ಸರಗೂರು ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಜಯಭೇರಿ: ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಮುಖಭಂಗ
ಮೈಸೂರಿನ ಸರಗೂರು ಪಟ್ಟಣ ಪಂಚಾಯಿತಿಯ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ 6 ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಜಯಭೇರಿ ಬಾರಿಸಿದ್ದಾರೆ.
Published: 01st April 2021 08:55 AM | Last Updated: 01st April 2021 12:13 PM | A+A A-

ಸಿದ್ದರಾಮಯ್ಯ
ಮೈಸೂರು: ಮೈಸೂರಿನ ಸರಗೂರು ಪಟ್ಟಣ ಪಂಚಾಯಿತಿಯ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ 6 ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಜಯಭೇರಿ ಬಾರಿಸಿದ್ದಾರೆ.
ಜೆಡಿಎಸ್ನ 3 ಅಭ್ಯರ್ಥಿಗಳು, ಕಾಂಗ್ರೆಸ್ನ ಇಬ್ಬರು ಮತ್ತು ಒಬ್ಬ ಪಕ್ಷೇತರರು ಗೆಲುವು ಸಾಧಿಸಿದ್ದಾರೆ, ಕಾಂಗ್ರೆಸ್ ಪಕ್ಷವು 3ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದು ತೀವ್ರ ಮುಖಭಂಗ ಅನುಭವಿಸಿದೆ.
ಎಚ್ ಡಿ ಕೋಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಈ ಚುನಾವಣೆ ಫಲಿತಾಂಶ ಮುಖಭಂಗ ಉಂಟುಮಾಡಿದೆ. ಬಿಜೆಪಿ ಇಲ್ಲಿ ಅನಿರೀಕ್ಷಿತ ಫಲಿತಾಂಶ ಪಡೆಯುವ ಮೂಲಕ ಅತೀ ಹೆಚ್ಚು ಸ್ಥಾನ ಗೆದ್ದಿದೆ. ಪಕ್ಷೇತರರ ಬೆಂಬಲ ಅಥವಾ ಜಿಡಿಎಸ್ ಬೆಂಬಲದಿಂದ ಬಿಜೆಪಿ ಪಟ್ಟಣ ಪಂಚಾಯತ್ನ ಅಧಿಕಾರ ಹಿಡಿಯುವ ಸಾಧ್ಯತೆ ಇದೆ.
ಎಚ್ ಡಿ ಕೋಟೆ ತಾಲೂಕಿನಲ್ಲಿರುವ ಸರಗೂರು ಪಟ್ಟಣ ಪಂಚಾಯಿತಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆಗೆ ಸೇರಿದೆ. ಸಿದ್ದರಾಮಯ್ಯ ಪ್ರಾಬಲ್ಯವಿದ್ದರೂ ಬಿಜೆಪಿ ಗೆಲುವಿನ ನಗೆ ಬೀರಿದೆ. ಈ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಹಲವು ಮಹಿಳೆಯರು ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.