ಸಂಪುಟ ವಿಸ್ತರಣೆ ಕುರಿತು ಬಿಜೆಪಿ ವರಿಷ್ಠರೊಂದಿಗೆ ಸಮಾಲೋಚನೆಗಾಗಿ ದೆಹಲಿಗೆ ತೆರಳಿದ ಮುಖ್ಯಮಂತ್ರಿ ಬೊಮ್ಮಾಯಿ

ಸಂಪುಟ ವಿಸ್ತರಣೆ ಕುರಿತು ಕೇಂದ್ರದ ಬಿಜೆಪಿ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ದೆಹಲಿಗೆ ತೆರಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಸಂಪುಟ ವಿಸ್ತರಣೆ ಕುರಿತು ಕೇಂದ್ರದ ಬಿಜೆಪಿ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ದೆಹಲಿಗೆ ತೆರಳಿದರು.

ರಾಷ್ಟ್ರ ರಾಜಧಾನಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಬಹುಶ: ಸೋಮವಾರ ಸಭೆ ನಡೆಯುವ ಸಾಧ್ಯತೆಯಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರನ್ನು ಭೇಟಿ ಮಾಡುವುದಾಗಿ ತಿಳಿಸಿದರು.

ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ವಾರ ಬೇಕಾಗಿಲ್ಲ, ಸೋಮವಾರವೇ ಕೇಂದ್ರದ ವರಿಷ್ಠರಿಂದ ನಿರ್ದೇಶನ ಬರುವ ಸಾಧ್ಯತೆ  ಇದೆ ಎಂದು ಇಂದು ಬೆಳಗ್ಗೆ ಮುಖ್ಯಮಂತ್ರಿ ಹೇಳಿಕೆ ನೀಡಿದ್ದರು. 

ಬಿಎಸ್ ಯಡಿಯೂರಪ್ಪ ಜುಲೈ 26 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ನೂತನ ಮುಖ್ಯಮಂತ್ರಿಯಾಗಿ ಜುಲೈ 28 ರಂದು ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಅವರೇ ಏಕಮೇವ ಸಚಿವರಾಗಿದ್ದು, ಅನೇಕ ಮಂದಿ ಸಚಿವಕಾಂಕ್ಷಿಗಳಿದ್ದು, ಸ್ಥಾನ ಪಡೆಯಲು ಒತ್ತಡ ಹಾಕುತ್ತಿದ್ದಾರೆ. ಮಾಜಿ ಕೃಷಿ ಸಚಿವ ಬಿ. ಸಿ. ಪಾಟೀಲ್, ಬೊಮ್ಮಾಯಿ ಅವರನ್ನು ಭೇಟಿಯಾದರು. ಆದರೆ, ತನ್ನ ಕ್ಷೇತ್ರದ ನೀರಾವರಿ ಯೋಜನೆಗೆ ಸಂಬಂಧಿಸಿದ ಭೇಟಿಯಾಗಿತ್ತು ಎಂದು ಹೇಳಿಕೆ ನೀಡಿದರು. 

ಸಚಿವ ಸ್ಥಾನ ಕುರಿತಂತೆ ಮುಖ್ಯಮಂತ್ರಿ ಜೊತೆಗೆ ಮಾತನಾಡಿದ್ದೀರಾ ಎಂಬ ಪ್ರಶ್ನೆ ಉತ್ತರಿಸಿದ ಬಿ. ಸಿ. ಪಾಟೀಲ್, ಮುಖ್ಯಮಂತ್ರಿಗೆ ಗೊತ್ತಿದೆ. ಸಂಪುಟ ವಿಸ್ತರಣೆ ಬಗ್ಗೆ ಈಗಾಗಲೇ ಅವರು ಹೇಳಿದ್ದಾರೆ. ಆದ್ದರಿಂದ ಈ ವಿಚಾರ ಕುರಿತಂತೆ ಅವರ ಬಳಿ ಚರ್ಚೆ ನಡೆಸಿಲ್ಲ ಎಂದರು. 

ಮೈತ್ರಿ ಸರ್ಕಾರ ಕೆಡವಿ ಬಿಜೆಪಿಗೆ ಸೇರ್ಪಡೆಯಾದ 17 ಶಾಸಕರು ಕೂಡಾ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಅವರ ತ್ಯಾಗದ ಫಲವೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಸಾಧ್ಯವಾಯಿತು ಎಂದು ಬಿ. ಸಿ. ಪಾಟೀಲ್ ಹೇಳಿದರು.

ಬಿ. ಸಿ. ಪಾಟೀಲ್ ಅಲ್ಲದೇ, ಮುರುಗೇಶ್ ನಿರಾಣಿ, ಶಿವನಗೌಡ ನಾಯಕ್, ಮಹೇಶ್ ಕುಮಟಳ್ಳಿ, ಕೆ. ಜಿ, ಬೊಪಯ್ಯ, ಡಾ. ಸಿ.ಎನ್. ಅಶ್ವತ್ಥ ನಾರಾಯಣ , ವಿ. ಸೋಮಣ್ಣ ಸೇರಿದಂತೆ ಹಲವು ಮಂದಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com