ಬಸವಕಲ್ಯಾಣ ಉಪ ಚುನಾವಣೆ: ಮಾರುತಿ ಮುಳೆ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮನವೊಲಿಸುವಲ್ಲಿ ಬಿಜೆಪಿ ಸಫಲ
ನಾಟಕೀಯ ಬೆಳವಣಿಗೆಯೊಂದರಲ್ಲಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಎನ್ ಸಿಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮರಾಠ ಪ್ರಬಲ ಮುಖಂಡ ಮಾರುತಿ ಮುಳೆ ನಿನ್ನೆ ಕೊನೆ ಕ್ಷಣದಲ್ಲಿ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ.
Published: 04th April 2021 08:50 AM | Last Updated: 04th April 2021 08:50 AM | A+A A-

ಮಾರುತಿ ಮುಳೆ
ಕಲಬುರಗಿ: ನಾಟಕೀಯ ಬೆಳವಣಿಗೆಯೊಂದರಲ್ಲಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಎನ್ ಸಿಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮರಾಠ ಪ್ರಬಲ ಮುಖಂಡ ಮಾರುತಿ ಮುಳೆ ನಿನ್ನೆ ಕೊನೆ ಕ್ಷಣದಲ್ಲಿ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ.
ಇದೀಗ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ 12 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಾಜಿ ಸಚಿವ ಮಲ್ಲಿಕಾರ್ಜುನ ಖೂಬಾ ಸ್ಪರ್ಧಾಕಣದಲ್ಲಿ ಇರಲಿದ್ದು, ಸ್ವತಂತ್ರ ಅಭ್ಯರ್ಥಿಯಾಗಿದ್ದ ಈರಣ್ಣ ಹಡಪದ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ.
ತಾವು ನಾಮಪತ್ರ ಸಲ್ಲಿಕೆ ಹಿಂತೆಗೆದುಕೊಂಡ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಾರುತಿ ಮುಳೆ, ಬಿಜೆಪಿಯ ಸದಸ್ಯರುಗಳಾದ ಶಶಿ ನಮೋಶಿ ಮತ್ತು ಸುನಿಲ್ ವಲ್ಯಪುರೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತು ಬಸವರಾಜ್ ಬೊಮ್ಮಾಯಿ ಅವರ ಬಳಿ ಬೀದರ್ ಜಿಲ್ಲೆಯ ಮಾಣಿಕ್ ನಗರ ಹತ್ತಿರ ಮೊನ್ನೆ ಶುಕ್ರವಾರ ಸಂಜೆ ಕರೆದುಕೊಂಡು ಮಾತನಾಡಿಸಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ ಸವದಿಯವರು, ಬಿಜೆಪಿ ಸರ್ಕಾರ ಮರಾಠ ಸಮುದಾಯದ ಎಲ್ಲಾ ಬೇಡಿಕೆಗಳಾದ ನಿಗಮ ಮತ್ತು ಮಂಡಳಿಗಳಿಗೆ ಮರಾಠ ನಾಯಕರ ನೇಮಕ, 2ಎ ವಿಭಾಗ ಮತ್ತು ಇತರ ಕಡೆಗಳಲ್ಲಿ ಮರಾಠ ಸಮುದಾಯಕ್ಕೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು ಎಂದರು.
ನಿನ್ನೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಕೂಡ ದೂರವಾಣಿ ಮೂಲಕ ತಮ್ಮಲ್ಲಿ ಮಾತನಾಡಿದ್ದು ನಾಮಪತ್ರ ಸಲ್ಲಿಕೆ ಹಿಂತೆಗೆದುಕೊಳ್ಳುವಂತೆ ಹೇಳಿದ್ದಾರೆ ಎಂದರು. ನಂತರ ಬಸವಕಲ್ಯಾಣದ ಮರಾಠ ಮುಖಂಡರ ಜೊತೆ ಮಾತನಾಡಿ ನಾಮಪತ್ರ ಹಿಂತೆಗೆದುಕೊಂಡಿದ್ದೇನೆ ಎಂದರು.
ಬಸವಕಲ್ಯಾಣ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿದ್ದ ಖೂಬಾ ಕಳೆದ ಚುನಾವಣೆಯಲ್ಲಿ ಸೋತರು. ಬಸವಕಲ್ಯಾಣದ ಸ್ವಾಭಿಮಾನ ವೇದಿಕೆ ತಮ್ಮನ್ನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಬಿಜೆಪಿ ಹೊರಗಿನವರನ್ನು ಕಣಕ್ಕಿಳಿಸಿದೆ, ಇದು ಬಸವಕಲ್ಯಾಣ ಭಾಗದ ಜನತೆಯ ಸ್ವಾಭಿಮಾನ, ಗೌರವದ ಪ್ರಶ್ನೆ ಎಂದು ಖೂಬಾ ಹೇಳಿದರು.