ಡ್ರಗ್ಸ್ ಹಗರಣದಲ್ಲಿ ಅಪರಾಧಿಗಳನ್ನು ಶಿಕ್ಷಿಸುವ ಉದ್ದೇಶಕ್ಕಿಂತಲೂ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳುವ ಯತ್ನ: ಸಿದ್ದರಾಮಯ್ಯ

ಡ್ರಗ್ಸ್ ಹಗರಣದ ತನಿಖೆಯ ಹಾದಿ ನೋಡಿದರೆ ಬಿಜೆಪಿ ಸರ್ಕಾರಕ್ಕೆ ಅಪರಾಧಿಗಳನ್ನು ಶಿಕ್ಷಿಸುವ ಉದ್ದೇಶಕ್ಕಿಂತಲೂ ಕೊರೋನಾ ಹಾವಳಿ ಮತ್ತು ಅತಿವೃಷ್ಟಿ ಪರಿಹಾರಕ್ಕೆ ಸಂಬಂಧಿಸಿದಂತೆ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ಯತ್ನ ನಡೆಸಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಡ್ರಗ್ಸ್ ಹಗರಣದ ತನಿಖೆಯ ಹಾದಿ ನೋಡಿದರೆ ಬಿಜೆಪಿ ಸರ್ಕಾರಕ್ಕೆ ಅಪರಾಧಿಗಳನ್ನು ಶಿಕ್ಷಿಸುವ ಉದ್ದೇಶಕ್ಕಿಂತಲೂ ಕೊರೋನಾ ಹಾವಳಿ ಮತ್ತು ಅತಿವೃಷ್ಟಿ ಪರಿಹಾರಕ್ಕೆ ಸಂಬಂಧಿಸಿದಂತೆ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ಯತ್ನ ನಡೆಸಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಡ್ರಗ್ಸ್ ಹಗರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ತಮ್ಮ ಪಕ್ಷದವರನ್ನು ರಕ್ಷಿಸುವ ಮತ್ತು ಈ ಹಗರಣವನ್ನು ಬಳಸಿಕೊಂಡು ವಿರೋಧ ಪಕ್ಷದ ನಾಯಕರ ಚಾರಿತ್ರ್ಯಹರಣ ಮಾಡುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಮಾದಕ ವಸ್ತುಗಳ ಹಾವಳಿಯ ನಿರ್ಮೂಲನೆಯ ಪ್ರಾಮಾಣಿಕ ಉದ್ದೇಶ ಮುಖ್ಯಮಂತ್ರಿಯವರಿಗೆ ಇರುವುದಾದರೆ, ಬೀದಿಯಲ್ಲಿ ನಿಂತು ವಿರೋಧ ಪಕ್ಷದ ನಾಯಕರ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಿ ತನಿಖೆಯ ಹಾದಿ ತಪ್ಪಿಸುತ್ತಿರುವ ಸಂಪುಟದ ಸಚಿವರು ಮತ್ತು ಪಕ್ಷದ ನಾಯಕರ ಬಾಯಿ ಮುಚ್ಚಿಸಿ ಪೊಲೀಸರಿಗೆ ಮುಕ್ತ ಹಸ್ತ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಯಡಿಯೂರಪ್ಪನವರೇ ಡಿಜೆಹಳ್ಳಿ ಗಲಭೆ ಬಗ್ಗೆ ನಿಮ್ಮದೇ ತನಿಖೆಯ ಪ್ರಹಸನ ಮಾಡಿ ಪೊಲೀಸ್ ತನಿಖೆಯ ಮೇಲೆ ಪ್ರಭಾವ ಬೀರಿದ್ದೀರಿ. ಈಗ ಡ್ರಗ್ಸ್ ಹಗರಣದ ತನಿಖೆಯ ವಿವರಗಳನ್ನು ಸೋರಿ ಬಿಟ್ಟು ಪೊಲೀಸ್ ತನಿಖೆಯ ಹಾದಿ ತಪ್ಪಿಸುತ್ತಿದ್ದೀರಿ. ನಿಮಗೆ ವಿಶ್ವಾಸ ಇಲ್ಲದಿರುವುದು ಪೊಲೀಸರ ಮೇಲೋ? ಅಥವಾ ಗೃಹ ಸಚಿವರ ಮೇಲೋ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಪ್ರತಿಬಾರಿ ನಿಮ್ಮ ಆಡಳಿತದ ವೈಫಲ್ಯವನ್ನು ಮುಚ್ಚಿ ಹಾಕಲು ವಿರೋಧ ಪಕ್ಷಗಳ ನಾಯಕರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುವ ಕುತಂತ್ರ ಮಾಡುತ್ತಾ ಬಂದಿದ್ದೀರಿ. ಡ್ರಗ್ಸ್ ಹಗರಣದಲ್ಲಿ ಕೂಡಾ ಅದನ್ನೇ ಮಾಡುತ್ತಾ ಇದ್ದೀರಿ. ಸತ್ಯವನ್ನು ಮುಚ್ಚಿಡಬಹುದು, ನಾಶ ಮಾಡಲು ಆಗುವುದಿಲ್ಲ, ನೆನಪಿರಲಿ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com