ಉಪ ಚುನಾವಣೆ: ಮುಂದಿನ ವಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಚಿವರಿಂದ ಪ್ರಚಾರ
ಬೆಳಗಾವಿ ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಗೆಲ್ಲಲು ಆಡಳಿತಾರೂಢ ಬಿಜೆಪಿ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಉಪ ಚುನಾವಣೆಗೆ ಕೇವಲ 2 ವಾರಗಳು ಬಾಕಿ ಇರುವಂತೆಯೇ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮುಂದಿನ ವಾರದಿಂದ ಪ್ರಚಾರಕ್ಕೆ ಧುಮ್ಮುಕ್ಕಲಿದ್ದಾರೆ.
Published: 04th April 2021 08:36 AM | Last Updated: 04th April 2021 02:45 PM | A+A A-

ಬೆಳಗಾವಿ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪ್ರಚಾರ
ಬೆಂಗಳೂರು: ಬೆಳಗಾವಿ ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಗೆಲ್ಲಲು ಆಡಳಿತಾರೂಢ ಬಿಜೆಪಿ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಉಪ ಚುನಾವಣೆಗೆ ಕೇವಲ 2 ವಾರಗಳು ಬಾಕಿ ಇರುವಂತೆಯೇ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮುಂದಿನ ವಾರದಿಂದ ಪ್ರಚಾರಕ್ಕೆ ಧುಮ್ಮುಕ್ಕಲಿದ್ದಾರೆ. ತಮಿಳುನಾಡು ಹಾಗೂ ಕೇರಳದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿರುವ ಮಂತ್ರಿಗಳು ಕೂಡಾ ಹಿಂದಿರುಗಲಿದ್ದು, ಮುಖ್ಯಮಂತ್ರಿಯೊಂದಿಗೆ ಪ್ರಚಾರ ನಡೆಸಲಿದ್ದಾರೆ.
ಯಡಿಯೂರಪ್ಪ ಈ ಕ್ಷೇತ್ರಗಳಲ್ಲಿ ಭೇಟಿ ನೀಡಿದ್ದರು. ಮುಂದಿನ ವಾರ ಮತ್ತೆ ಹಿಂದಿರುಗಲಿದ್ದಾರೆ. ಯಡಿಯೂರಪ್ಪ ಪ್ರತಿ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ರಸ್ತೆಗಿಳಿದು ಪ್ರಚಾರ ನಡೆಸುವ ನಿರೀಕ್ಷೆಯಿದೆ. ಯಡಿಯೂರಪ್ಪ 2019 ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಆಡಳಿತ ಪಕ್ಷವು 17 ಉಪಚುನಾವಣೆಗಳಲ್ಲಿ 14 ರಲ್ಲಿ ಗೆದ್ದಿದೆ.
ಮೂರು ಕ್ಷೇತ್ರಗಳಲ್ಲಿ ಗೆಲುವು ಬಿಜೆಪಿಗೆ ಮಹತ್ವದ್ದಾಗಿದ್ದು, ಕೇರಳ, ತಮಿಳುನಾಡು, ಪುದುಚೇರಿ ಮತ್ತು ಪಶ್ಚಿಮ ಬಂಗಾಳಕ್ಕೆ ತೆರಳಿರುವ ಮುಖಂಡರು, ವಾಪಸ್ಸಾಗಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವಂತೆ ಬಿಜೆಪಿ ಕೇಳಿಕೊಂಡಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತಿತರ ಸಚಿವರು, ಪಕ್ಷದ ಮುಖಂಡರು ಈ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ ನಾರಾಯಣ, ಬಿ. ಸಿ. ಪಾಟೀಲ್ , ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್, ಸುರೇಶ್ ಕುಮಾರ್, ಅರವಿಂದ್ ಲಿಂಬಾವಳಿ ಮತ್ತಿತರರು ಪ್ರಚಾರ ನಡೆಸಲಿದ್ದಾರೆ. ತಮಿಳುನಾಡು, ಕೇರಳ,ಮತ್ತು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ತೆರಳಿವವರು ಇಂದು ಸಂಜೆ ನಗರಕ್ಕೆ ವಾಪಸ್ಸಾಗುವ ಸಾಧ್ಯತೆಯಿದೆ ಎಂದು ಹಿರಿಯ ಬಿಜೆಪಿ ಮುಖಂಡ ಎನ್. ರವಿ ಕುಮಾರ್ ದಿ ನ್ಯೂ ಸಂಡೇ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ನಾಲ್ಕರಿಂದ ಐದು ಗ್ರಾಮ ಪಂಚಾಯಿತಿ ಅಥವಾ ಹೋಬಳಿಗಳಲ್ಲಿ ಪ್ರಚಾರ ನಡೆಸುವಂತೆ ಸಚಿವರಿಗೆ ಹೇಳಲಾಗಿದೆ. ಮುಂದಿನ ವಾರ ಬಿಸಿ ಪಾಟೀಲ್, ಸೋಮಶೇಖರ್, ಮತ್ತು ಬೈರತಿ ಬಸವರಾಜ್ ಮೂರು ದಿನ ಮಸ್ಕಿಯಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಕಳೆದ 20 ದಿನಗಳಿಂದ ಕೇರಳದಲ್ಲಿರುವ ಡಾ. ಸಿ. ಎನ್. ಅಶ್ವತ್ ನಾರಾಯಣ, ಇಂದು ಬೆಂಗಳೂರಿಗೆ ವಾಪಸ್ಸಾಗಲಿದ್ದು, ಮುಂದಿನ ವಾರ ಮುಖ್ಯಮಂತ್ರಿ ಜೊತೆಗೆ ಪ್ರಚಾರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.