ಆರ್ ಆರ್ ನಗರ ಚುನಾವಣೆ ರಾಜಕಾರಣದ ಧರ್ಮ-ಅಧರ್ಮದ ನಡುವಣ ಯುದ್ಧ: ಡಿಕೆಶಿ

ಆರ್ ಆರ್ ನಗರ ಕ್ಷೇತ್ರದ ಚುನಾವಣೆ ಕೇವಲ ಚುನಾವಣೆ ಮಾತ್ರವಲ್ಲ ಇದು ಧರ್ಮ ಯುದ್ಧ. ಮತದಾರ ಈ ಕ್ಷೇತ್ರವನ್ನು ನೀಚ ರಾಜಕಾರಣಿಯ ನಿಯಂತ್ರಣದಿಂದ ಮುಕ್ತಗೊಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಡಿಕೆಶಿ-ಸಿದ್ದು-ಕುಸುಮಾ
ಡಿಕೆಶಿ-ಸಿದ್ದು-ಕುಸುಮಾ

ಬೆಂಗಳೂರು: ಆರ್ ಆರ್ ನಗರ ಕ್ಷೇತ್ರದ ಚುನಾವಣೆ ಕೇವಲ ಚುನಾವಣೆ ಮಾತ್ರವಲ್ಲ ಇದು ಧರ್ಮ ಯುದ್ಧ. ಮತದಾರ ಈ ಕ್ಷೇತ್ರವನ್ನು ನೀಚ ರಾಜಕಾರಣಿಯ ನಿಯಂತ್ರಣದಿಂದ ಮುಕ್ತಗೊಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ರಾಜರಾಜೇಶ್ವರಿ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ಜಾಲಹಳ್ಳಿ ವಾರ್ಡ್ ನಲ್ಲಿ ಶುಕ್ರವಾರ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾ ಅವರ ಪರ ಬೃಹತ್ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಪಕ್ಷದ ನಾಯಕರಾದ ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಐವಾನ್ ಡಿಸೋಜಾ, ಡಾ. ಅಜಯಸಿಂಗ್ ಇದ್ದರು.

ಈ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್, ಈ ಕ್ಷೇತ್ರದಲ್ಲಿ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಲು ಜನರ ಕಷ್ಟಕ್ಕೆ ಧ್ವನಿಯಾಗಲು ಕಾಂಗ್ರೆಸ್ ಪಕ್ಷ ಯುವ, ವಿದ್ಯಾವಂತ ಹಾಗೂ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಈ ಚುನಾವಣೆ ರಾಜಕಾರಣದ ಧರ್ಮ ಹಾಗೂ ಅಧರ್ಮದ ನಡುವಣ ಯುದ್ಧ. ಒಂದು ಪಕ್ಷದಲ್ಲಿ ಗೆದ್ದು, ಆ ಪಕ್ಷ ಹಾಗೂ ಮತದಾರರನ್ನು ಕೇಳದೇ ಅವರು ಕೊಟ್ಟ ಮತ ಹಾಗೂ ಸ್ಥಾನವನ್ನು ಮಾರಿಕೊಂಡಿರುವುದು ರಾಜಕಾರಣದ ಅಧರ್ಮ. ಒಂದು ವ್ಯಕ್ತಿಯ ಸ್ವಾರ್ಥಕ್ಕಾಗಿ ಇಂದು ಈ ಚುನಾವಣೆಯ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಏನೆಲ್ಲಾ ನಡೆಯುತ್ತಿದೆ ಎಂದು ಜನರು ಗಮನಿಸುತ್ತಿದ್ದಾರೆ ಎಂದರು.

ನಾವು ಮುಂದಿನ ದಿನಗಳಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನಸಭೆಯಲ್ಲಿ ಈ ಕ್ಷೇತ್ರದಲ್ಲಿ ದ್ವೇಷದಿಂದ ಹಾಕಲಾಗಿರುವ ಕೇಸ್ ಗಳ ಕುರಿತು ಸಮಗ್ರ ತನಿಖೆಗೆ ಆಗ್ರಹಿಸುತ್ತೇವೆ. ಹೆಣ್ಣು ಮಕ್ಕಳು, ವಿದ್ಯಾರ್ಥಿಗಳು, ಯುವಕರು, ಎಲ್ಲ ಪಕ್ಷಗಳ ಕಾರ್ಯಕರ್ತರ ಮೇಲೆ ಹಾಕಿರುವ ಕೇಸುಗಳ ವಿರುದ್ಧ ಹೋರಾಟ ಮಾಡುತ್ತೇವೆ. ಬಿಜೆಪಿ ಅಭ್ಯರ್ಥಿ, ಮೂವರು ಮಹಿಳಾ ಕಾರ್ಯಕರ್ತರ ಮೇಲೆ ಮಾತ್ರ ಈ ರೀತಿ ಕಿರುಕುಳ ನೀಡಿದ್ದಾರೆ ಎಂದುಕೊಂಡಿದ್ದೆ. ಆದರೆ ಹಲವರ ಮೇಲೆ ಕೇಸು ದಾಖಲಾಗಿದೆ. ತನ್ನ ವಿರುದ್ಧ ಧ್ವನಿ ಎತ್ತಿದ ಮಹಿಳೆಯರ ಮೇಲೆ ವೇಶ್ಯಾವಾಟಿಕೆ ಕೇಸು ದಾಖಲಿಸಲಾಗಿದೆ. ಈ ಚುನಾವಣೆ ನಂತರ ನಾವು ಇವರ ವಿರುದ್ಧ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ವಿಚಾರವಾಗಿ ತನಿಖೆ ನಡೆಸಲು ಒಂದು ಪ್ರತ್ಯೇಕ ಆಯೋಗವನ್ನೇ ರಚಿಸುತ್ತೇವೆ. ಇನ್ನು ಮುಂದೆ ಈ ಕ್ಷೇತ್ರದ ಮುಗ್ಧ ಮತದಾರರಿಗೆ ರಕ್ಷಣೆ ನೀಡಲಿಲ್ಲ ಎಂದರೆ ನಾವು ನಮ್ಮ ಕರ್ತವ್ಯಕ್ಕೆ ದ್ರೋಹ ಬಗೆದಂತಾಗುತ್ತದೆ ಎಂದರು.

ಈ ಚುನಾವಣೆ ಬಿಜೆಪಿಗೂ ನಮಗೂ ಅಲ್ಲ, ದಳಕ್ಕೂ ನಮಗೂ ಅಲ್ಲ. ಇದು ಒಬ್ಬ ವ್ಯಕ್ತಿ ಮಾಡಿರುವ ಅನಾಚಾರ, ಅನ್ಯಾಯ, ದಬ್ಬಾಳಿಕೆ, ಅಧಿಕಾರ ದುರುಪಯೋಗ ಮಾಡಿಕೊಂಡಿರುವುದಕ್ಕೆ ಶಿಕ್ಷೆ ನೀಡುವ ಚುನಾವಣೆ ಎಂದರು.

ಮುನಿರತ್ನ ಕೆಲಸ ಮಾಡದೇ ಸಾವಿರಾರು ಕೋಟಿ ರೂಪಾಯಿ ಮೊತ್ತದ ಬಿಲ್ ತೆಗೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಿಜೆಪಿ ಸರ್ಕಾರ ಬಂದ ಮೇಲೆ 250 ಕೋಟಿ ರೂಪಾಯಿ ಮೊತ್ತದ ಬಿಲ್ ಅನ್ನು ಕೆಲಸ ಮಾಡದೇ ಪಡೆದಿರುವುದರ ವಿರುದ್ಧ ಲೋಕಾಯುಕ್ತರಿಗೆ ಅಫಿಡವಿಟ್ ದಾಖಲಿಸಿದ್ದಾರೆ. ಬಿಬಿಎಂಪಿ ಆಯುಕ್ತರು ರಾತ್ರೋರಾತ್ರಿ ಬಿಲ್ ತಡೆಹಿಡಿದಿದ್ದಾರೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com