ಸಮಯ ಕೈ ಮೀರಿದ ಮೇಲೆ ಸಿಎಂ ಈಗ ಸರ್ವಪಕ್ಷ ಸಭೆ ಕರೆದಿದ್ದಾರೆ: ಡಿಕೆ ಶಿವಕುಮಾರ್
ಕೋವಿಡ್ ಚರ್ಚೆಗಾಗಿ ಸಿಎಂ ಯಡಿಯೂರಪ್ಪ ಸರ್ವಪಕ್ಷ ನಾಯಕರ ಸಭೆ ಕರೆದಿರುವುದೇನೂ ದೊಡ್ಡ ವಿಚಾರವೇನಲ್ಲ. ಈಗ ಸಮಯ ಮೀರಿ ಹೋದ ಮೇಲೆ ಸಿಎಂ ಸರ್ವಪಕ್ಷ ನಾಯಕರ ಸಭೆ ಕರೆದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
Published: 14th April 2021 11:54 AM | Last Updated: 14th April 2021 11:54 AM | A+A A-

ಡಿಕೆ ಶಿವಕುಮಾರ್
ಬೆಂಗಳೂರು: ಕೋವಿಡ್ ಚರ್ಚೆಗಾಗಿ ಸಿಎಂ ಯಡಿಯೂರಪ್ಪ ಸರ್ವಪಕ್ಷ ನಾಯಕರ ಸಭೆ ಕರೆದಿರುವುದೇನೂ ದೊಡ್ಡ ವಿಚಾರವೇನಲ್ಲ. ಈಗ ಸಮಯ ಮೀರಿ ಹೋದ ಮೇಲೆ ಸಿಎಂ ಸರ್ವಪಕ್ಷ ನಾಯಕರ ಸಭೆ ಕರೆದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಕೆಪಿಸಿಸಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಕೋವಿಡ್ ಸಭೆ ಎನ್ನುವುದು ನನ್ನೊಬ್ಬನ ವಿಚಾರವೇನಲ್ಲ. ಇದು ರಾಜ್ಯದ ವಿಚಾರವೂ ಹೌದು. ಸರ್ಕಾರ ಇಲ್ಲಿಯವರೆಗೆ ಕೋವಿಡ್ ಕುರಿತ ನಮ್ಮದ್ಯಾವುದೇ ಸಲಹೆಗಳನ್ನು ಪರಿಗಣಿಸಿಲ್ಲ, ನಮ್ಮಗಳ ಯಾವುದೇ ಒಂದೂ ಮಾತನ್ನೂ ಕೇಳಿಲ್ಲ ಎಂದು ಟೀಕಿಸಿದ್ದಾರೆ.
ಸರ್ಕಾರ ತನ್ನ ಇಷ್ಟ ಬಂದಂತೆ ನಡೆದುಕೊಂಡಿದೆ. ಈಗ ಸಮಯ ಪರಿಸ್ಥಿತಿ ಕೈ ಮೀರಿ ಹೋಗಿದ್ದು, ಈಗ ಸಭೆ ಕರೆದಿದ್ದಾರೆ. ಸಭೆಯಲ್ಲಿ ಭಾಗವಹಿಸುವ ಬಗ್ಗೆ ಪಕ್ಷದ ನಾಯಕರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.
ಜನ ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಲಾಕ್ಡೌನ್ ಅವಶ್ಯಕತೆಯಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಒಂದು ಕಡೆ ಜೀವ ಮತ್ತು ಜೀವನದ ಪ್ರಶ್ನೆಯಾಗಿರುವುದರಿಂದ ಕೋವಿಡ್ ಪಸರಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿ. ಉದ್ಯೋಗಿಗಳು, ಕಾರ್ಮಿಕರು, ಹೊಟೇಲ್ ಉದ್ಯಮಗಳ ನಷ್ಟ ಜನರ ಜೀವನದ ಬಗ್ಗೆಯೂ ಆರ್ಥಿಕ ಸಂಕಷ್ಟಕ್ಕೆ ಸರ್ಕಾರ ನೆರವಾಗಲಿ ಎಂದು ಡಿಕೆಶಿ ಸಲಹೆ ನೀಡಿದರು.