ಸುಳ್ಳು ಹೇಳಿಕೊಂಡು ಆಡಳಿತ ನಡೆಸುತ್ತಿರುವ ಬಿಜೆಪಿಯನ್ನು ಓಡಿಸುವ ಕಾಲ ದೂರವೇನಿಲ್ಲ: ಮಲ್ಲಿಕಾರ್ಜುನ ಖರ್ಗೆ

ಬಿಜೆಪಿಯಲ್ಲಿ ಪಕ್ಷ ಕಟ್ಟಿದವರಿಗೊಂದು ನ್ಯಾಯ. ಅಧಿಕಾರ ಅನುಭವಿಸುತ್ತಿರುವವರಿಗೆ ಇನ್ನೊಂದು ನ್ಯಾಯ. ಸುಳ್ಳು ಹೇಳಿಕೊಂಡು ಆಡಳಿತ ನಡೆತ್ತಿರುವ ಇವರನ್ನು ಓಡಿಸುವ ಕಾಲ ಬಹಳ ದೂರವೇನಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಭವಿಷ್ಯ ನುಡಿದಿದ್ದಾರೆ.

Published: 05th April 2021 05:03 PM  |   Last Updated: 05th April 2021 05:03 PM   |  A+A-


Mallikarjun Kharge

ಮಲ್ಲಿಕಾರ್ಜುನ್ ಖರ್ಗೆ

Posted By : Vishwanath S
Source : UNI

ಬೆಂಗಳೂರು: ಬಿಜೆಪಿಯಲ್ಲಿ ಪಕ್ಷ ಕಟ್ಟಿದವರಿಗೊಂದು ನ್ಯಾಯ. ಅಧಿಕಾರ ಅನುಭವಿಸುತ್ತಿರುವವರಿಗೆ ಇನ್ನೊಂದು ನ್ಯಾಯ. ಸುಳ್ಳು ಹೇಳಿಕೊಂಡು ಆಡಳಿತ ನಡೆತ್ತಿರುವ ಇವರನ್ನು ಓಡಿಸುವ ಕಾಲ ಬಹಳ ದೂರವೇನಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಭವಿಷ್ಯ ನುಡಿದಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಉಪಪ್ರಧಾನಿ ದಿ.ಜಗಜೀವನ್ ರಾಮ್ ಅವರ 11ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಪಂಚರಾಜ್ಯಗಳ ಚುನಾವಣಾ ಪ್ರಚಾರದಲ್ಲಿ ಭ್ರಷ್ಟಾಚಾರದ ವಿಚಾರವನ್ನೇ ಬಿಜೆಪಿ ನಾಯಕರು ಪ್ರಸ್ತಾಪಿಸಿದ್ದಾರೆ. ಹರಿಶ್ಚಂದ್ರನ ಮಕ್ಕಳಂತೆ ಬಿಂಬಿಸಿಕೊಳ್ಳುತ್ತಿರುವ ಇವರೇಕೆ ಭ್ರಷ್ಟರನ್ನಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ? ವಿಧಾನ ಸಭಾ ಚುನಾವಣೆಯಿಂದ ಹಿಡಿದು ಜಿಲ್ಲಾ ಪಂಚಾಯತ್ ಚುನಾವಣೆವರೆಗೂ ಆಪರೇಷನ್ ಏಕೆ? ಎಂದು ಪ್ರಶ್ನಿಸಿದ ಖರ್ಗೆ, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಟಿಎಂಸಿ ಮುಖಂಡರನ್ನು ಆಪರೇಷನ್ ಮಾಡಿ ಅಭ್ಯರ್ಥಿ ಮಾಡಿದ್ದಾರೆ ಎಂದು ಕುಟುಕಿದ ಖರ್ಗೆ, ವಯಸ್ಸಾಗಿದೆ ಎಂಬ ಕಾರಣವನ್ನು ನೀಡಿ ಪ್ರಧಾನಿ ಮೋದಿ ಅಡ್ವಾಣಿ ಮತ್ತು ಮುರುಳಿ ಮನೋಹರ್ ಜೋಷಿ ಅವರನ್ನು ಮಾರ್ಗದರ್ಶಕ ಮಂಡಳಿಗೆ ನೇಮಿಸಿ ಮೂಲೆಯಲ್ಲಿ ಕೂರಿಸಿದ್ದರು. ಆದರೀಗ 88 ವರ್ಷ ವಯಸ್ಸಾದವರಿಗೂ ಕೂಡ ಮೋದಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುತ್ತಿದ್ದಾರೆ ಎಂದು ಸೂಚ್ಯವಾಗಿ ಹೇಳಿದರು.

ಸಮಾಜ ಒಗ್ಗೂಡಿಸುವ ಕೆಲಸ ಮಾಡುವುದನ್ನು ಬಿಟ್ಟು ಬಿಜೆಪಿ ನಾಯಕರು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ.ವಿಧಾನಸಭಾ ಚುನಾವಣೆಯಲ್ಲಿ ಮುನಿಸಿಪಾಲಿಟಿ ಚುನಾವಣೆಯಂತಹ ರಾಜಕಾರಣ ಮಾಡುತ್ತಿದ್ದಾರೆ. ಪ್ರಧಾನಿ ಹುದ್ದೆ ಉಳಿಸಿಕೊಳ್ಳಲು ಲೋಕಸಭಾ ಪ್ರಚಾರಕ್ಕೆ ಹೋಗಬೇಕು. ಆದರೆ ಮೋದಿ ಹೈದ್ರಾಬಾದ್ ಮುನಿಸಿಪಾಲಿಟಿ ಎಲೆಕ್ಷನ್ ಗೂ ಹೋಗಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದು, ಪ್ರಧಾನಿ ಹುದ್ದೆಯ ಗೌರವವನ್ನು ಕಳೆಯುತ್ತಿದ್ದಾರೆಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.

ರಕ್ಷಣಾ ಸಚಿವರಾಗಿದ್ದ ಜಗಜೀವನರಾಮ್, ಭಾರತ ಮತ್ತು ಪಾಕ್ ನಡುವೆ ಯುದ್ದ ನಡೆದ ವೇಳೆ ಮಹತ್ವದ ಪಾತ್ರ ವಹಿಸಿದ್ದರು. ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಜಗಜೀವನ್ ರಾಮ್ ಮಹತ್ವದ ಪಾತ್ರ ವಹಿಸಿದ್ದರು. ಆದರೆ ಬರೀ ರಾಜಕೀಯ ಉದ್ದೇಶಕ್ಕಾಗಿ ಮಾತ್ರ ಮೋದಿ ಬಾಂಗ್ಲಾಕ್ಕೆ ಭೇಟಿ ಕೊಟ್ಟಿದ್ದಾರೆ. ಬಾಂಗ್ಲಾದೇಶ ಸ್ವಾತಂತ್ರ್ಯ ವಿಚಾರದಲ್ಲಿನಾನು ಜೈಲಿಗೆ ಹೋಗಿದ್ದೆ ಎಂದು ಮೋದಿ ಸುಳ್ಳು ಹೇಳಿದ್ದನ್ನು ಕಂಡು ನಮಗೆಲ್ಲ ನಗು ಬಂದಿತು. ಸದ್ಯಕ್ಕೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದೆ ಎಂದು ಪ್ರಧಾನಿ ಸುಳ್ಳು ಹೇಳಲಿಲ್ಲ ಎಂದು ಲೇವಡಿ ಮಾಡಿದರು. 

ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಮಾತನಾಡಿ, ತುಳಿತಕ್ಕೊಳಗಾಗಿರುವ ಸಮುದಾಯವನ್ನು ಬಿಜೆಪಿ ಸರ್ಕಾರ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಕಾಂಗ್ರೆಸ್ ನಿಂದ ಪರಿಶಿಷ್ಟದವರು ದೂರ ಸರಿಯುತ್ತಿದ್ದಾರೆ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಇದನ್ನು ಗಮನಿಸಬೇಕು.ಬಂದ ಅವಕಾಶವನ್ನು ಕಲ್ಪಿಸಿಕೊಡಬೇಕು ಎಂದು ಪಕ್ಷದ ದಲಿತ ನಾಯಕರಿಗೆ ಸಲಹೆ ನೀಡಿದರು.

ಎಸ್ಸಿ,ಎಸ್ಟಿ, ಅಲ್ಪಸಂಖ್ಯಾತರು, ಹಿಂದುಳಿದವರು ಸೇರಿದಂತೆ ಮುಂದುವರಿದ ಸಮುದಾಯದವರು ಸಹ ಕಾಂಗ್ರೆಸ್ ಜೊತೆ ಇದ್ದರು. ಇಂದಿರಾಗಾಂಧಿಯಿದ್ದಾಗ ಎಲ್ಲಾ ಸಮುದಾಯಗಳು ಕಾಂಗ್ರೆಸ್ ಪಕ್ಷದ ಜೊತೆಯಲ್ಲಿದ್ದವು. ಆದರೆ ಈಗ ಸಮುದಾಯಗಳು ದೂರ ಸರಿಯುತ್ತಿವೆ ಎಂಬುದನ್ನು ಗ್ರಹಿಸುವಲ್ಲಿ ರಾಜ್ಯ ನಾಯಕರು ವಿಫಲರಾಗುತ್ತಿದ್ದಾರೆ. ಬರೀ ಭಾಷಣ ಮಾಡದೇ ಕ್ರಿಯಾಯೋಜನೆ ಮಾಡಬೇಕು. ಸಿದ್ದರಾಮಯ್ಯ ಸರ್ಕಾರದಲ್ಲಿ ತಂದಂತಹ ಯೋಜನೆಗಳನ್ನೆಲ್ಲ ಪ್ರಸಕ್ತ ಆಡಳಿತರೂಢ ಬಿಜೆಪಿ ಸರ್ಕಾರ ನಿಲ್ಲಿಸಿದ್ದು, ಇದರಿಂದ ರೈತರು ಹಾಗೂ ಬಡವರ ಮೇಲೆ ಪರಿಣಾಮ ಬೀರಿದೆ. ಪಕ್ಷದಲ್ಲಿ ಯಾವುದೇ ಎಂತಹದ್ದೇ ಯಾರ ನಡುವೆಯಾದರೂ ಮನಸ್ತಾಪ ಭಿನ್ನಾಭಿಪ್ರಾಯವಿದ್ದರೆ ಅದನ್ನು ಮರೆತು ಒಗ್ಗಟ್ಟಾಗಿ ಬಿಜೆಪಿಯ ವೈಫಲ್ಯತೆಗಳನ್ನು ಪ್ರಚಾರ ಮಾಡಿ ಕಾಂಗ್ರೆಸ್ ಸಂಘಟಿಸಬೇಕೆಂದು ಮುನಿಯಪ್ಪ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರಿಗೂ ಕಿವಿಮಾತು ಹೇಳಿದರು.

ಚುನಾವಣೆ ಬಹಳ ದೂರ ಇದೆ ಎಂದು ತಿಳಿಯುವುದು ಬೇಡ. ಬಿಜೆಪಿಯ ಈಗಿನ ಆಡಳಿತ ಸರ್ಕಾರ ನೋಡಿದರೆ ಚುನಾವಣೆ ಬಹಳ ದೂರವಿಲ್ಲ ಎಂದು ಮಾಧ‍್ಯಮಗಳು ಹೇಳುತ್ತಿವೆ. ಹೀಗಾಗಿ ಕಾಂಗ್ರೆಸ್ ನಿಂದ ದೂರವಾಗಿರುವ ಸಮುದಾಯಗಳನ್ನು ಮತ್ತೆ ಪಕ್ಷದತ್ತ ಸೆಳೆಯಬೇಕು.ಭಿನ್ನಾಭಿಪ್ರಾಯ ಮರೆತು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡಬೇಕು. ದೇಶದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಕರ್ನಾಟಕ ರಾಜ್ಯದಿಂದಲೇ ಬಾಗಿಲು ತೆರೆಯಬೇಕೆಂದು ಮುನಿಯಪ್ಪ ಸ್ಫೂರ್ತಿಯ ಮಾತುಗಳನ್ನಾಡಿದರು.

ಮಾಜಿ ಸಂಸದ ಹನುಮಂತಪ್ಪ ಮಾತನಾಡಿ, ಸಂಘ ಪರಿವಾರ ಹಿಂಬಾಗಿಲ ರಾಜಕೀಯ ಬಿಟ್ಟು ಬಿಟ್ಟು ಪೂರ್ಣಪ್ರಮಾಣದಲ್ಲಿ ರಾಜಕಾರಣ ಮಾಡಲಿ.ಖರ್ಗೆಯವರು ಸಂಸತ್ತಿನಲ್ಲಿ ಈ ಬಗ್ಗೆ ರೆಸ್ಯುಲೇಷನ್ ಪ್ರಸ್ತಾಪಿಸಿ, ರಾಜ್ಯಸಭೆಯಲ್ಲಿ ಆರ್ ಎಸ್ ಎಸ್ ಒಂದು ಸಂಘಟನೆಯಾಗಿ ಮುಂದುವರಿಯಬೇಕೇ ಹೊರತು ರಾಜಕಾರಣದಲ್ಲಿ ಮೂಗುತೂರಿಸಬಾರದು. ಆರ್.ಎಸ್.ಎಸ್. ನೇರವಾಗಿ ಪಕ್ಷವೆಂದು ಘೋಷಿಸಲೆಂದು ಧ‍್ವನಿಯೆತ್ತಲಿ ಎಂದು ಸಲಹೆ ನೀಡಿದರು. 

ಪ್ರಧಾನಿ ಮೋದಿ ಅಡ್ವಾಣಿಯವರನ್ನು ವಯಸ್ಸಾಗಿದೆ ಎಂಬ ಕಾರಣಕ್ಕೆ ಪಕ್ಷದಿಂದ ದೂರವಿಟ್ಟಿಲ್ಲ.ಅಡ್ವಾಣಿ ಪಾಕಿಸ್ತಾನದಲ್ಲಿ ಹುಟ್ಟಿದ್ದರು.ಅಲ್ಲದೇ ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಜಿನ್ನಾ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಅಡ್ವಾಣಿ ಕರೆದಿದ್ದರು. ಹೀಗಾಗಿ ಸಂಘ ಪರಿವಾರ ಅಡ್ವಾಣಿ ಅವರನ್ನು ಉದ್ದೇಶಪೂರಕವಾಗಿ ಗುರಿಯನ್ನಾಗಿಸಿ ಬಿಜೆಪಿ ಅಧಿಕಾರ ರಾಜಕಾರಣದಿಂದ ದೂರವಿಟ್ಟು ಪ್ರಧಾನಿಯಾಗುವುದನ್ನು ಆರ್.ಎಸ್.ಎಸ್ ತಪ್ಪಿಸಿತು. ಆರ್ ಎಸ್ ಎಸ್ ಗೆ ತಾಕತ್ತು ಇರುವುದೇ ಆದರೆ ಅದೊಂದು ರಾಜಕೀಯ ಪಕ್ಷವೆಂದು ಗುರುತಿಸಿಕೊಳ್ಳಲಿ. ಹಿಂಬಾಗಿಲ ರಾಜಕೀಯ ಬಿಡಲಿ ಎಂದು ಕುಟುಕಿದರು.

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ರಾಜ್ಯ ಬಿಜೆಪಿ ನಾಯಕರು ಸಿಎಂ ಪುತ್ರ ವಿಜಯೇಂದ್ರ ಚುನಾವಣೆಯಲ್ಲಿ ಹಂಚುವ ದುಡ್ಡು ಎಲ್ಲಿಯದು? ಎಂದು ಪ್ರಶ್ನಿಸಿದ ಹನುಮಂತಪ್ಪ, ಪ್ರಧಾನಿ ಮೋದಿಯದ್ದು ಬರೀ ಸುಳ್ಳು ಹೇಳುವ ಕೆಲಸ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿಯ ನಿಜ ಬಣ್ಣ ಬಯಲುಮಾಡಬೇಕಿದೆ ಎಂದು ಕರೆ ನೀಡಿದರು.

Stay up to date on all the latest ರಾಜಕೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp