ರೈತರ ತೀರ್ಮಾನದಂತೆ ಭೂಸ್ವಾಧೀನ ಕೈಬಿಡಿಸುವುದು ನನ್ನ ಹೊಣೆ: ಮಾಜಿ ಸಿಎಂ ಕುಮಾರಸ್ವಾಮಿ

ಕೈಗಾರಿಕೋಧ್ಯಮಕ್ಕಾಗಿ ಸರ್ಕಾರ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವ ರೈತರ ಭೂಮಿಯನ್ನು ರೈತರಿಗೆ ಉಳಿಸಿಕೊಡುವುದು ನನ್ನ ಹೊಣೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ವಾಧೀನಕ್ಕೊಳಪಟ್ಟಿರುವ ಭೂಪ್ರದೇಶದ ರೈತರಿಗೆ ಭರವಸೆ ನೀಡಿದರು.

Published: 20th September 2020 12:17 PM  |   Last Updated: 20th September 2020 12:17 PM   |  A+A-


HD Kumaraswamy

ಮಾಜಿ ಸಿಎಂ ಕುಮಾರಸ್ವಾಮಿ

Posted By : Srinivasamurthy VN
Source : RC Network

ಮಂಡ್ಯ: ಕೈಗಾರಿಕೋಧ್ಯಮಕ್ಕಾಗಿ ಸರ್ಕಾರ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವ ರೈತರ ಭೂಮಿಯನ್ನು ರೈತರಿಗೆ ಉಳಿಸಿಕೊಡುವುದು ನನ್ನ ಹೊಣೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ವಾಧೀನಕ್ಕೊಳಪಟ್ಟಿರುವ ಭೂ ಪ್ರದೇಶದ ರೈತರಿಗೆ ಭರವಸೆ ನೀಡಿದರು.

ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿಯ ಹಟ್ನ ಗ್ರಾಮದ ಬಳಿ ಭೂಸ್ವಾಧೀನಕ್ಕೊಳಪಟ್ಟಿರುವ ಭೂಮಿಯ ರೈತರ ಜತೆ ಸಭೆ ನಡೆಸಿ, ರೈತರ ಮನವಿಯನ್ನಾಲಿಸಿ ಶನಿವಾರ ಮಾತನಾಡಿದರು. ರೈತರ ಭಾವನೆಗಳಿಗೆ ದೇವೇಗೌಡರ ಕುಟುಂಬ ಇದುವರೆಗೂ ವಿರುದ್ದವಾಗಿ ನಡೆದಿಲ್ಲ. ರೈತರೇ ನಮ್ಮೆಲ್ಲರ ಶಕ್ತಿ  ಎಂಬ ಸಿದ್ದಾಂತದಡಿ ಬದುಕುತ್ತಿರುವವರು ನಾವು. ನಮ್ಮ ಕುಂಟುಂಬ ರಾಜಕಾರಣಕ್ಕಾಗಿ ಬಂದವರಲ್ಲ. ರೈತರ ಪರ ಹೋರಾಟ ಮಾಡುವ ಮೂಲಕ ರಾಜಕಾರಣ ಪ್ರವೇಶಿಸಿದವರು. ರೈತರ ಶಾಪಕ್ಕೆ ಒಳಗಾದರೆ ನಾವು ಬದುಕಿದ್ದು ಸತ್ತಂತೆ ಎಂದು ಜೀವಿಸುತ್ತಿದ್ದೇವೆ. ಎರಡನೇ ಬಾರಿ ರಾಜ್ಯದ ಸಿಎಂ ಸ್ಥಾನ ನೀಡಿದ  ಕೊಡುಗೆಯಲ್ಲಿ ಈ ಜಿಲ್ಲೆಯ ಜನತೆಯ ಪಾತ್ರ ಅಪಾರ. ನಮ್ಮನ್ನ ಬೆಳೆಸಿರುವವರು ನೀವು. ನಿಮ್ಮನ್ನು ಸಂಕಷ್ಟಕ್ಕೆ ದೂಡಿ ನಾವು ಅಧಿಕಾರ ನಡೆಸುವಂತಹ ದುಸ್ಥಿತಿ ನಮಗಿನ್ನು ಬಂದಿಲ್ಲ. ರೈತರ ಏಳ್ಗೆಗಾಗಿಯೆ ನಾನಿನ್ನು ರಾಜಕೀಯದಲ್ಲಿದ್ದೇನೆ. ರೈತರ ಸರ್ವತೋಮುಖ ಅಭಿವೃದ್ದಿ ನನ್ನ ಗುರಿ. ಅದನ್ನು ಮುಂದಿನ  ದಿನಗಳಲ್ಲಾದರೂ ಈಡೇರಿಸಿಯೇ ತೀರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ವಾಮೀಜಿಯವರು ಮತ್ತು ಶಾಸಕ ಸುರೇಶ್‌ಗೌಡರು ಕೋರಿಕೆಯ ಮೇರೆಗೆ ನಾಗಮಂಗಲ ವ್ಯಾಪ್ತಿಯ 300-400 ಎಕರೆ ಭೂಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಗೆ ಅದಿಸೂಚನೆ ಹೊರಡಿಸಿದ್ದೆ. ಆದರೆ ಬದಲಾದ ಸರ್ಕಾರ 1277 ಎಕರೆ ಮಾಡಿರುವುದು ನನಗೆ ಗೊತ್ತಿಲ್ಲ. ರೈತರ ಬದುಕನ್ನು ಹಾಳುಮಾಡಿ ಕೈಗಾರಿಕೆ  ಸ್ಥಾಪನೆ ಮಾಡುವುದು ನನ್ನ ಮನಸ್ಸಿನಲಿಲ್ಲ. ತಾಲೂಕಿನ ಜನ ನಮ್ಮನ್ನು ಎಂದೂ ಕೈಬಿಟ್ಟಿಲ್ಲ. ಅದಕ್ಕೆ ನಾನು ಚಿರಋಣಿಯಾಗಿರುತ್ತೇನೆ. ದೇವೇಗೌಡರು ಓಡಾಡಿದ ಈ ಪ್ರದೇಶದಲ್ಲಿ ರೈತರಿಗೆ ಅನ್ಯಾಯವಾಗಲು ಎಂದೂ ಬಿಡುವುದಿಲ್ಲ. ರೈತರ ತೀರ್ಮಾನವೇ ಅಂತಿಮ ತೀರ್ಮಾನ. ನಿಮ್ಮೇಲ್ಲರ ಕೋರಿಕೆಯಂತೆ ನಿಮ್ಮ  ಜಮೀನನ್ನು ನಿಮ್ಮಂತೆಯೇ ಉಳಿಸಿಕೊಡುವುದು ನನ್ನ ಹೊಣೆ. ಏಕೆಂದರೆ ನಿಮ್ಮೆಲ್ಲರ ಋಣ ತೀರಿಸಲು ಇದೊಂದು ಸದಾವಕಾಶವಾಗಿದೆ ಎಂದರು.

ಸ್ವಪಕ್ಷದ ಶಾಸಕರ ವಿರುದ್ದ ಅಸಮಧಾನ:
ಮೈತ್ರಿ ಸರ್ಕಾರದ ನನ್ನ ಅವಧಿಯ ಬಜೇಟ್‌ನಲ್ಲಿ ಮಂಡ್ಯ ಜಿಲ್ಲೆಗೆ ನೀಡಲಾಗಿದ್ದ 9 ಸಾವಿರ ಕೋಟಿ ಅನುದಾನವನ್ನು ಆಗಿನ ಈ ಜಿಲ್ಲೆಯಲ್ಲಿದ್ದ ನಮ್ಮ ಪಕ್ಷದ ಇಬ್ಬರು ಸಚಿವರು ಸೂಕ್ತ ಸಮಯದಲ್ಲಿ ಸದುಪಯೋಗಪಡಿಸಿಕೊಂಡಿದ್ದರೆ ಇಂದು ಆ ಅನುದಾನ ಹಿಂದಿರುಗುವ ಪ್ರಮೆಯವೇ ಇರುತ್ತಿರಲಿಲ್ಲ. ಮಂಡ್ಯ ಜಿಲ್ಲೆಯ  ಜನತೆಯ ಋಣ ತೀರಿಸಲು ನಾನು ನೀಡಿದ್ದ ಅನುದಾನವನ್ನು ವಾಪಸ್ಸು ಪಡೆಯಲಾಗಿದೆ. ಮಂಡ್ಯ ಈ ಹಿಂದೆ ಹೇಗಿತ್ತೊ ಈಗಲೂ ಆದೇ ರೀತಿ ಇದೆ. ಇದು ನನಗೆ ಬೇಸರವಾದ ವಿಷಯವಾಗಿದೆ ಎಂದು ಸ್ವಪಕ್ಷದ ಶಾಸಕರ ಕಾರ್ಯವೈಖರಿ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.

ದೇವರ ಸಹಕಾರವಿಲ್ಲದ ಬಿಜೆಪಿ ಸರ್ಕಾರ:
ನನ್ನ ಸರ್ಕಾರ ಕೆಟ್ಟ ಸರ್ಕಾರ ಎಂದು ಕೆಳಗಿಳಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರಕ್ಕೆ ದೇವರ ಸಹಕಾರವಿಲ್ಲ ಎಂಬುದಕ್ಕೆ ಅಧಿಕಾರಕ್ಕೆ ಬಂದ ದಿನದಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಜೀವನ ಸಾಗಿಸಲು ಕಷ್ಟಸಾಧ್ಯವಾದ ಜನತೆಯ ಜೀವನವೆ ಸಾಕ್ಷಿ. ಪಕೃತಿ ವಿಕೋಪ, ಮಾರಕ ರೋಗಗಳು ಹಾಗೂ  ಪ್ರವಾಹದಿಂದ ಚೇತರಿಸಿಕೊಳ್ಳಲಾಗದೆ ತತ್ತರಿಸಿಹೋಗಿದೆ. 

ಸಿಆರ್‌ಎಸ್‌ಗೆ ಟಾಂಗ್ ನೀಡಿದ ಹೆಚ್‌ಡಿಕೆ:
ದೇವೇಗೌಡರ ಹೋರಾಟದ ಬಗ್ಗೆ ವ್ಯಂಗ್ಯವಾಡಿದ್ದಕ್ಕೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ದೇವೇಗೌಡರ ಹೋರಾಟದ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ. ಅವರ ಹೋರಾಟವನ್ನು ಇಡೀ ದೇಶವೇ ನೋಡಿದೆ. ಕ್ರಷರ್ ಮಾತ್ರವಲ್ಲದೆ, ಅನ್ಯಾಯ ನಡೆಯುವ ವಿಷಯ ತಿಳಿದರೆ ಮೋರಿ ಕ್ಲೀನ್ ಮಾಡಿಸುವುದಕ್ಕೂ ಬರ್ತಾರೆ.  ಪ್ರಧಾನಿಯಾಗಿದ್ದಾಗಲೆ ಬೆಂಗಳೂರಿನಲ್ಲಿ ಸೀಮೆಎಣ್ಣೆ ಡಬ್ಬಿ ಹಿಡಿದು ಹೋರಾಟ ನಡೆಸಿದವರು. ರೈತರ ಭೂಸ್ವಾಧೀನ ವಿಷಯದಲ್ಲಿ ನಮ್ಮ ಹೋರಾಟದ ಬಗ್ಗೆ ಪ್ರಶ್ನಿಸಿದವರು ನಮ್ಮ ರೈತಪರ ಹೋರಾಟದ ಬಗ್ಗೆ ಈಗಾಲಾದರೂ ಅರ್ಥ ಮಾಡಿಕೊಳ್ಳಲಿ ಎಂದು ಸಿಆರ್‌ಎಸ್‌ಗೆ ಟಾಂಗ್ ನೀಡಿದರು.

ವೇದಿಕೆಯಲ್ಲಿ ಶಾಸಕ ಸುರೇಶ್‌ಗೌಡ ಮಾತನಾಡಿ, ಭೂಸ್ವಾಧೀನ ವಿಷಯದಲ್ಲಿ ರಾಜಕೀಯ ಬೇಡ. ಸರ್ಕಾರ ಭೂಸ್ವಾಧೀನ ಕೈಬಿಡುವ ವಿಷಯದಲ್ಲಿ ನಿಮ್ಮ ಒಗ್ಗಟ್ಟು ಹೊಡೆದರೆ ನಮ್ಮ ಹೋರಾಟದ ಶಕ್ತಿ ಕುಂದುತ್ತದೆ. ನಾವು ನಿಮ್ಮ ವಿರೋಧಿಗಳಲ್ಲ. ಕೈಗಾರಿಕೆ ನಮ್ಮ ತಾಲೂಕಿಗೆ ಬಾರದಿದ್ದರೂ ಪರವಾಗಿಲ್ಲ. ನಾವು  ನಿಮ್ಮಪರವಾದ ಧ್ವನಿಯಾಗಿರುತ್ತೇವೆ ಎಂದು ಅಂಕಿ ಅಂಶಗಳೊಂದಿಗೆ ರೈತರಿಗೆ ಮನವರಿಕೆ ಮಾಡಿಕೊಟ್ಟರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ  ಹಾಗೂ ಮಾಜಿ ಸಂಸದ ಶಿವರಾಮೇಗೌಡ ಮಾತನಾಡಿದರು. ಇದೇ ವೇದಿಕೆಯಲ್ಲಿ ಭೂಮಿಯನ್ನು ಉಳಿಸಿಕೊಡುವಂತೆ ನೂರಾರು ರೈತರು ಮನವಿ  ಸಲ್ಲಿಸಿದರು. ಜಿ.ಪಂ. ಸದಸ್ಯರಾದ ಮುತ್ತಣ್ಣ ಮತ್ತು ಹೆಚ್.ಟಿ.ಮಂಜುನಾಥ್, ಮನ್ಮುಲ್ ನಿರ್ದೇಶಕ ನೆಲ್ಲಿಗೆರೆ ಬಾಲು, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್, ಸ್ಥಳೀಯ ಮುಖಂಡರಾದ ಗರುಡನಹಳ್ಳಿ ಶ್ರೀನಿವಾಸ್ ಹಾಗೂ ಬಿಳಗುಂದ ದಾಸಶೆಟ್ಟಿ ಸೇರಿದಂತೆ 500 ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.

-ನಾಗಯ್ಯ

Stay up to date on all the latest ರಾಜಕೀಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp