ಸಿಎಂ ಸ್ಥಾನದಲ್ಲಿ ಯಾವುದೇ ಬದಲಾವಣೆ ಇಲ್ಲ: ಊಹಾಪೋಹಗಳಿಗೆ ಬಿಎಸ್'ವೈ, ಸಚಿವರ ತೆರೆ

ಯಡಿಯೂರಪ್ಪ ಅವರು ದೆಹಲಿಗೆ ಹೋಗುತ್ತಿದ್ದಂತೆಯೇ ಇತ್ತ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದ ಬದಲಾವಣೆಯ ವದಂತಿಗಳು ಜೋರಾದ ಹಿನ್ನೆಲೆಯಲ್ಲಿ ಈ ಊಹಾಪೋಹಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವರು ಸ್ಪಷ್ಟನೆ ನೀಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಯಡಿಯೂರಪ್ಪ ಅವರು ದೆಹಲಿಗೆ ಹೋಗುತ್ತಿದ್ದಂತೆಯೇ ಇತ್ತ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದ ಬದಲಾವಣೆಯ ವದಂತಿಗಳು ಜೋರಾದ ಹಿನ್ನೆಲೆಯಲ್ಲಿ ಈ ಊಹಾಪೋಹಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವರು ಸ್ಪಷ್ಟನೆ ನೀಡಿದ್ದಾರೆ. 

ಪ್ರಧಾನಿ ಮೋದಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ಇಂತಹ ಯಾವುದೇ ಪ್ರಶ್ನೆಗಳು ಏಳುವುದೇ ಇಲ್ಲ. ಪ್ರಧಾನಮಂತ್ರಿಗಳೊಂದಿಗೆ ಬೆಂಗಳೂರು ಅಭಿವೃದ್ಧಿ ಕುರಿತಂತೆ ಮಾತುಕತೆ ನಡೆಸಲಾಯಿತು. ಈ ವೇಳೆ ಮೋದಿಯವರು ಅಹಮದಾಬಾದ್ ಅನ್ನು ಪರಿವರ್ತಿಸುವಲ್ಲಿ ಅಸಾಧಾರಣ ಕೆಲಸ ಮಾಡಿದ ಅಧಿಕಾರಿಯ ಹೆಸರನ್ನು ಸೂಚಿಸಿದರು. ಅಲ್ಲದೆ, ನನ್ನ ಆರೋಗ್ಯವನ್ನೂ ವಿಚಾರಿಸಿದರು ಎಂದು ಹೇಳಿದ್ದಾರೆ. 

ಮೈಸೂರಿನಲ್ಲಿ ಮಾತನಾಡಿದ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು, ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರವು ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿದೆ. ಬೇರೆಲ್ಲೂ ಇದರ ಬಗ್ಗೆ ಚರ್ಚೆಯಾಗುತ್ತಿಲ್ಲ. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವ ಯಾವುದೇ ಪ್ರಸ್ತಾಪ ನಡೆಯುತ್ತಿಲ್ಲ. ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರೆಂದು ಸ್ಪಷ್ಟಪಡಿಸಿದರು. 

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಕೃಷಿ ಸಚಿವ ಬಿಸಿ.ಪಾಟೀಲ್ ಅವರು, ನಾಯಕತ್ವ ಬದಲಾವಣೆ ಪ್ರಶ್ನೆ ಇಲ್ಲ. ಎಲ್ಲಾ ಊಹಾಪೋಹ. ನಾಲ್ಕು ಜನ ಸಚಿವರು ಸೇರಿದರೆ ಗುಂಪುಗಾರಿಕೆ ಎನ್ನುತ್ತಾರೆ. ದೆಹಲಿಗೆ ಹೋದರೆ ನಾಯಕತ್ವ ಬದಲಾವಣೆ ಎನ್ನುತ್ತಾರೆ. ಮುಂದಿನ ಮೂರು ವರ್ಷ ಯಡಿಯೂರಪ್ಪ ಸಿಎಂ ಆಗಿರುತ್ತಾರೆ. ಯಾರಿಗೂ ಸಂಶಯ ಬೇಡ. ಯಡಿಯೂರಪ್ಪ ಅವರು ಜಿಎಸ್'ಟಿ ಪರಿಹಾರ ಮತ್ತಿತರ ಹಣಕಾಸು ಪರಿಹಾರ ಕೇಳಲು ದೆಹಲಿಗೆ ಹೋಗಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. 

ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಅಂತಹ ಯಾವುದೇ ಸಾಧ್ಯತೆಗಳಿಲ್ಲ. ಶೇ.100ಕ್ಕೆ ನೂರರಷ್ಟು ಯಡಿಯೂರಪ್ಪನವರೇ ಮುಕ್ಯಮಂತ್ರಿಯಾಗಿರುತ್ತಾರೆ. ಸಚಿವ ಸಂಪುಟ ವಿಸ್ತರಣೆ ವಿಚಾರವು ಮುಖ್ಯಮಂತ್ರಿಗಳ ಪರಮಾಧಿಕಾರ. ಆ ಬಗ್ಗೆ ಅವರೇ ತೀರ್ಮಾ ತೆಗೆದುಕೊಂಡು ಕ್ರಮ ಕೈಗೊಳ್ಳುತ್ತಾರೆಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com