ಅರುಣ್ ಸಿಂಗ್ ಇಡೀ ರಾಜ್ಯಕ್ಕೇ ಉಸ್ತುವಾರಿ, ಬರೀ ಸಿಎಂಗೆ ಅಲ್ಲ, ಎಲ್ಲಾ ಖಾತೆಗಳನ್ನು ವಿಜಯೇಂದ್ರಗೇ ನೀಡಿ: ಯತ್ನಾಳ್
ಎಲ್ಲಾ ಮಂತ್ರಿಗಳು ಯಾಕೆ ಬೇಕು, ಎಲ್ಲಾ ಖಾತೆಗಳನ್ನು ನಿಮ್ಮ ಮಗ ವಿಜಯೇಂದ್ರಗೇ ವಹಿಸಿಕೊಡುವುದು ಸೂಕ್ತ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published: 02nd April 2021 05:12 PM | Last Updated: 02nd April 2021 06:05 PM | A+A A-

ಬಸನಗೌಡ ಪಾಟೀಲ್ ಯತ್ನಾಳ್
ವಿಜಯಪುರ: ಸಚಿವರ ಖಾತೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಎಲ್ಲಾ ಮಂತ್ರಿಗಳು ಯಾಕೆ ಬೇಕು, ಎಲ್ಲಾ ಖಾತೆಗಳನ್ನು ನಿಮ್ಮ ಮಗ ವಿಜಯೇಂದ್ರಗೇ ವಹಿಸಿಕೊಡುವುದು ಸೂಕ್ತ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಯಡಿಯೂರಪ್ಪ ಅವರು ತಮ್ಮ ಖಾತೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಹಾಗೂ ಪಕ್ಷದ ಹೈಕಮಾಂಡ್ ಗೆ ಪತ್ರ ಬರೆದಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರ ಅವರನ್ನು ಸಮರ್ಥಸಿಕೊಂಡ ಯತ್ನಾಳ್ ಅವರು, ಯಡಿಯೂರಪ್ಪ ಅವರು ಈಶ್ವರಪ್ಪ ಅವರ ಖಾತೆಯಲ್ಲಿ ಹಸ್ತಕ್ಷೇಪ ಮಾಡಿದ್ದು ಸರಿಯಲ್ಲ ಎಂದರು.
ನೀವು ಎಲ್ಲಾ ಇಲಾಖೆಗಳಲ್ಲೂ ಹಸ್ತಕ್ಷೇಪ ಮಾಡುವುದಾದರೆ ಯಾವುದಕ್ಕೆ ಸಚಿವ ಸಂಪುಟ ಬೇಕು?. ಮುಖ್ಯಮಂತ್ರಿಗಳು ಎಂದರೆ ಏನು? ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದರು.
ಯಡಿಯೂರಪ್ಪ ಅವರ ತಮ್ಮ ಪುತ್ರ ವಿಜಯೇಂದ್ರ ಹೇಳಿದರೆ ರಾತ್ರೋರಾತ್ರಿ ಹಣ ಬಿಡುಗಡೆ ಆಗುತ್ತದೆ. ಕೊಪ್ಪಳಕ್ಕೆ ಹಣ ಬಿಡುಗಡೆ ಮಾಡಿದ್ದಕ್ಕೆ ವಿಜಯೇಂದ್ರಗೆ ಅಭಿನಂದನೆ ಸಲ್ಲಿಸಲಾಗಿದೆ. ಅವರು ಯಾವ ಸಂವಿಧಾನಿಕ ಹುದ್ದೆಯಲ್ಲಿದ್ದಾರೆ?. ಅಪ್ಪ-ಮಕ್ಕಳು ಕಾವೇರಿ ಮನೆಯಲ್ಲಿ ಕೂತು ಎಲ್ಲಾ ಇಲಾಖೆಗಳನ್ನು ಡೀಲ್ ಮಾಡುತ್ತಿದ್ದಾರೆ ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದರು.
ಯಾವ ಸಚಿವರಿಗೂ ತಮ್ಮ ಖಾತೆ ಬಗ್ಗೆ ಸ್ವತಂತ್ರ ತೀರ್ಮಾನ ಕೈಗೊಳ್ಳುವ ಅಧಿಕಾರವಿಲ್ಲ. 'ಡಿ' ಗ್ರೂಪ್ ನೌಕರರನ್ನು ವರ್ಗಾವಣೆ ಮಾಡಲು ಅವರಿಗೆ ಅಧಿಕಾರವಿಲ್ಲ. ಈಶ್ವರಪ್ಪ ಅವರು ಎತ್ತಿದ್ದು ಗೌರವಾನ್ವಿತ ಪ್ರಶ್ನೆಯಾಗಿದೆ. ಯಾರಿಗಾದರೂ ಹೇಳಲೇ ಬೇಕಲ್ಲ ಎಂದರು.
ಇದೇ ವೇಳೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಿರುದ್ಧವೂ ವಾಗ್ದಾಳಿ ನಡೆಸಿದ ಯತ್ನಾಳ್, ಅವರು ರಾಜ್ಯಕ್ಕೆ ಉಸ್ತುವಾರಿಯೇ ಅಥವಾ ಸಿಎಂ ಯಡಿಯೂರಪ್ಪ ಅವರ ಉಸ್ತುವಾರಿಯೇ? ಎಂದು ಪ್ರಶ್ನಿಸಿದರು.
ಮೇ 2 ರೊಳಗೆ ಪಕ್ಷದಲ್ಲಿ ಭಾರಿ ಸ್ಫೋಟವಾಗಲಿದೆ ಎಂದರ ಯತ್ನಾಳ್, ಮೇ 2ರೊಳೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಬದಲಾಗದಿದ್ದರೆ ಇನ್ನೂ ದೊಡ್ಡ ಸ್ಫೋಟವಾಗಲಿದೆ. ಬಿಜೆಪಿಯನ್ನು ಈ ಹಿಂದೆ ಕಟ್ಟಿದವರು ಸಚಿವ ಈಶ್ವರಪ್ಪ. ನಾವು ಪಕ್ಷ ಕಟ್ಟುವಾಗ ವಿಜಯೇಂದ್ರಗೆ ಚಡ್ಡಿ ಹಾಕಲು ಬರುತ್ತಿರಲಿಲ್ಲ ಎಂದರು.