ಲ. ಮಕ್ಕಳನ್ನು ರಾಜಕೀಯಕ್ಕೆ ಬರಲು ಬಿಡಲಿಲ್ಲ.

ಮುಂದೆ ಕಾಲಾನುಕ್ರಮದಲ್ಲಿ ಇವರ ಪೈಕಿ ಕೆಲವು ರಾಜಕಾರಿಣಿಗಳ ಮಕ್ಕಳು ಸ್ವಂತ ಶಕ್ತಿ ಮೇಲೆಯೇ ಚುನಾವಣೆಯಲ್ಲಿ ಗೆದ್ದು ಬಂದರೂ ಎಲ್ಲೋ ಒಂದು ಕಡೆ ಅನುಂಕಪವೂ ಸಹ ಕೊಂಚ ಮಟ್ಟಿಗೆ ನೆರವಾಗಿತ್ತು ಎನ್ನಬಹುದು. ಹೀಗೆ ಅನುಕಂಪ ರಾಜಕಾರಣ, ವಿಜಯದ ಸರಮಾಲೆ ಬೇರೆ ರೀತಿಯಲ್ಲಿ ಕವಲೊಡೆದು,  ಜರಿಯಾಗಿ, ನದಿಯಾಗಿ ಹೇಮಾವತಿ ದಂಡೆ ಶಿರಾದವರೆಗೂ ಹರಿದು ಬಂದಿದೆ.ಇನ್ನೂ ಹೆಂಡತಿಯರನ್ನೇ ಏಕೆ ನಿಲ್ಲಿಸುತ್ತಾರೆ ಎಂಬ ಪ್ರಶ್ನೆಗೆ ಮುಖ್ಯ ಕಾರಣ ಎಂದರೆ ಜ್ಯೋತಿಷಿಗಳ ಪ್ರಭಾವ ಎಂಬುದು ವಾಸ್ತವಿಕ ಸತ್ಯ.! ಇದೆಲ್ಲವನ್ನು ನೋಡಿದರೆ ಚುನಾವಣೆಗಳು ಇಂದಿಗೂ ವಿಷಯಾಧಾರಿತವಾಗಿ ನಡೆಯುತ್ತಿಲ್ಲ,  ಭಾರತೀಯ ಮತದಾರ- ರಾಜಕೀಯ ನಾಯಕರ ಮನಸ್ಥಿತಿ, ಅಲೋಚನೆ ಸಹ  ಬದಲಾಗುತ್ತಿಲ್ಲ ಎಂಬುದು ಸ್ಪಷ್ಟ.

- ಕೆ.ಎಸ್. ರಾಜಮನ್ನಾರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com