ಯಡಿಯೂರಪ್ಪ
ಯಡಿಯೂರಪ್ಪ

ಸಂಪುಟ ವಿಸ್ತರಣೆಗೆ ವರಿಷ್ಠರ ಅನುಮತಿಗಾಗಿ ಸಿಎಂ ನಿರೀಕ್ಷೆ: ಹನುಮಂತನ ಬಾಲದಂತೆ ಬೆಳೆಯುತ್ತಿದೆ ಆಕಾಂಕ್ಷಿಗಳ ಪಟ್ಟಿ

ರಾಜ್ಯ ವಿಧಾನಮಂಡಲದ ಅಧಿವೇಶನ ಪ್ರಾರಂಭವಾಗುವ ಬರುವ ಮುನ್ನವೇ ಸಂಪುಟ ವಿಸ್ತರಣೆ ಮಾಡಬೇಕು ಎನ್ನುವುದು ಸಿಎಂ ಯಡಿಯೂರಪ್ಪ ಆಪೇಕ್ಷೆಯಾಗಿದೆ.

ಬೆಂಗಳೂರು: ರಾಜ್ಯ ವಿಧಾನಮಂಡಲದ ಅಧಿವೇಶನ ಪ್ರಾರಂಭವಾಗುವ ಬರುವ ಮುನ್ನವೇ ಸಂಪುಟ ವಿಸ್ತರಣೆ ಮಾಡಬೇಕು ಎನ್ನುವುದು ಸಿಎಂ ಯಡಿಯೂರಪ್ಪ ಆಪೇಕ್ಷೆಯಾಗಿದೆ.

ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಂದಾಗಿದ್ದರೂ ದೆಹಲಿ ನಾಯಕರಿಂದ ಇಲ್ಲಿಯವರೆಗೂ ಸಂಪುಟ ವಿಸ್ತರಣೆಗೆ ಒಪ್ಪಿಗೆ  ದೊರೆಯದಿರುವುದು ಸಚಿವಾಕಾಂಕ್ಷಿ ಶಾಸಕರುಗಳಲ್ಲಿ ನಿರಾಸೆ ಉಂಟು ಮಾಡಿದೆ.

ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ನವರು, ಸಂಪುಟ ವಿಸ್ತರಣೆ, ರಾಜ್ಯದ ಅಭಿವೃದ್ಧಿ ವಿಚಾರಗಳ ಬಗ್ಗೆ ಪ್ರಧಾನಿ ಮೋದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರದ ಸಚಿವರುಗಳಾದ ನಿರ್ಮಲಾಸೀತಾರಾಮನ್, ರಾಜನಾಥ್‌ಸಿಂಗ್, ಪ್ರಕಾಶ್ ಜಾವ್ಡೇಕರ್, ಗಜೇಂದ್ರಸಿಂಗ್ ಶಕಾವತ್, ಧಮೇಂದ್ರಪ್ರಧಾನ್ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸೇರಿದಂತೆ ಹಲವು ನಾಯಕರುಗಳ ಜತೆ ಚರ್ಚೆ ನಡೆಸಿದ್ದಾರೆ. ಜೊತೆಗೆ ಹೈಕಮಾಂಡ್‌ನ ಅನುಮತಿಗಾಗಿ ಕಾಯುತ್ತಿದ್ದಾರೆ.
.
ಸದ್ಯ ಸಂಪುಟದಲ್ಲಿ ಆರು ಸ್ಥಾನಗಳು ಖಾಲಿಯಿವೆ. ಇರುವ ಕೆಲವೇ ಬೆರಳೆಣಿಕೆ ಸ್ಥಾನಕ್ಕೆ ಆಕಾಂಕ್ಷಿಗಳ ದಂಡು ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ. ಸರ್ಕಾರ ರಚನೆಗೆ ತಮ್ಮ ಸಚಿವ ಸ್ಥಾನವನ್ನೇ ತ್ಯಾಗ ಮಾಡಿದ್ದ ವಿಧಾನಪರಿಷತ್ ಸದಸ್ಯರಾದ ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್ ಸಂಪುಟಕ್ಕೆ ಸೇರ್ಪಡೆಯಾಗುವುದು ಪಕ್ಕ. 

ಉಳಿದಂತೆ ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಸಚಿವ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಮಾಜಿ ಸಚಿವ ಉಮೇಶ್ ಕತ್ತಿ, ,ಅರವಿಂದ ಲಿಂಬಾವಳಿ ಸೇರಿದಂತೆ ಅನೇಕರ ಹೆಸರುಗಳು ಸಚಿವ ಸ್ಥಾನದ ಪಟ್ಟಿಯಲ್ಲಿದೆ.

ಇರುವ 6 ಸ್ಥಾನಗಳಲ್ಲಿ ಮೂಲ ಮತ್ತು ವಲಸಿಗರ ನಡುವೆ ಸಮನಾಂತರವಾಗಿ ಹಂಚಿಕೆ ಮಾಡಬೇಕಿದೆ. ಪ್ರಾದೇಶಿಕ ಸಮತೋಲನ, ಸೇವಾ ಹಿರಿತನ, ಜಾತಿ, ಪಕ್ಷ ಸಂಘಟನೆ ಇತ್ಯಾದಿ ಪರಿಗಣಿಸಿಯೇ ಸಂಪುಟಕ್ಕೆ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.  ಒಂದು ವೇಳೆ ನಾಳೆ ಸಂಪುಟ ವಿಸ್ತರಣೆಯಾಗದಿದ್ದರೆ ಕಲಾಪ ಮುಗಿದ ಬಳಿಕ ಮುಹೂರ್ತ ನಿಗದಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.

Related Stories

No stories found.

Advertisement

X
Kannada Prabha
www.kannadaprabha.com