ಕೊರೊನಾ ಸೋಂಕು ನಿಯಂತ್ರಣ: ಮಾಹಿತಿ ಕೋರಿ ಸಿಎಂಗೆ ಸಿದ್ದರಾಮಯ್ಯ ಪತ್ರ!

ಕೊರೊನಾ ಸೋಂಕು ನಿಯಂತ್ರಣ, ಸೋಂಕಿತರಿಗೆ ಚಿಕಿತ್ಸೆ ನೀಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೋರಿ ಹಾಗೂ ಸಾರ್ವಜನಿಕರ ರಕ್ಷಣೆಗೆ ಸರ್ಕಾರ ಯಾವ ರೀತಿ ಮುಂದಾಗಬೇಕು ಎಂಬುದರ ಬಗ್ಗೆ ಸಲಹೆಗಳನ್ನು ನೀಡಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಸಿದ್ದರಾಮಯ್ಯ-ಯಡಿಯೂರಪ್ಪ
ಸಿದ್ದರಾಮಯ್ಯ-ಯಡಿಯೂರಪ್ಪ

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣ, ಸೋಂಕಿತರಿಗೆ ಚಿಕಿತ್ಸೆ ನೀಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೋರಿ ಹಾಗೂ ಸಾರ್ವಜನಿಕರ ರಕ್ಷಣೆಗೆ ಸರ್ಕಾರ ಯಾವ ರೀತಿ ಮುಂದಾಗಬೇಕು ಎಂಬುದರ ಬಗ್ಗೆ ಸಲಹೆಗಳನ್ನು ನೀಡಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಬುಧವಾರ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು ಸರ್ಕಾರದ ವೈಫಲ್ಯದಿಂದಾಗಿ ಸದ್ಯ ಇಂತಹ ಪರಿಸ್ಥಿತಿ ಎದುರಾಗಿದೆ ಎಂದು ಕಿಡಿಕಾರಿದ್ದರು. ಇದೀಗ ಸಿಎಂ ಬಿಎಸ್‌ ಯಡಿಯೂರಪ್ಪ ಅವರಿಗೆ ಪತ್ರವನ್ನು ಬರೆಯುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಏನು ಕ್ರಮಗಳನ್ನು ಕೈಗೊಂಡಿದೆ  ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಅವರು ಯಡಿಯೂರಪ್ಪನವರಿಗೆ ಬರೆದಿರುವ ಪತ್ರದಲ್ಲಿ ಏನಿದೆ ಎಂಬುವುದರ ಪೂರ್ಣ ಮಾಹಿತಿ ಇಲ್ಲಿದೆ.

'ಮಾನ್ಯ ಯಡಿಯೂರಪ್ಪ ರವರೆ,

ದೇಶದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡು 15 ತಿಂಗಳಾದವು. ರಾಜ್ಯದಲ್ಲಿ 14 ತಿಂಗಳುಗಳಾದವು. ಕಳೆದ ಒಂದು ತಿಂಗಳಿನಿಂದೀಚೆಗೆ ಎರಡನೆ ಅಲೆ ಪ್ರಾರಂಭವಾಗಿದೆ. ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಕಳೆದ ವರ್ಷದ ಆರಂಭದಲ್ಲಿ ಕಾಣಿಸಿಕೊಂಡ ಕೋವಿಡ್ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಕಾಣಿಸಿಕೊಂಡಿತು.  ಇದರ ಮೊದಲ ಹಂತದಲ್ಲಿ ಕೋವಿಡ್ ಸೋಂಕು ವ್ಯಾಪಿಸಲು ನಿಸರ್ಗದಲ್ಲಿನ ಏರುಪೇರುಗಳೂ ಸಹ ಕಾರಣವಾಗಿದ್ದವು. ಎಂದು ಹೇಳಬಹುದು. ಆದರೆ, ಎರಡನೆ ಅಲೆಯ ಸಂದರ್ಭದಲ್ಲಿ ಉಂಟಾಗುತ್ತಿರುವ ಸಾವು-ನೋವುಗಳಿಗೆ ನೇರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅದಕ್ಷತೆ ಮತ್ತು ನಿರ್ಲಕ್ಷ್ಯಗಳೇ ಕಾರಣ.  2020ರ ನವೆಂಬರ್ 21 ರಂದು ಸಂಸತ್ತಿನ ಸ್ಥಾಯಿ ಸಮಿತಿಯು ಕೇಂದ್ರ ಸರ್ಕಾರಕ್ಕೆ ಕೊರೋನಾ ಎರಡನೇ ಅಲೆ ಬರುವ ಬಗ್ಗೆ ಅದಕ್ಕಾಗಿ ಮಾಡಿಕೊಳ್ಳಬೇಕಾದ ಸಿದ್ದತೆಗಳ ಕುರಿತು ವರದಿ ನೀಡಿತ್ತು. ಅದೇ ತಿಂಗಳ ಅಂತ್ಯದಲ್ಲಿ ನಮ್ಮಲ್ಲಿ ರಾಜ್ಯ ಸರ್ಕಾರ ರಚಿಸಿರುವ ತಾಂತ್ರಿಕ ಸಲಹೆಗಾರರ ತಂಡ ರಾಜ್ಯ ಸರ್ಕಾರಕ್ಕೆ  ಎರಡನೆ ಅಲೆಯ ಕುರಿತು ಸಲಹೆಗಳನ್ನು ನೀಡಿತ್ತು.

ಈ ವರದಿಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಸಂಪೂರ್ಣ ನಿರ್ಲಕ್ಷಿಸಿದವು. ಈ ವರದಿಗಳನ್ನು, ಎಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಹಾಸಿಗೆ, ಆಂಬುಲೆನ್ಸ್, ಔಷಧ, ಐ.ಸಿ.ಯು. ಆಕ್ಸಿಜನ್ ವ್ಯವಸ್ಥೆಗಳನ್ನು ವ್ಯಾಪಕ ಲಸಿಕಾ ಅಭಿಯಾನಗಳನ್ನು ನಡೆಸಬೇಕಾಗಿತ್ತು. ಆದರೆ ನೀವೇನು ಮಾಡಿದಿರಿ ಎಂದು  ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ. 2021ರ ಜನವರಿ 20, 21 ರ ಆರಂಭದಲ್ಲಿ ಇದ್ದ ಪರಿಸ್ಥಿತಿಯಲ್ಲಿ ಈಗ ಏನಾದರೂ ಬದಲಾವಣೆ ಆಗಿದೆಯೇ? ಇದ್ದರೆ ಸಾರ್ವಜನಿಕರಿಗೆ ತಿಳಿಸಿ. ಹೊಸದಾಗಿ ಎಷ್ಟು ಬೆಡ್ಗಳನ್ನು, ಎಷ್ಟು ಐ.ಸಿ.ಯು.ಬೆಡ್ಗಳನ್ನು, ಎಷ್ಟು ಆಕ್ಸಿಜನ್ ವ್ಯವಸ್ಥೆಯಿರುವ ಬೆಡ್ಗಳನ್ನು ಹೆಚ್ಚಿಸಿದ್ದೀರಿ?,  ರೆಮ್ಡಿಸಿವಿಯರ್ ಉತ್ಪಾದನೆಯನ್ನು ಎಷ್ಟು ಹೆಚ್ಚಿಸಲಾಗಿದೆ?, ಆಕ್ಸಿಜನ್ ಉತ್ಪಾದನೆಯನ್ನು ಎಷ್ಟು ಹೆಚ್ಚಿಸಲಾಗಿದೆ? ತಿಳಿಸಿ. ವೈದ್ಯಕೀಯ ಕ್ಷೇತ್ರದಲ್ಲಿ ತಜ್ಞರಾಗಿರುವ ಡಾ|| ದೇವಿಪ್ರಸಾದ್ ಶೆಟ್ಟಿ ಯವರ ಪ್ರಕಾರ ಕೋವಿಡ್ ಎರಡನೆ ಅಲೆಯಲ್ಲಿ ಹೆಚ್ಚು ಸೋಂಕಿತರಾಗಿರುವವರು ಮತ್ತು ಐ.ಸಿ.ಯು. ನಲ್ಲಿ ಚಿಕಿತ್ಸೆ  ಪಡೆಯುತ್ತಿರುವವರು, ಸಣ್ಣ ಸಣ್ಣ ವಯಸ್ಸಿನವರು. ಇವರ ಕುಟುಂಬಗಳ ದುಡಿಮೆಗೆ ಜೀವನಾಧಾರವಾಗಿರುವ ಯುವಕರೇ ಆಗಿದ್ದಾರೆ. ದುರಂತವೆಂದರೆ ಹೆಚ್ಚು ಮರಣ ಹೊಂದುತ್ತಿರುವವರೂ ಸಹ ಯುವಜನತೆ. ಕುಟುಂಬಗಳಲ್ಲಿ ದುಡಿಯುವ ವಯಸ್ಸಿನವರು ಮರಣ ಹೊಂದಿದರೆ ಇಡೀ ಕುಟುಂಬದ ಬದುಕು ಸಂಪೂರ್ಣ  ಅಸ್ತವ್ಯಸ್ತವಾಗುತ್ತದೆ ಮತ್ತು ದುರಂತಕ್ಕೆ ಸಿಲುಕಿಕೊಳ್ಳುತ್ತದೆ.

ಡಾ|| ದೇವಿಪ್ರಸಾದ್ಶೆಟ್ಟಿಯವರ ಪ್ರಕಾರ ವರದಿಯಾಗುತ್ತಿರುವುದಕ್ಕಿಂತ ಕನಿಷ್ಟ 5 ಪಟ್ಟು ಹೆಚ್ಚು ಜನ ಸೋಂಕಿತರಾಗುತ್ತಿದ್ದಾರೆ. ರಾಜ್ಯದಲ್ಲಿ 35 ರಿಂದ 40 ಸಾವಿರ ಜನ ಪ್ರತಿದಿನ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದರೆ, ವಾಸ್ತವದಲ್ಲಿ ಕನಿಷ್ಟ 2 ಲಕ್ಷ ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆಂದೇ ಅರ್ಥ. ಇದರಲ್ಲಿ ಕನಿಷ್ಟ  ಶೇ.5 ರಷ್ಟು ಜನಕ್ಕೆ ವೆಂಟಿಲೇಟರ್ ಅಗತ್ಯವಿದೆ ಎಂದರೂ 10,000 ವೆಂಟಿಲೇಟರ್ಗಳ ಅಗತ್ಯವಿರುತ್ತದೆ. ಒಬ್ಬ ರೋಗಿ 10 ದಿನ ಐ.ಸಿ.ಯು.ನಲ್ಲಿ ಇರುತ್ತಾನೆಂದುಕೊಂಡರೆ 10 ದಿನಕ್ಕೆ ಒಂದು ಲಕ್ಷ ವೆಂಟಿಲೇಟರ್ಗಳು ಬೇಕಾಗುತ್ತವೆ. ಆದರೆ ರಾಜ್ಯದಲ್ಲಿ 10 ಸಾವಿರ ಐ ಸಿ ಯು ಬೆಡ್ ಗಳೂ ಇಲ್ಲಅತಿ ಹೆಚ್ಚು  ಸೋಂಕಿತರಿರುವ ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿರುವ ಐ.ಸಿ.ಯು.ಬೆಡ್ಗಳು ಕೇವಲ 952 ಮಾತ್ರ. ಅದರಲ್ಲಿ ವೆಂಟಿಲೇಟರ್ ಸೌಲಭ್ಯವಿರುವ ಬೆಡ್ಗಳ ಸಂಖ್ಯೆ ಕೇವಲ 434 ಮಾತ್ರ. ಇಂಥ ಪರಿಸ್ಥಿತಿಯಲ್ಲಿ ರೋಗಿಗಳು ಮರಣ ಹೊಂದಿದರೆ ಅದಕ್ಕೆ ಯಾರನ್ನು ಹೊಣೆ ಮಾಡಬೇಕು? ಕಳೆದ ಒಂದು ತಿಂಗಳಿನಿಂದಾದರೂ ಎಷ್ಟು  ಐ.ಸಿ.ಯು.ಬೆಡ್ಗಳನ್ನು, ಆಕ್ಸಿಜನ್ ವ್ಯವಸ್ಥೆಯನ್ನು ಹೆಚ್ಚಿಸಿದ್ದೀರಿ? ಸಾರ್ವಜನಿಕರಿಗೆ ತಿಳಿಸಿ.

ರಾಜ್ಯದ ಜನರ ಸಂಕಟಗಳನ್ನು ನೋಡಲಾಗುತ್ತಿಲ್ಲ. ಆಕ್ಸಿಜನ್ ವ್ಯವಸ್ಥೆಯೂ ಇದೇ ರೀತಿ ಇದೆ. 1,400 ಟನ್ ಆಕ್ಸಿಜನ್ ಅಗತ್ಯವಿರುವ ಕಡೆ ಕೇವಲ 300-400 ಟನ್ ಆಕ್ಸಿಜನ್ ಹಂಚಿಕೆ ಮಾಡಲಾಗಿದೆ. ವೈರಸ್ಗಳ ನಿಯಂತ್ರಣಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ರೆಮ್ಡಿಸಿವಿರ್ ಔಷಧಿ ಬೇಡಿಕೆಗೆ ಹೋಲಿಸಿದರೆ ಶೇ.20  ರಷ್ಟೂ ಸರಬರಾಜು ಆಗುತ್ತಿಲ್ಲ. ಘನತೆಯಿಂದ ಶವಸಂಸ್ಕಾರವನ್ನೂ ಮಾಡಲಾಗದ ಪರಿಸ್ಥಿತಿಯನ್ನು ರಾಜ್ಯದಲ್ಲಿ ನಿರ್ಮಿಸಿದ್ದೀರಿ. ಇಂಥ ಸಂದರ್ಭದಲ್ಲಿ ನಾಗರಿಕ ಸರ್ಕಾರವೊಂದು ನಡೆದುಕೊಳ್ಳಬೇಕಾದ ರೀತಿ ಇದೇನಾ ಎಂದು ಜನ ಕೇಳುತ್ತಿದ್ದಾರೆ. ಆದ್ದರಿಂದ ಸರ್ಕಾರ ತನ್ನೆಲ್ಲಾ ಶಕ್ತಿಯನ್ನು ಬಳಸಿ ಸಾರ್ವಜನಿಕರ  ರಕ್ಷಣೆಗೆ ನಿಲ್ಲಬೇಕೆಂದು ಒತ್ತಾಯಿಸುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com