ಕರ್ನಾಟಕ ಉಪ ಚುನಾವಣೆ: ಒಕ್ಕಲಿಗ ಸಮುದಾಯದ ನಾಯಕತ್ವ ಉಳಿಸಿಕೊಳ್ಳಲೇ ಬೇಕಾದ ಅನಿವಾರ್ಯತೆಯಲ್ಲಿ ಎಚ್ ಡಿ ದೇವೇಗೌಡ!

ರಾಜ್ಯದಲ್ಲಿ ಪ್ರಸ್ತುತ ಎದುರಾಗಿರುವ ಎರಡು ಕ್ಷೇತ್ರಗಳ ಉಪಚುನಾವಣೆ ಜೆಡಿಎಸ್ ಪಕ್ಷಕ್ಕೆ ಅಗ್ನಿ ಪರೀಕ್ಷೆಯಾಗಿದ್ದು, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಟ ಕೂಡ ಆಗಿದೆ. ಒಕ್ಕಲಿಗರ ಪ್ರಾಬಲ್ಯವಿರುವ ಶಿರಾ ಹಾಗೂ ರಾಜರಾಜೇಶ್ವರಿ ನಗರದಲ್ಲಿ ಗೆಲುವು ಸಾಧಿಸಲೇಬೇಕೆಂದು ಪಟ್ಟು ಹಿಡಿದಿರುವ ಜೆಡಿಎಸ್, ಇದಕ್ಕಾಗಿ ಒಕ್ಕಲಿಗರ ಮನಗೆಲ್ಲಲು ಶತಪ್ರಯತ್ನ ನಡೆಸುತ್ತಿದ್ದಾರೆ
ದೇವೇಗೌಡ
ದೇವೇಗೌಡ

ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ಎದುರಾಗಿರುವ ಎರಡು ಕ್ಷೇತ್ರಗಳ ಉಪಚುನಾವಣೆ ಜೆಡಿಎಸ್ ಪಕ್ಷಕ್ಕೆ ಅಗ್ನಿ ಪರೀಕ್ಷೆಯಾಗಿದ್ದು, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಟ ಕೂಡ ಆಗಿದೆ. ಒಕ್ಕಲಿಗರ ಪ್ರಾಬಲ್ಯವಿರುವ ಶಿರಾ ಹಾಗೂ ರಾಜರಾಜೇಶ್ವರಿ ನಗರದಲ್ಲಿ ಗೆಲುವು ಸಾಧಿಸಲೇಬೇಕೆಂದು ಪಟ್ಟು ಹಿಡಿದಿರುವ ಜೆಡಿಎಸ್, ಇದಕ್ಕಾಗಿ ಒಕ್ಕಲಿಗರ ಮನಗೆಲ್ಲಲು ಶತಪ್ರಯತ್ನ ನಡೆಸುತ್ತಿದ್ದಾರೆ. 

ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿಯವರೂ ಚುನಾವಣೆ ನಡೆಯುವ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲೂ ಎಡೆಬಿಡದೆ ಪ್ರಚಾರ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಜೆಡಿಎಸ್ ಭದ್ರಕೋಟೆಯೆಂದೇ ಹೇಳಲಾಗುತ್ತಿದ್ದ ಕೆ.ಆರ್.ಪೇಟೆಯನ್ನು ಕಳೆದುಕೊಂಡ ಬಳಿಕ ಜೆಡಿಎಸ್'ಗೆ ಪಕ್ಷಕ್ಕೆ ಆಂತಕ ಶುರುವಾಗಿದ್ದು, ಇದೀಗ ತನ್ನದೇ ಆಗಿದ್ದ ಶಿರಾ ಕ್ಷೇತ್ರವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ. 

ಉಪಚುನಾವಣೆ ನಡೆಯುವ ಎರಡೂ ಕ್ಷೇತ್ರಗಳೂ ಒಕ್ಕಲಿಗ ಸಮುದಾಯದ ಪ್ರಾಬಲ್ಯವಿದ್ದು, ಈ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯದ ನಾಯಕತ್ವ ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ದೇವೇಗೌಡ ಅವರಿಗೆ ಎದುರಾಗಿದೆ. 

ಕಳೆದ ಬಾರಿ 15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಒಂದೂ ಕ್ಷೇತ್ರದಲ್ಲಿಯೂ ಗೆಲುವು ಸಾಧಿಸಿರಲಿಲ್ಲ. ಹೀಗಾಗಿ ಈ ಬಾರಿಯ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ಜೆಡಿಎಸ್'ಗೆ ಬಂದೊದಗಿದೆ. ಈ ನಡುವೆ ಶಾಸಕ ಬಿ. ಸತ್ಯನಾರಾಯಣ ಸಾವು ಕೂಡ ಪಕ್ಷಕ್ಕೆ ಭಾರೀ ಹೊಡೆತವನ್ನು ನೀಡಿದೆ. 

ಕಳೆದ ಸಂಸದೀಯ ಚುನಾವಣೆಯಲ್ಲೂ ಜೆಡಿಎಸ್ ಕೇವಲ ಹಾಸನದಲ್ಲಷ್ಟೇ ಗೆಲುವು ಸಾಧಿಸಿತ್ತು. ಪ್ರಜ್ವಲ್ ರೇವಣ್ಣ ಅವರು ಗೆಲುವು ಸಾಧಿಸಿದ್ದರು. ಚುನಾವಣಾ ಕಣಕ್ಕಿಳಿದಿದ್ದ ದೇವೇಗೌಡ ಅವರು ತುಮಕೂರಿನಲ್ಲಿ ಸೋಲು ಕಾಣುವಂತಾಗಿತ್ತು. ಪ್ರಸಕ್ತ ಸಾಲಿನ ಜೂನ್ ತಿಂಗಳಿನಲ್ಲಿ ದೇವೇಗೌಡ ಅವರು ರಾಜ್ಯಸಭಾ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. 

ರಾಜ್ಯ ವಿಧಾನಸಭೆಯಲ್ಲಿ 37 ಸದಸ್ಯರ ಬಲವನ್ನು ಹೊಂದಿದ್ದ ಜೆಡಿಎಸ್ ಪಕ್ಷವು, ಬಳಿಕ 3 ಶಾಸಕರು ಪಕ್ಷ ತೊರೆದ ಬಳಿಕ 34ಕ್ಕೆ ಇಳಿದಿದೆ.

ಮೈತ್ರಿ ಕಡಿದುಕೊಂಡ ಬಳಿಕ ಉಪಚುನಾವಣೆಯಲ್ಲಿ ಮತ್ತೆ ಜೆಡಿಎಸ್ ಜೊತೆಗೆ ಕೈಜೋಡಿಸುವುದಕ್ಕೆ ಸಿದ್ದರಾಮಯ್ಯ ಅವರು ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದರು. ಪ್ರಸ್ತುತ ಉಪಚುನಾವಣೆಯಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಕಣಕ್ಕಳಿಯುತ್ತಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com