2 ಕೆ.ಜಿ. ಅಕ್ಕಿ ಕಡಿಮೆಯಾಗಿದೆ ಅಷ್ಟೇ - ಬಿ.ಸಿ. ಪಾಟೀಲ್; ಸಿದ್ದರಾಮಯ್ಯ ಭಾಷೆ ಖಂಡನಾರ್ಹ ಎಂದ ಬೈರತಿ

ನಿಮ್ಮ ಕಾಲದಲ್ಲಿ ಕೊಡುತ್ತಿದ್ದಂತೆಯೇ ಈಗಲೂ ಕೂಡ ಪಡಿತರ ವ್ಯವಸ್ಥೆ ಮುಂದುವರಿದಿದೆ. ಆದರೆ ಎರಡು ಕೆಜಿ ಅಕ್ಕಿ ಮಾತ್ರ ಕಡಿಮೆಯಾಗಿದೆ ಅಷ್ಟೇ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಹೇಳಿದ್ದಾರೆ.

Published: 03rd April 2021 07:52 PM  |   Last Updated: 03rd April 2021 07:52 PM   |  A+A-


Siddaramaiah1

ಸಿದ್ದರಾಮಯ್ಯ

Posted By : Lingaraj Badiger
Source : UNI

ಬೆಂಗಳೂರು: ನಿಮ್ಮ ಕಾಲದಲ್ಲಿ ಕೊಡುತ್ತಿದ್ದಂತೆಯೇ ಈಗಲೂ ಕೂಡ ಪಡಿತರ ವ್ಯವಸ್ಥೆ ಮುಂದುವರಿದಿದೆ. ಆದರೆ ಎರಡು ಕೆಜಿ ಅಕ್ಕಿ ಮಾತ್ರ ಕಡಿಮೆಯಾಗಿದೆ ಅಷ್ಟೇ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಹೇಳಿದ್ದಾರೆ.

ಪಡಿತರ ಅಕ್ಕಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಏಕ ವಚನದಲ್ಲಿ ಟೀಕಾ ಪ್ರಹಾರ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆಗಳಿಗೆ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಸರ್ಕಾರ ನಡೆಸಲು ಯಾರೂ ಯಾರಪ್ಪನ ಮನೆಯಿಂದ ಹಣ ಕೊಡುವುದಿಲ್ಲ ಎಲ್ಲರೂ ಸರ್ಕಾರದಿಂದಲೇ ಕೊಡುತ್ತಾರೆ ಎಂಬುದು ಸಿದ್ದರಾಮಯ್ಯನವರ ಗಮನದಲ್ಲಿರಲಿ. ಸನ್ಮಾನ್ಯ ಸಿದ್ಧರಾಮಯ್ಯನವರೇ ನಿಮ್ಮ ಟೀಕೆಗಳು ಕ್ರಿಯಾತ್ಮಕವಾಗಿರಬೇಕೇ ಹೊರತು ಕೀಳುಮಟ್ಟದಲ್ಲಿ ಅಲ್ಲ. ಕೀಳುಮಟ್ಟದ ಭಾಷೆ ಬಳಸುವುದರಿಂದ ಜನಾನುರಾಗಿ ಆಗುತ್ತೇನೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು ಎಂದು ತಿರುಗೇಟು ನೀಡಿದ್ದಾರೆ.

ಆದರೆ ಈ ಕೋವಿಡ್ ಮತ್ತು ನೆರೆ ಪ್ರವಾಹ ಪರಿಸ್ಥಿತಿಯಲ್ಲಿಯೂ ಕೂಡ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನಾವು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹತ್ತು ಸಾವಿರ ರೂಪಾಯಿಗಳನ್ನು ಕೊಡುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಕೋವಿಡ್ ಸಂಕಷ್ಟದ ಸಮಯದಲ್ಲಿ ಹತ್ತು ಲಕ್ಷ ರೈತರಿಗೆ ಪ್ರತಿಯೊಬ್ಬರಿಗೆ 5 ಸಾವಿರದಂತೆ ಮೆಕ್ಕೆಜೋಳಕ್ಕೆ ಪರಿಹಾರ ಕೊಟ್ಟಿದ್ದೇವೆ. ಈ ರೀತಿ ಕೀಳು ಮಟ್ಟದ ಪ್ರಚಾರ ಪಡೆಯುವುದನ್ನು ನಿಲ್ಲಿಸುವುದು ಒಳ್ಳೆಯದು ಎಂದು ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಜನರಿಗೆ ಅಕ್ಕಿ ಕೊಡುತ್ತಿದ್ದೆವು ಎಂದು ಹೇಳುವ ಸಿದ್ದರಾಮಯ್ಯ, ಈ ಅಕ್ಕಿಯನ್ನು ಯಾರೂ ಸಹ ಯಾರಪ್ಪನ ಮನೆಯಿಂದ ಕೊಡುವುದಿಲ್ಲ ಎಂಬುದನ್ನು ತಿಳಿಯಬೇಕು. ಕೀಳುಮಟ್ಟದ ಮಾತು ಭಾಷಾ ಪ್ರಯೋಗದಿಂದ ಸರ್ಕಾರವನ್ನು ಟೀಕಿಸಿದ್ದ ಮಾತ್ರಕ್ಕೆ ಸಿದ್ದರಾಮಯ್ಯ ಜನಾನುರಾಗಿಗಳಾಗುತ್ತಾರೆ ಎಂದು ಒಂದು ವೇಳೆ ಭಾವಿಸಿದ್ದರೆ ಅದು ಅವರ ತಪ್ಪುಕಲ್ಪನೆ ಹಾಗೂ ಮೂರ್ಖತನವಾಗುತ್ತದೆ ಎಂದಿದ್ದಾರೆ.

ಬಿಜೆಪಿ ಸರ್ಕಾರ ಬಿಪಿಎಲ್ ಕಾರ್ಡುದಾರ ಪ್ರತಿಯೊಬ್ಬರಿಗೆ 5 ಕೆ.ಜಿ ಅಕ್ಕಿ 1 ಕಾರ್ಡಿಗೆ 2 ಕೆ.ಜಿ. ಗೋಧಿ ನೀಡುತ್ತದೆ. ಅಂತ್ಯೋದಯ ಕಾರ್ಡಿಗೆ 35 ಕೆ.ಜಿ ಅಕ್ಕಿಯನ್ನು ಈ ಮೊದಲಿನಂತೆಯೇ ನೀಡುತ್ತಿದ್ದೆ. ಕೇವಲ ಪ್ರಚಾರಕ್ಕಾಗಿಯೋ ಅಥವಾ ಕ್ರಿಯಾಶೀಲರಾಗಿದ್ದೇವೆ ಎಂದು ತೋರಿಸಿಕೊಳ್ಳಲೋ ಅಥವಾ ಸರ್ಕಾರವನ್ನು ಉದ್ದೇಶಪೂರಕವಾಗಿ ಟೀಕಿಸಲೇಬೇಕಂತಲೋ ಟೀಕಿಸಬಾರದು. ಮುಖ್ಯಮಂತ್ರಿಗಳ ವಿರುದ್ಧ ಕೀಳುಮಟ್ಟದ ಭಾಷೆ ಬಳಸುವುದನ್ನು ಬಿಡಬೇಕು ಎಂದಿದ್ದಾರೆ.

ಸಿದ್ದರಾಮಯ್ಯ ಭಾಷೆ ಖಂಡನಾರ್ಹ: ಬೈರತಿ ಬಸವರಾಜು
ಮೈಸೂರಿನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಬಗ್ಗೆ ಹೇಳುವಾಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಬಳಸಿದ ಭಾಷೆ ಖಂಡನಾರ್ಹ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟವರು, ಅಂದು ಸಿದ್ದರಾಮಯ್ಯ ಕೂಡ ಅನ್ನಭಾಗ್ಯ ಅಕ್ಕಿಯನ್ನು ಐದು ಕೆಜಿಗೆ ಇಳಿಸುವ ಪ್ರಯತ್ನ ಮಾಡಿದ್ದರು. ಆದರೆ ಶಾಸಕರ ವಿರೋಧದಿಂದ ಏಳು ಕೆಜಿ ಮಾಡಿದ್ದರು. ಸಿದ್ದರಾಮಯ್ಯ ಅವರಿಗೆ ಯಡಿಯೂರಪ್ಪ ಅವರ ರೈತ ಪರ ಯೋಜನೆಗಳು ಯಾವುದೂ ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ಟೀಕಿಸಿದರು.

ಈಗ ಸಿದ್ದರಾಮಯ್ಯ ಅವರಿಗೆ ಅಕ್ಕಿ ಮಾತ್ರ ಕಾಣಿಸುತ್ತಿದೆ. ಒಬ್ಬ ಮಾಜಿ ಸಿಎಂ ಆಗಿ ಹಾಲಿ ಸಿಎಂ ಬಗ್ಗೆ ಬಳಸಿದ ಭಾಷೆ ಸರಿಯಲ್ಲ. ಈಗ ಅನ್ನಭಾಗ್ಯ ಅಕ್ಕಿ ಪ್ರಮಾಣವನ್ನು ಎರಡು ಕೆಜಿ ಕಮ್ಮಿ ಮಾಡುವುದಕ್ಕೆ ಕಾರಣವಿದೆ. ಅಧಿಕಾರಕ್ಕೆ ಬಂದ ತಕ್ಷಣ ಪ್ರವಾಹ ಬಂತು, ಆಮೇಲೆ ಕೋವಿಡ್ ಬಂತು. ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಆರ್ಥಿಕ ಪರಿಸ್ಥಿತಿ ಸರಿಹೋದ ಮೇಲೆ ಮತ್ತೆ ಅನ್ನಭಾಗ್ಯ ಅಕ್ಕಿಯನ್ನು ಮೊದಲ ಪ್ರಮಾಣದಲ್ಲೇ ಕೊಡಬೇಕೆಂದು ಸಿಎಂಗೂ ಮನವಿ ಮಾಡಿದ್ದೇವೆ ಎಂದರು.

ಸಿದ್ದರಾಮಯ್ಯ ತಮ್ಮ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಬೇಕು. ಇಲ್ಲವಾದರೆ ನಾವೂ ಸಹ ಸುಮ್ಮನೆ ಇರುವುದಿಲ್ಲ. ನಾವೂ ಮಾತನಾಡಬೇಕಾಗುತ್ತದೆ. ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದ ಬೈರತಿ, ನಮ್ಮ ಬಳಿಯೂ ಕೆಲವು ವಿಷಯಗಳಿವೆ. ಹೇಳಬೇಕಾದ ಸಂದರ್ಭ ಬಂದಾಗ ಖಂಡಿತ ಅದನ್ನು ಬಹಿರಂಗ ಪಡಿಸುವುದಾಗಿ ಹೇಳಿದರು.


Stay up to date on all the latest ರಾಜಕೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp