ಬೊಮ್ಮಾಯಿ ನೂತನ ಸಂಪುಟಕ್ಕೆ 20 ಸಚಿವರು?: ಆ.4ಕ್ಕೆ ಸಂಪುಟ ರಚನೆ ಸಾಧ್ಯತೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟವನ್ನು ಸೇರಬಹುದಾದ 6 ಮಂದಿ ಸಚಿವರ ಬಗ್ಗೆ ಚರ್ಚೆ ಈಗಾಗಲೇ ಪೂರ್ಣಗೊಂಡಿದೆ. ಇದಲ್ಲದೆ, ಹೈಕಮಾಂಡ್ ತಾನಾಗೇ 7 ಮಂದಿಯ ಹೆಸರನ್ನು ಪ್ರಸ್ತಾಪ ಮಾಡಿದೆ ಎಂದು ಹೇಳಲಾಗುತ್ತಿದ್ದು, ಒಟ್ಟಾರೆ ಹೊಸ ಸಂಪುಟದಲ್ಲಿ 20 ಮಂದಿ ಸಚಿವರು ಇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 
ದೆಹಲಿ ಭೇಟಿ ವೇಳೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿರುವ ಸಿಎಂ ಬೊಮ್ಮಾಯಿ
ದೆಹಲಿ ಭೇಟಿ ವೇಳೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿರುವ ಸಿಎಂ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟವನ್ನು ಸೇರಬಹುದಾದ 6 ಮಂದಿ ಸಚಿವರ ಬಗ್ಗೆ ಚರ್ಚೆ ಈಗಾಗಲೇ ಪೂರ್ಣಗೊಂಡಿದೆ. ಇದಲ್ಲದೆ, ಹೈಕಮಾಂಡ್ ತಾನಾಗೇ 7 ಮಂದಿಯ ಹೆಸರನ್ನು ಪ್ರಸ್ತಾಪ ಮಾಡಿದೆ ಎಂದು ಹೇಳಲಾಗುತ್ತಿದ್ದು, ಒಟ್ಟಾರೆ ಹೊಸ ಸಂಪುಟದಲ್ಲಿ 20 ಮಂದಿ ಸಚಿವರು ಇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಮೂಲಗಳ ಪ್ರಕಾರ ಆಗಸ್ಟ್ 4 ರಂದು ನೂತನ ಸಚಿವ ಸಂಪುಟ ರಚನೆಯಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. 

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ಬಳಿಕ ಬಸವರಾಜ ಬೊಮ್ಮಾಯಿಯವರು ಬುಧವಾರವಷ್ಟೇ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಅಂದಿನಿಂದಲೂ ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿ ಹಾಗೂ ಪ್ರವಾಹ ಪರಿಸ್ಥಿತಿಯನ್ನು ಏಕಾಂಗಿಯಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಶುಕ್ರವಾರವಷ್ಟೇ ದೆಹಲಿಗೆ ಭೇಟಿ ನೀಡಿದ್ದ ಬೊಮ್ಮಾಯಿಯವರು, ವರಿಷ್ಠರನ್ನು ಭೇಟಿ ಮಾಡಿ ಶನಿವಾರ ರಾಜ್ಯಕ್ಕೆ ಆಗಮಿಸಿದ್ದಾರೆ. 

ದೆಹಲಿ ಭೇಟಿಗೂ ಮುನ್ನ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿ, ಪರಿಸ್ಥಿತಿ ಪರಿಶೀಲನೆ ನಡೆಸಿದ್ದರು. ದೆಹಲಿಯಿಂದ ವಾಪಸ್ಸಾಗುತ್ತಿದ್ದಂತೆಯೇ ರಾಜ್ಯದ ಕೋವಿಡ್ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. 

ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿಯವರು, ಸಂಪುಟ ರಚನೆ ಕುರಿತು ಸೋಮವಾರ ಹೈಕಮಾಂಡ್ ನಿಂದ ದೂರವಾಣೆ ಕರೆ ಬರಲಿದೆ. ನಂತರ ದೆಹಲಿಗೆ ತೆರಳಲಿದ್ದೇನೆ. ಸಚಿವ ಸ್ಥಾನಕ್ಕೆ ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ಆದರೆ, ಯಾರೂ ಲಾಬಿ ನಡೆಸುತ್ತಿಲ್ಲ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಉನ್ನತ ನಾಯಕರು ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ನನ್ನ ಬಳಿ ಈವರೆಗೂ ಯಾವುದೇ ಪಟ್ಟಿಯೂ ಇಲ್ಲ ಎಂದು ಹೇಳಿದ್ದರು. 

ಇದಲ್ಲದೆ, ಸಂಪುಟ ರಚನೆ ಕುರಿತು ಮಾಜಿ ಸಚಿವ ಆರ್.ಅಶೋಕ್ ಹಾಗೂ ವಿ.ಸೋಮಣ್ಣ ನಡುವೆ ಮನಸ್ಥಾಪಗಳು ಶುರುವಾಗಿವೆ ಎಂಬ ವರದಿಗಳ ವಿರುದ್ಧ ಕಿಡಿಕಾರಿದ್ದಾರೆ. 

ಈ ನಡುವೆ ಬೊಮ್ಮಾಯಿಯವರು ಸೋಮವಾರ ಮತ್ತೆ ದೆಹಲಿಗೆ ಭೇಟಿ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಮಂಗಳವಾರ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಚಿವರ ಪಟ್ಟಿ ಸಿದ್ಧಗೊಳ್ಳಲಿದ್ದು, ಬುಧವಾರ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ. 

ಕೆಲ ಸಚಿವರು ಬುಧವಾರವೇ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಕೆಲ ಸಚಿವರು ಜಿಲ್ಲಾ ಪಂಚಾಯತ್ ಚುನಾವಣೆ ವೇಳೆ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಹಳೆಯ ಸಚಿವರನ್ನು ಈ ಬಾರಿಯ ಸಂಪುಟದಲ್ಲಿ ಸೇರ್ಪಡೆಗೊಳಿಸಲಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. 

ಜಗದೀಶ್ ಶೆಟ್ಟರ್ ಅವರು ಸಂಪುಟಕ್ಕೆ ಸೇರ್ಪಡೆಗೊಳ್ಳುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇನ್ನುಳಿದ ಬಿಜೆಪಿಯ ಹಿರಿಯ ನಾಯಕರಾದ ಕೆ.ಎಸ್.ಈಶ್ವರಪ್ಪ, ಎಸ್.ಸುರೇಶ್ ಕುಮಾರ್ ಹಾಗೂ ವಿ.ಸೋಮಣ್ಣ ಅವರು ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿಲ್ಲವಾದರೂ, ಉಳಿದ ಕೆಲ ನಾಯಕರು ಲಾಬಿ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ. 

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಬೊಮ್ಮಾಯಿಯವರು, ಹೈಕಮಾಂಡ್ ಸಂಪುಟ ರಚನೆ ಕುರಿತು ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com