ಸಚಿವ ಸಂಪುಟ ರಚನೆ: ಬುಧವಾರ ಬೆಳಗ್ಗೆ ವರಿಷ್ಠರಿಂದ ಶುಭ ಸೂಚನೆ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬಹು ನಿರೀಕ್ಷಿತ ನೂತನ ಸಚಿವ ಸಂಪುಟ ರಚನೆ ಕುರಿತಂತೆ ಬುಧವಾರ ಬೆಳಗ್ಗೆ ಅಂತಿಮವಾಗಿ ವರಿಷ್ಠರಿಂದ ಶುಭ ಸೂಚನೆ ಸಿಗಲಿದೆ. ನಂತರ ಪಟ್ಟಿ ಪ್ರಕಟವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
Published: 03rd August 2021 11:48 PM | Last Updated: 04th August 2021 02:49 AM | A+A A-

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು: ಬಹು ನಿರೀಕ್ಷಿತ ನೂತನ ಸಚಿವ ಸಂಪುಟ ರಚನೆ ಕುರಿತಂತೆ ಬುಧವಾರ ಬೆಳಗ್ಗೆ ಅಂತಿಮವಾಗಿ ವರಿಷ್ಠರಿಂದ ಶುಭ ಸೂಚನೆ ಸಿಗಲಿದೆ. ನಂತರ ಪಟ್ಟಿ ಪ್ರಕಟವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರ ಜೊತೆಗೆ ಮಾತುಕತೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡ್ಮೂರು ವಿಚಾರಗಳ ಬಗ್ಗೆ ಬುಧವಾರ ಬೆಳಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನ ಮಾಡಲಿದೆ. ಆ ಬಳಿಕ ಪಟ್ಟಿಯನ್ನು ಪ್ರಕಟ ಮಾಡಬಹುದು ಎಂದು ವರಿಷ್ಠರು ತಿಳಿಸಿದ್ದಾರೆ. ವರಿಷ್ಠರಿಂದ ಬೇಗ ಖಚಿತತೆ ಸಿಕ್ಕರೆ ಬೇಗನೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದರು.
ಬುಧವಾರ ಮಧ್ಯಾಹ್ನ 2-15ಕ್ಕೆ ಪ್ರಮಾಣ ವಚನ ಕಾರ್ಯಕ್ರಮ ನಿಗದಿಯಾಗಿದೆ ಎಂಬ ಮಾಹಿತಿ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಚರ್ಚೆ ಮಾಡಲು ಬಹಳ ವಿಷಯಗಳು ಇಲ್ಲ, ಎರಡು ಮೂರು ವಿಷಯಗಳಿವೆ. ಡಿಸಿಎಂ ಸ್ಥಾನ ಮತ್ತು ವಿಜಯೇಂದ್ರ ಸಂಪುಟಕ್ಕೆ ಸೇರ್ಪಡೆ ಕುರಿತಂತೆ ಯಡಿಯೂರಪ್ಪ ಅವರೊಂದಿಗೆ ವರಿಷ್ಠರು ಮಾತನಾಡಿದ ಬಳಿಕ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದರು.
ಜನಪರ ಆಡಳಿತ ಗಮನದಲ್ಲಿಟ್ಟುಕೊಂಡು ಸಂಪುಟ ರಚನೆಯಾಗಲಿದೆ. ಸಾಮಾಜಿಕ ನ್ಯಾಯ, ವಲಸಿಗರ ಬಗ್ಗೆ ಚರ್ಚೆ ಆಗಿದೆ. ಜೆ. ಪಿ. ನಡ್ಡಾ ಅವರು ಕೆಲವೊಂದು ಸ್ಪಷ್ಟನೆ ನೀಡಿದ್ದಾರೆ. ಎರಡು ಹಂತದಲ್ಲಿ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ. ಮೊದಲಿಗೆ 22 ರಿಂದ 24 ಮಂದಿ ಶಾಸಕರು ಸಚಿವರಾಗುವ ಸಾಧ್ಯತೆಯಿದೆ. ಎಲ್ಲವೂ ನಾಳೆ ಬೆಳಗ್ಗೆ ಎಲ್ಲವೂ ನಿರ್ಧಾರವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಂತ್ರಿ ಸ್ಥಾನ ಯಾರಿಗೆ?
ಅಶೋಕ್, ಈಶ್ವರಪ್ಪ, ಶ್ರೀರಾಮುಲು, ಗೋವಿಂದ ಕಾರಜೋಳ, ಅಶ್ವತ್ಥ ನಾರಾಯಣ, ಅರವಿಂದ ಲಿಂಬಾವಳಿ, ಬಿ. ಸಿ. ಪಾಟೀಲ್, ಬೈರತಿ ಬಸವರಾಜು, ಎಸ್. ಟಿ ಸೋಮಶೇಖರ್, ಸುಧಾಕರ್, ಪೂರ್ಣಿಮಾ ಶ್ರೀನಿವಾಸ್, ಅರವಿಂದ್ ಬೆಲ್ಲದ್ ಮತ್ತಿತರರು
ಯಾರಿಗೆ ಕೊಕ್?
ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ, ಕೋಟಾ ಶ್ರೀನಿವಾಸ ಪೂಜಾರಿ, ಶಶಿಕಲಾ ಜೊಲ್ಲೆ ಮತ್ತಿತರರು