ಸಿಎಂ ಯಡಿಯೂರಪ್ಪ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಡುವೆ: ಡಿಕೆಶಿ

ಉಪಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ಮತಕ್ಷೇತ್ರಗಳಲ್ಲಿ ಸಿಎಂ ಯಡಿಯೂರಪ್ಪ ಜಾತಿವಾರು ಸಭೆ ನಡೆಸುತ್ತಿದ್ದು,ಮುಖ್ಯಮಂತ್ರಿಗಳ ವಿರುದ್ಧ ಚುನಾವಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಬೇಕು. ಇಲ್ಲದೇ ಹೋದಲ್ಲಿ ಪಕ್ಷದ ವತಿಯಿಂದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ‌ ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಬೆಂಗಳೂರು: ಉಪಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ಮತಕ್ಷೇತ್ರಗಳಲ್ಲಿ ಸಿಎಂ ಯಡಿಯೂರಪ್ಪ ಜಾತಿವಾರು ಸಭೆ ನಡೆಸುತ್ತಿದ್ದು,ಮುಖ್ಯಮಂತ್ರಿಗಳ ವಿರುದ್ಧ ಚುನಾವಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಬೇಕು. ಇಲ್ಲದೇ ಹೋದಲ್ಲಿ ಪಕ್ಷದ ವತಿಯಿಂದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ‌ ಶಿವಕುಮಾರ್ ಹೇಳಿದ್ದಾರೆ.

ಸದಾಶಿವಗರದ ನಿವಾಸದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ, ಕಳೆದ ಚುನಾವಣೆಯಲ್ಲಿ ನಾನು ನನ್ನ ಪತ್ನಿ ದೊಡ್ಡ ಆಲಹಳ್ಳಿ ಯಲ್ಲಿ ಮತ ಹಾಕಿದ ಫೋಟೋ ಟಿವಿಯಲ್ಲಿ ಬಂದಿದ್ದಕ್ಕೆ ಆಯೋಗ ನನ್ನ ಮತವನ್ನು ರದ್ದು ಮಾಡಿದ್ದರು. ಈಗ ಜಾತಿ ವಾರು ಸಭೆ ಮಾಡುತ್ತಿರುವ ಯಡಿಯೂರಪ್ಪ ವಿರುದ್ದವೂ ಕ್ರಮ ಜರುಗಿಸಬೇಕು.

ಮೂರು ಉಪಚುನಾವಣೆಗಳಲ್ಲಿ ಈ ಸರ್ಕಾರದ ವಿರುದ್ದ ಜನತೆಗೊಂದು ಅವಕಾಶ ಇದ್ದು,ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮತದಾರರಿಗೆ ಮನವಿ ಮಾಡಿದರು. ಮುಷ್ಕರನಿರತ ಸಾರಿಗೆ ನೌಕರರನ್ನು ಕರೆದು ಅವರ ಸಮಸ್ಯೆ ಆಲಿಸುವುದನ್ನು ಬಿಟ್ಟು ಖಾಸಗಿಯವರ ಕೈಗೆ ಸಾರಿಗೆ ವ್ಯವಸ್ಥೆಯನ್ನು ನೀಡಲು ಸರ್ಕಾರ ಮುಂದಾಗಿದೆ.

ಕೆಎಸ್ಆರ್ ಟಿಸಿ, ಬಿ‌ಎಂ ಟಿಸಿ ಅನ್ನು ಖಾಸಗಿವರಿಗೆ ಮಾರುವ ಒಳಸಂಚು ನಡೆದಿದೆ. ಎಲ್ಲಾ ಕಂಪನಿಗಳನ್ನು ಎನ್ ಡಿ ಎ ಸರ್ಕಾರ ಮಾರುತ್ತಿದೆ. ಈಗ ಕೆಎಸ್ ಆರ್ ಟಿ ಸಿ ಪ್ರೈವೇಟ್ ನವರ ಕೈಗೆ ಕೊಡುವ ಸಂಚು ರೂಪಿಸುತ್ತಿದ್ದಾರೆಂದು ಶಿವಕುಮಾರ್ ಆರೋಪಿಸಿದರು. ಇಂತಹ ಕೆಟ್ಟ ಸರ್ಕಾರವನ್ನು ಈ ಹಿಂದೆ ಎಂದಿಗೂ ನೋಡಿಲ್ಲ. ಬೆಳಗಾವಿಯಲ್ಲಿ ಅಧಿವೇಶನ ನಡೆಸಿಲ್ಲ. ಅಲ್ಲಿನ ಜನರ ಬೇಡಿಕೆ ಈಡೇರಿಸಲು ಇವರಿಂದ ಸಾಧ್ಯವಾಗುತ್ತಿಲ್ಲ. ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಕೊಟ್ಟ ಮಾತನ್ನು ಸರ್ಕಾರವಿನ್ನೂ ಈಡೇರಿಸಿಲ್ಲ‌. 

ಸವಿತಾ ಸಮಾಜಕ್ಕೆ 1600 ಕೋಟಿ ರೂ ಕೊಡುವುದಾಗಿ ಹೇಳಿದ್ದ ಸರ್ಕಾರ ಯಾರಿಗೆ ದುಡ್ಡು ಕೊಟ್ಟಿದೆ? ಬಸ್‌ಗಳಲ್ಲಿ ಕೂರಬಹುದು ನಿಲ್ಲಬಾರದೆಂಬುದು ಯಾವ ನಿಯಮ? ಚಿತ್ರೋದ್ಯಮ ಬಿದ್ದು ಹೋಗಿದೆ. ಒಬ್ಬರಿಗೊಬ್ಬರು ಅಂಟಿಕೊಂಡು ಜಿಮ್ ಮಾಡುತ್ತಾರೆಯೇ? ಎಂದು ಪ್ರಶ್ನಿಸಿದ ಡಿಕೆಶಿ, ರಾಜ್ಯದ ಸಮಸ್ಯೆಗಳ ಬಗ್ಗೆ ಒಬ್ಬ ಎಂಪಿನೂ ಉಸಿರೆತ್ತುತ್ತಿಲ್ಲ. 700 ರೂಪಾಯಿ ಗೊಬ್ಬರದ ಬೆಲೆ ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರ ಎಷ್ಟು ರೈತರಿಗೆ ಪರಿಹಾರ ಕೊಟ್ಟಿದೆ? 20 ಲಕ್ಷ ಕೋಟಿ ರೂಪಾಯಿ ಯಾರಿಗೆ ಅನುಕೂಲ ಆಯ್ತು? ಏನು ಸಹಾಯ ಆಯ್ತು ಎಂದು ಜನರಿಗೆ ಮಾಹಿತಿ ಕೊಡಬೇಕು. ಮಾಧ್ಯಮಗಳಲ್ಲಿ ಜಾಹೀರಾತು ಕೊಡಿ ಎಂದರು.

ಯುಗಾದಿ ಹಬ್ಬಕ್ಕೆ ಸಾರಿಗೆ ಸಿಬ್ಬಂದಿಗೆ ಕೂಡಲೇ ಸಂಬಳ ಕೊಡಬೇಕು. ಮುಷ್ಕರನಿರತರನ್ನು ಬಂಧಿಸುತ್ತಿರುವುದು ಸರಿಯಲ್ಲ. ಹೋರಾಟಗಾರರ ಪರ ಕಾಂಗ್ರೆಸ್ ಇದೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು. ಸಿಡಿ ಲೇಡಿ ವ್ಯತಿರಿಕ್ತ ಹೇಳಿಕೆ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಎಸ್‌ಐಟಿ ಏನು ಮಾಡುತ್ತಿದೆ? ಮಾಧ್ಯಮದವರು ಏನು ಮಾಡುತ್ತಿದ್ದಾರೆ? ಯಾರು ಪಿ‌ಪಿಇ ಕಿಟ್ ಹಾಕಿಕೊಂಡು ಎಲ್ಲಿ ಮಲಗಿದ್ದಾರೆ? ಏನು ಹೇಗೆ, ಯಾರು ರೋಗಿ ಎಂದೆಲ್ಲ ಆಗುಹೋಗುಗಳನ್ನು ಗಮನಿಸುತ್ತಿದ್ದೇನೆ. ಎಲ್ಲದಕ್ಕೂ ಸಮಯ ಬರುತ್ತದೆ. ಸಮಯ ಬಂದಾಗ ಎಲ್ಲಾದಕ್ಕೂ ಉತ್ತರಿಸುತ್ತೇನೆಂದು ಮಾರ್ಮಿಕವಾಗಿ ನುಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com