ದೆಹಲಿಯಲ್ಲಿ ದೇವೇಂದ್ರ ಫಡ್ನವೀಸ್- ರಮೇಶ್ ಜಾರಕಿಹೊಳಿ‌ ನಡುವೆ ಮಹತ್ವದ ಮಾತುಕತೆ

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಗಡಿ ಜಿಲ್ಲೆ ಬೆಳಗಾವಿಯ ಪ್ರಭಾವಿ ಮುಖಂಡ ಕರ್ನಾಟಕದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಅವರ ಮಧ್ಯೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆದಿದೆ.
ರಮೇಶ್ ಜಾರಕಿಹೊಳಿ - ದೇವೇಂದ್ರ ಫಡ್ನವಿಸ್
ರಮೇಶ್ ಜಾರಕಿಹೊಳಿ - ದೇವೇಂದ್ರ ಫಡ್ನವಿಸ್

ನವದೆಹಲಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಗಡಿ ಜಿಲ್ಲೆ ಬೆಳಗಾವಿಯ ಪ್ರಭಾವಿ ಮುಖಂಡ ಕರ್ನಾಟಕದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಅವರ ಮಧ್ಯೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆದಿದೆ.

ನವದೆಹಲಿಯ ಗೌಪ್ಯಸ್ಥಳದಲ್ಲಿ ಸಚಿವ ರಮೇಶ್ ಜಾರಕಿಹೊಳಿ‌ ಮತ್ತು ದೇವೇಂದ್ರ ಫಡ್ನವಿಸ್ ಮಧ್ಯೆ ಮಾತುಕತೆ ನಡೆದಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.‌ ನಡ್ಡಾ ಅವರ ಸೂಚನೆಯಂತೆಯೇ ಹಲವಾರು ವಿಷಯಗಳನ್ನು ಈ ಉಭಯ ನಾಯಕರು ಚರ್ಚಿಸಿದ್ದಾರೆ.

ಕರ್ನಾಟಕದಲ್ಲಿ ಮೈತ್ರಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಂತೆ ಮಾಡಿದ ರಮೇಶ್ ಜಾರಕಿಹೊಳಿ‌, ಮಹಾರಾಷ್ಟ್ರದಲ್ಲೂ ತಮ್ಮ ಹಿಡಿತ ಹೊಂದಿದ್ದು, ಪ್ರಭಾವಿ ನಾಯಕರ ಮಧ್ಯದ ಭೇಟಿ ಶಿವಸೇನಾ ಮತ್ತು ಕಾಂಗ್ರೆಸ್ ವಲಯದಲ್ಲಿ ಭೀತಿ ಸೃಷ್ಟಿಸಿದೆ.

ಮಹಾರಾಷ್ಟ್ರದಲ್ಲಿರುವ ಶಿವಸೇನಾ ನೇತೃತ್ವದ ಸರ್ಕಾರವನ್ನು ಕೆಡವಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಮಹತ್ವದ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ. ಕರ್ನಾಟಕದಲ್ಲಿ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಕೆಡವಿದ ರೀತಿಯ ಕಾರ್ಯತಂತ್ರವನ್ನು ಮಹಾರಾಷ್ಟ್ರದಲ್ಲೂ ಅಳವಡಿಸಿಕೊಳ್ಳುವ ಬಗ್ಗೆ ಈ ನಾಯಕರು ಸಮಾಲೋಚನೆ ನಡೆಸಿದ್ದಾರೆ.

ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ಕೊಡುವುದಾಗಿ ರಮೇಶ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಸುತ್ತ ಸೃಷ್ಟಿಯಾದ ಗೊಂದಲ, ಕಂಗನಾ ರಾಣಾವತ್ ವಿವಾದ, ಕೋವಿಡ್ ನಿರ್ವಹಣೆ ಸೇರಿದಂತೆ ಇನ್ನಿತರ ಆಡಳಿತ ವೈಫಲ್ಯಗಳ ವಿಚಾರವಾಗಿ ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ ಮೈತ್ರಿ ಸರ್ಕಾರಕ್ಕೆ ಮಹಾರಾಷ್ಟ್ರ ಬಿಜೆಪಿ ಬಿಸಿ ಮುಟ್ಟಿಸುತ್ತಿದೆ. ಈ ನಡುವೆ, ರಾಜ್ಯದ ಪ್ರಭಾವಿ ಸಚಿವರೊಬ್ಬರು ಮಹಾರಾಷ್ಟ್ರದ ಮಾಜಿ ಸಿಎಂ ಜೊತೆ ರಹಸ್ಯ ಸಭೆ ನಡೆಸಿರೋದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com