ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಲಂಚ ಪ್ರಕರಣ: ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಆಗ್ರಹ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಪಾರ್ಟ್ ಮೆಂಟ್ ಕಾಮಗಾರಿಯಲ್ಲಿ ಬಿಡಿಎ ಆಯುಕ್ತರ ಮೂಲಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಕುಟುಂಬ ಸದಸ್ಯರು ಲಂಚ ಪಡೆದಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು...
ಕಾಂಗ್ರೆಸ್ ನಾಯಕರ ಸುದ್ದಿಗೋಷ್ಠಿ
ಕಾಂಗ್ರೆಸ್ ನಾಯಕರ ಸುದ್ದಿಗೋಷ್ಠಿ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಪಾರ್ಟ್ ಮೆಂಟ್ ಕಾಮಗಾರಿಯಲ್ಲಿ ಬಿಡಿಎ ಆಯುಕ್ತರ ಮೂಲಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಕುಟುಂಬ ಸದಸ್ಯರು ಲಂಚ ಪಡೆದಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಹಾಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರು ಅಥವಾ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಬುಧವಾರ ಆಗ್ರಹಿಸಿದೆ.

ಪ್ರಕರಣದ ತನಿಖೆ ಮುಗಿಯುವವರೆಗೂ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಯಡಿಯೂರಪ್ಪನವರು ಈ ಹಿಂದೆ ಚೆಕ್ ಮೂಲಕ ಲಂಚ ಪಡೆದಿದ್ದರು. ಈ ಬಾರಿ ಆರ್ ಟಿಜಿಎಸ್ ಮೂಲಕ ಲಂಚ ಪಡೆದಿದ್ದಾರೆ. ಇವರಿಗೆ ಭ್ರಷ್ಟಾಚಾರ ಮಾಡಲು ಎಷ್ಟು ಆತುರವಿದೆ ಎಂದರೆ ಬ್ಯಾಂಕ್ ವ್ಯವಹಾರದ ಮೂಲಕವೇ ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು. 

ವಿಜಯೇಂದ್ರ ಅವರು ತಮಗೆ ಬಿಡಿಎ ಆಯುಕ್ತರು ಹಣ ನೀಡಿಲ್ಲ ಎಂದು ವರ್ಗಾವಣೆ ಮಾಡಲು ಶಿಫಾರಸ್ಸು ಮಾಡಿರುವುದು ಆಡಿಯೋದಲ್ಲಿ ಸ್ಪಷ್ಟವಾಗಿದೆ. ಇಷ್ಟೆಲ್ಲಾ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ಇದ್ದರೂ ಅವರ ವಿರುದ್ಧ ಕ್ರಮ ಏಕೆ ಕೈಗೊಂಡಿಲ್ಲ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ದುರಾಡಳಿತ ಮತ್ತು ಭ್ರಷ್ಟಾಚಾರ ಎರಡೂ ಒಟ್ಟಿಗೆ ಸಾಗುತ್ತಿವೆ. ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ. ಒಂದು ಬಿ.ಎಸ್. ಯಡಿಯೂರಪ್ಪ ನಾಮಕಾವಸ್ತೆ ಮುಖ್ಯಮಂತ್ರಿ. ಇನ್ನೊಬ್ಬರು ಅವರ ಪುತ್ರ ಬಿ.ವೈ. ವಿಜಯೇಂದ್ರ ಸೂಪರ್ ಸಿಎಂ.‌ ಇದಲ್ಲದೆ ಯಡಿಯೂರಪ್ಪ ಅವರ ಮೊಮ್ಮಕ್ಕಳು ಕೂಡ ನೇರವಾಗಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಿಡಿಎ ನಿಂದ 576 ಕೋಟಿ ರೂಪಾಯಿಗೆ ಹೌಸಗ್ ಪ್ರಾಜೆಕ್ಟ್ ಟೆಂಡರ್ ಘೋಷಣೆ ಮಾಡಲಾಗಿದೆ. ಟೆಂಡರ್ ನಲ್ಲಿ ಇಬ್ಬರು ಬಿಲ್ಡರ್ ಪಾರ್ಟಿಸಿಪೇಟ್ ಮಾಡ್ತಾರೆ. ರಾಮಲಿಂಗಂ ಕನ್ ಸ್ಟ್ರಕ್ಷನ್ ಕಂಪನಿ ಕೂಡ ಇರುತ್ತೆ. ರಾಮಲಿಂಗಂ ಕನ್ಸ್ ಸ್ಟ್ರಕ್ಷನ್ ಕಂಪನಿಗೆ 22/02/2020ರಲ್ಲಿ ಒಪ್ಪಿಗೆ ಪತ್ರವನ್ನು ನೀಡಲಾಗುತ್ತೆ. ಆ ಬಳಿಕ ವಿಜಯೇಂದ್ರ ರಾಮಲಿಂಗಂ ಕಂಪನಿ ಮಾಲೀಕರಿಗೆ ಕರೆ ಮಾಡಿ ಟೆಂಡರ್ ಕ್ಲೋಸ್ ಮಾಡುವ ಬೆದರಿಕೆ ಹಾಕುತ್ತಾರೆ.‌ ತಮ್ಮ ಆಪ್ತ ಹೊಟೇಲ್ ಮಾಲಿಕನಿಗೆ ಹಣ ನೀಡುವಂತೆ ಸೂಚನೆ ನೀಡುತ್ತಾರೆ. ವಿಜಯೇಂದ್ರನಿಗೆ ಕೊಡುವುದಾಗಿ ಹೇಳಿ  ಬಿಡಿಎ ಆಯುಕ್ತ ಪ್ರಕಾಶ್ 12 ಕೋಟಿ ಹಣ ಪಡೆಯುತ್ತಾರೆ. ಈ ವೇಳೆ ಕಂಟ್ರಾಕ್ಟರ್ ಗೆ ವಿಜಯೇಂದ್ರ ಫೋನ್ ಮಾಡಿ 'ಹಣ ಬಂದಿಲ್ಲವಲ್ಲ' ಅಂತಾ ಕೇಳುತ್ತಾರೆ‌. ಪ್ರಕಾಶ್ ಗೆ ಕೊಟ್ಟೆ ಅಂತಾ ಕಂಟ್ರಾಕ್ಟರ್ ಹೇಳುತ್ತಾರೆ. ವಿಜಯೇಂದ್ರ ಪ್ರಾಮಾಣಿಕರಾಗಿದ್ದರೆ ಬಿಡಿಎ ಕಮೀಷನರ್, ಕಂಟ್ರಾಕ್ಟರ್ ಮೇಲೆ ಕೇಸ್ ಯಾಕೆ ಹಾಕಲಿಲ್ಲ. ಏಕೆಂದರೆ ಪ್ರಕಾಶ್ ಬಿಡಿಎ ಕಮೀಷನರ್ ಆಗೋಕೆ 15 ಕೋಟಿ ರೂಪಾಯಿ ಕೊಟ್ಟಿದ್ದಾರೆ.‌ ಆನಂತರ ಕಂಟ್ರಾಕ್ಟರ್ ಯಡಿಯೂರಪ್ಪ ಮೊಮ್ಮಗ ಶಶಿಧರ್ ಮರಡಿ ಅಕೌಂಟಿಗೆ 7.40 ಕೋಟಿ ರೂಪಾಯಿಗಳನ್ನು ಆರ್ ಟಿಜಿಎಸ್ ಮಾಡುತ್ತಾರೆ.‌ ಇದು ಶೇಷಾದ್ರಿಪುರಂನ HDFC ಬ್ಯಾಂಕ್ ಅಕೌಂಟ್ ಗೆ ಹಣ ಸಂದಾಯವಾಗುತ್ತದೆ ಎಂದು ಭ್ರಷ್ಟಾಚಾರದ ಕರ್ಮಕಾಂಡವನ್ನು ಬಿಚ್ಚಿಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com