ಉಪ ಚುನಾವಣೆ: ಬೆಳಗ್ಗೆ 11 ಗಂಟೆ ವೇಳೆಗೆ ಬೆಳಗಾವಿ ಶೇ.12.29, ಮಸ್ಕಿ ಶೇ.19.30, ಬಸವಕಲ್ಯಾಣ ಶೇ.19.40ರಷ್ಟು ಮತದಾನ

ರಾಜ್ಯದ ಬೆಳಗಾವಿ ಲೋಕಸಭಾ ಕ್ಷೇತ್ರ, ರಾಯಚೂರಿನ ಮಸ್ಕಿ ಮತ್ತು ಬೀದರ್ ನ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆಗೆ ಮತದಾನ ಮುಂದುವರಿದಿದೆ.
ಮತದಾನಕ್ಕೆ ಮತಗಟ್ಟೆಗೆ ಬರುತ್ತಿರುವ ಮತದಾರರು
ಮತದಾನಕ್ಕೆ ಮತಗಟ್ಟೆಗೆ ಬರುತ್ತಿರುವ ಮತದಾರರು

ಬಸವಕಲ್ಯಾಣ/ಬೆಳಗಾವಿ/ಮಸ್ಕಿ: ರಾಜ್ಯದ ಬೆಳಗಾವಿ ಲೋಕಸಭಾ ಕ್ಷೇತ್ರ, ರಾಯಚೂರಿನ ಮಸ್ಕಿ ಮತ್ತು ಬೀದರ್ ನ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆಗೆ ಮತದಾನ ಮುಂದುವರಿದಿದೆ.

ಬೆಳಗ್ಗೆ 11 ಗಂಟೆಯ ಹೊತ್ತಿಗೆ ಬಸವಕಲ್ಯಾಣ ಕ್ಷೇತ್ರದಲ್ಲಿ ಶೇಕಡಾ 19.40ರಷ್ಟು ಮತದಾನವಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬೆಳಗ್ಗೆಯಿಂದ ಇಲ್ಲಿಯವರೆಗೆ ಮತದಾರರ ಪ್ರತಿಕ್ರಿಯೆ ನೀರಸವಾಗಿದೆ. ಬೆಳಗ್ಗೆ 11 ಗಂಟೆಯ ಹೊತ್ತಿಗೆ ಶೇಕಡಾ 12.29ರಷ್ಟು ಮಾತ್ರ ಮತದಾನ ನಡೆದಿದೆ.

ಬೆಳಗಾವಿ, ರಾಮದುರ್ಗ, ಸೌಂದತ್ತಿಯಲ್ಲಿ ಮತದಾರರ ನೀರಸ ಪ್ರತಿಕ್ರಿಯೆಯಿದ್ದರೆ, ಸೂಕ್ಷ್ಮ ಪ್ರದೇಶಗಳಾದ ಬೆಳಗಾವಿ ಗ್ರಾಮಾಂತರ ಮತ್ತು ಗೋಕಾಕ್ ಕ್ಷೇತ್ರಗಳಲ್ಲಿ ಮತದಾನ ಸಕ್ರಿಯವಾಗಿದೆ.

ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿ ಆರ್ ವೆಂಕಟೇಶ್ ಕುಮಾರ್ ಮಸ್ಕಿಯ ಹಾಲಾಪುರ್ ಮತಗಟ್ಟೆಗೆ ಆಗಮಿಸಿ ಮತದಾನ ಪ್ರಕ್ರಿಯೆ ಪರಿಶೀಲಿಸಿದರು. ಕ್ಷೇತ್ರದಲ್ಲಿ ಬೆಳಗ್ಗೆ 11 ಗಂಟೆಯ ಹೊತ್ತಿಗೆ ಶೇಕಡಾ 19.30ರಷ್ಟು ಮತದಾನವಾಗಿದೆ. 

ಬೆಳಗಾವಿಯ ಅಂಬೆವಾಡಿ ಗ್ರಾಮದಲ್ಲಿ 1200ಕ್ಕೂ ಹೆಚ್ಚು ಮಂದಿ ಮತದಾರರು ಬೆಳಗ್ಗೆ 11.30ರ ಹೊತ್ತಿಗೆ ಮತ ಚಲಾಯಿಸಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮೊಡಗ ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತವಾದ ಸಖಿ ಮತಗಟ್ಟೆಯನ್ನು ಸ್ಥಾಪಸಲಾಗಿದೆ.

ಬೆಳಗಾವಿ ತಾಲ್ಲೂಕಿನ ತಮ್ಮರಗುಡಿ ಗ್ರಾಮದ ಮತಗಟ್ಟೆಯಲ್ಲಿ ಆರೋಗ್ಯ ಸೇವೆ ಕಾರ್ಯಕರ್ತರು ಮತದಾರರಿಗೆ ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಸ್ ಮಾಡಲಾಗುತ್ತಿದೆ. ಸೂಕ್ಷ್ಮ ಮತಗಟ್ಟೆಯಾದ ಗೋಕಾಕ್ ತಾಲ್ಲೂಕಿನ ಅಂಕಲಗಿ ಗ್ರಾಮದ 7 ಮತಗಟ್ಟೆಗಳಲ್ಲಿ ಭದ್ರತೆಗಾಗಿ ಕೇಂದ್ರ ಭದ್ರತಾ ಪಡೆ ಮತ್ತು ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ.

ಮತದಾನ ಬಹಿಷ್ಕಾರ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ತಡಸಿ ಮತ್ತು ಚಿಕ್ಕ ತಡಸಿ ಗ್ರಾಮಸ್ಥರು ತಮ್ಮ ಪ್ರವಾಹ ಪೀಡಿತ ಗ್ರಾಮವನ್ನು ಸ್ಥಳಾಂತರ ಮಾಡುವ ಬೇಡಿಕೆಯನ್ನು ಈಡೇರಿಸಿಲ್ಲ ಎಂದು ವಿರೋಧಿಸಿ ಮತದಾರರು ಮತದಾನ ಬಹಿಷ್ಕಾರ ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com