ಅತಿಥಿ ಉಪನ್ಯಾಸರಿಗೆ ವೇತನ ನೀಡದ ಸ್ವಪಕ್ಷ ಸರ್ಕಾರದ ವಿರುದ್ಧ ಆಯನೂರು ಮಂಜುನಾಥ್ ಧರಣಿ

ಅತಿಥಿ ಉಪನ್ಯಾಸಕರಿಗೆ ವೇತನ ನೀಡದ ಸರ್ಕಾರದ ನಿಲುವನ್ನು ಖಂಡಿಸಿ ಆಡಳಿತ ಪಕ್ಷದ ಸದಸ್ಯರೇ ಸದನದ ಬಾವಿಗಿಳಿದು ಧರಣಿ ನಡೆಸಿದ ಅಪರೂಪದ ಘಟನೆ ಮಂಗಳವಾರ ವಿಧಾನ ಪರಿಷತ್ ನಲ್ಲಿ ನಡೆಯಿತು.
ಆಯನೂರು ಮಂಜುನಾಥ್
ಆಯನೂರು ಮಂಜುನಾಥ್

ಬೆಂಗಳೂರು: ಅತಿಥಿ ಉಪನ್ಯಾಸಕರಿಗೆ ವೇತನ ನೀಡದ ಸರ್ಕಾರದ ನಿಲುವನ್ನು ಖಂಡಿಸಿ ಆಡಳಿತ ಪಕ್ಷದ ಸದಸ್ಯರೇ ಸದನದ ಬಾವಿಗಿಳಿದು ಧರಣಿ ನಡೆಸಿದ ಅಪರೂಪದ ಘಟನೆ ಮಂಗಳವಾರ ವಿಧಾನ ಪರಿಷತ್ ನಲ್ಲಿ ನಡೆಯಿತು.

ವಿಧಾನ ಪರಿಷತ್ ಕಲಾಪದ ಶೂನ್ಯವೇಳೆಯಲ್ಲಿ ಅತಿಥಿ ಉಪನ್ಯಾಸಕರ ವೇತನ ವಿಷಯ ಕುರಿತು ಪ್ರಸ್ತಾಪ ಮಾಡಿದ ಆಡಳಿತಾರೂಢ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ಸರ್ಕಾರಿ ಪದವಿ ಕಾಲೇಜಿನಲ್ಲಿ ಶೇ.70 ರಷ್ಟು ಅತಿಥಿ ಉಪನ್ಯಾಸಕರಿದ್ದಾರೆ. ಮಾರ್ಚ್ ನಿಂದ ಅವರಿಗೆ ವೇತನವನ್ನೇ ಕೊಟ್ಟಿಲ್ಲ. ಸರ್ಕಾರವನ್ನು ಕೇಳಿದರೆ ಅವರನ್ನು 10 ತಿಂಗಳಿಗೆ ಗುತ್ತಿಗೆ ಮೇಲೆ ನೇಮಕಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ ಸರ್ಕಾರದ್ದೇ ಸುತ್ತೋಲೆ ಇದೆ. ಕೋವಿಡ್ ಸಮಯದಲ್ಲಿ ವೇತನ ಕಡಿತ ಮಾಡಬಾರದೆಂಬ ಸೂಚನೆಯನ್ನು ಸರ್ಕಾರವೇ ನೀಡಿದೆ. ಆದರೂ ಉಪನ್ಯಾಸಕರಿಗೆ ವೇತನ ನೀಡಿಲ್ಲ. ಈವರೆಗೂ ಲಾಸ್ಟ್ ವರ್ಕಿಂಗ್ ಡೇ ಘೋಷಣೆ ಮಾಡಿಲ್ಲ ಎಂದು ತಮ್ಮದೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

‌ಕೋವಿಡ್ ಸಮಯದಲ್ಲಿಯೂ ಕಾಲೇಜುಗಳ ಎಲ್ಲಾ ಕರ್ತವ್ಯಕ್ಕೂ ಅವರನ್ನು ಬಳಕೆ ಮಾಡಿಕೊಳ್ಳಲಾಗಿದೆ. ರಾಜ್ಯ ಸರ್ಕಾರ ವೇತನ ನೀಡದೇ ದುಡಿಸಿಕೊಂಡಿದೆ. ವೇತನ ಇಲ್ಲದೆ ಈಗಾಗಲೇ ನಾಲ್ಕಾರು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಬದುಕಲೂ ಕಷ್ಟವಾದ ಸ್ಥಿತಿಯಲ್ಲಿದ್ದಾರೆ. ಉಪವಾಸದಿಂದ ಇರುವ ಸ್ಥಿತಿ ಅವರಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಕ್ಕೆ ಸರ್ಕಾರ ಪರಿಹಾರವನ್ನು ನೀಡಿಲ್ಲ. ಅಲ್ಲದೆ ಸರ್ಕಾರ ವೇತನ ವಿಚಾರದಲ್ಲಿ ಸದನಕ್ಕೆ ತಪ್ಪು ಮಾಹಿತಿ ನೀಡಿದೆ. ಕೂಡಲೇ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು, ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್ ಕಡೆಯಿಂದ ಉತ್ತರ ಕೊಡಿಸುವ ಭರವಸೆ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಯನೂರು ಮಂಜುನಾಥ್, ಆಡಳಿತ ಪಕ್ಷದ ಸದಸ್ಯರಾಗಿದ್ದರೂ ಸರ್ಕಾರದಿಂದ ಉತ್ತರ ಬರುವವರೆಗೂ ಧರಣಿ ನಡೆಸುವುದಾಗಿ ಘೋಷಿಸಿ ಸದನದ ಬಾವಿಗಿಳಿದು ಪ್ರತಿಭಟನೆ ಆರಂಭಿಸಿದರು.

ಆಡಳಿತ ಪಕ್ಷದ ಸದಸ್ಯರೇ ಧರಣಿ ನಡೆಸಿದ್ದರಿಂದ ಸರ್ಕಾರಕ್ಕೆ ಮುಜುಗರವುಂಟಾಯಿತು. ಕೋಟಾ ಶ್ರೀನಿವಾಸ ಪೂಜಾರಿ ಪದೇ ಪದೇ ಮಾಡಿದ ಮನವಿಗೂ ಆಯನೂರು ಮಂಜುನಾಥ್ ಸ್ಪಂಧಿಸದೇ ಧರಣಿ ಮುಂದುವರೆಸಿದರು. ನಂತರ ಆಯನೂರು ಮಂಜುನಾಥ್ ಗೆ ಪ್ರತಿಪಕ್ಷ ಸದಸ್ಯರೂ ಬೆಂಬಲ ನೀಡಿ, ಸದನದ ಬಾವಿಗಿಳಿದು ಧರಣಿ ನಡೆಸಿದರು. ಇದರಿಂದ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿ ಸದನ ಸಹಜ ಸ್ಥಿತಿಗೆ ಬಾರದ ಹಿನ್ನಲೆಯಲ್ಲಿ ಕಲಾಪವನ್ನು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ 20 ನಿಮಿಷಗಳ ಕಾಲ ಮುಂದೂಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com