ಅಂತಃಪುರದ ಸುದ್ದಿಗಳು: ರಾಜ್ಯಕ್ಕೆ ರಾಜರಾದರೂ ದಿಲ್ಲಿ ದರ್ಬಾರ್ ಗೆ ಸಾಮಂತರೇ..

-ಸ್ವಾತಿ ಚಂದ್ರಶೇಖರ್Cabinet is Prerogative of Chief Minister. ಇದು ಕೇವಲ ಲಿಖಿತ ರೂಪದಲ್ಲಿ ಸಂವಿಧಾನದಲ್ಲಿ ಮಾತ್ರ ದೊರೆವುದು, ಆದರೆ ವಾಸ್ತವದಲ್ಲಿ ಬಳಕೆಗೆ ಬರಲು ಕಳೆದ 2-3 ದಶಕಗಳಲ್ಲಿ ಆಗಲೇ ಇಲ್ಲ, ಈಬಾರಿಯೂ ಬೊಮ್ಮಾಯಿ ಪರಿಸ್ಥಿತಿ ಅದೇ ಆಗಿತ್ತು. 
ಬಸವರಾಜ ಬೊಮ್ಮಾಯಿ - ಪ್ರಧಾನಿ ಮೋದಿ
ಬಸವರಾಜ ಬೊಮ್ಮಾಯಿ - ಪ್ರಧಾನಿ ಮೋದಿ

ಸ್ವಾತಂತ್ರ್ಯ ಎನ್ನುವುದು ಕೇವಲ ಮನಸ್ಸಿನ ಇರುವಿಕೆ ಅಷ್ಟೇ, ಅಸಲಿ ಸ್ವಾತಂತ್ರ್ಯಗಳಿಸಲು ರಾಜಕೀಯದಲ್ಲಿ ಎಂದಿಗೂ ಸಾಧ್ಯವಿಲ್ಲ, ರಾಜ್ಯದಲ್ಲಿ ಉನ್ನತ ಸ್ಥಾನಕ್ಕೆ ಏರಿದ ತಕ್ಷಣ ಸ್ವಾತಂತ್ರ್ಯ ಸಿಗುವುದು ಎಂದರೆ ಅದು ಅಕ್ಷರಶಃ ಸುಳ್ಳು!!.

ಎಷ್ಟೋ ಬಾರಿ ನಡೆ-ನುಡಿ, ಆಚಾರ-ವಿಚಾರ, ಊಟ-ಉಪಚಾರಗಳೇ ಸ್ವೇಚ್ಛೆಯಿಂದ ಮಾಡಲು ಆಗುವುದಿಲ್ಲ ಇನ್ನು ಸಂಪುಟ ರಚನೆ ಕನಸಿನ ಮಾತು!!.

Cabinet is Prerogative of Chief Minister. ಇದು ಕೇವಲ ಲಿಖಿತ ರೂಪದಲ್ಲಿ ಸಂವಿಧಾನದಲ್ಲಿ ಮಾತ್ರ ದೊರೆವುದು, ಆದರೆ ವಾಸ್ತವದಲ್ಲಿ ಬಳಕೆಗೆ ಬರಲು ಕಳೆದ 2-3 ದಶಕಗಳಲ್ಲಿ ಆಗಲೇ ಇಲ್ಲ, ಈಬಾರಿಯೂ ಬೊಮ್ಮಾಯಿ ಪರಿಸ್ಥಿತಿ ಅದೇ ಆಗಿತ್ತು. 

ಇತ್ತ ಹೈ ಕಮಾಂಡ್, ಅತ್ತ ರಾಜಕೀಯ ಮಿತ್ರರು, ಮುನ್ನಡೆದರೆ ವಲಸಿಗರು. ಬೊಮ್ಮಾಯಿ ಎಷ್ಟು ತಮ್ಮ ಸುತ್ತ ಇರುವ ಜನರನ್ನು ಮೆಚ್ಚಿಸಲು ಹೋಗುವರೊ ಅಷ್ಟೂ ಸ್ವಾತಂತ್ರ್ಯ ಹೀನರಾಗುವರು. ಎಲ್ಲರನ್ನೂ ಮೆಚ್ಚಿಸಲು ಹೋಗಿ ಯಾರನ್ನು ಮೆಚ್ಚಿಸದೆ ಉಳಿಯುವೆನೇನೋ ಎಂಬ ಭಯ ಬೊಮ್ಮಾಯಿ ಅವರನ್ನು ಕಾಡಿದ್ದಂತೂ ನಿಜ.

ನಾಯಕನೆಂಬ ಪ್ರಖರತೆಗಿಂತೆ, ಉತ್ತಮ ರಾಜಕೀಯ ಪಟು ಎನಿಸಿಕೊಳ್ಳುವುದೇ ಲೇಸು

ಸಾಮಾನ್ಯವಾಗಿ ಮುಖ್ಯಮಂತ್ರಿ ಆದವರು ಅಥವಾ ಆಗುವವರು ತಮ್ಮ ಸುತ್ತ ರಾಜಕೀಯವಾಗಿ ತಮಗೆ ಕಂಟಕವಾಗುವ, ಉಪಮುಖ್ಯಮಂತ್ರಿ ಸ್ಥಾನಕ್ಕೆ ತಲುಪಬಹುದು ಎನ್ನುವವರನ್ನು ಎಂದೂ ಬೆಳೆಸಿಲ್ಲ, ಅದಕ್ಕೆ 2002 ರಿಂದ ನೈಜ್ಯ ಉದಾಹನರಣೆಗಳನ್ನ ನೋಡುತ್ತಿದ್ದೇವೆ. ಅಷ್ಟೇ ಯಾಕೆ ಉಪಮುಖ್ಯಮಂತ್ರಿ ಆದ ಬಹುತೇಕ ನಾಯಕರ ಪೈಕಿ ಪಕ್ಷದಲ್ಲಿ ಇರುವವರಿಗಿಂತ ಹೊರ ನಡೆದವರೆ ಹೆಚ್ಚು. ಉಪಮುಖ್ಯಮಂತ್ರಿಗಳು ಎಂದೂ ಮುಖ್ಯಮಂತ್ರಿ ಜೊತೆ ಸರಿದೂಗಿದ್ದು ಇಲ್ಲ,  ಹೈ-ಕಮಾಂಡ್ ಬಳಿ ಶಹಬ್ಬಾಶ್ ಗಿರಿ ತೊಗೊಂಡಿದ್ದು ಇಲ್ಲ.

ಇಂತಹ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಇದ್ದರೆ ಸೂಕ್ತ ಎಂದು ಬೊಮ್ಮಾಯಿ ಪಟ್ಟು ಹಿಡಿದಿದ್ದು ಹೈ ಕಮಾಂಡ್ ಗೂ ಆಶ್ಚರ್ಯ ಮೂಡಿಸಿತ್ತು! "weight lifting" ಮಾಡಿ ಚಾಂಪಿಯನ್ ಆಗಲು ಯತ್ನಿಸುವುದಕ್ಕಿಂತ, ಕ್ರಿಕೆಟ್ ಆಡಿ ಮ್ಯಾನ್ ಆಫ್ ದಿ ಮ್ಯಾಚ್ ಆಗುವುದೇ ಲೇಸು ಅಲ್ಲವೇ!! ಆದರೆ ಸದ್ಯಕ್ಕೆ ಹೈಕಮಾಂಡ್ ಕ್ರಿಕೆಟ್ ಗಿಂತ ಒಲಂಪಿಕ್ಸ್ ನ weight lifting ಹೆಚ್ಚು ಜನಪ್ರಿಯತೆ ಹೊಂದಿದೆ. ಹಾಗಾಗಿ ಏಕಾಂಗಿಯಾಗಿ ಹಣಾಹಣಿಗೆ ಇಳಿಯಿರಿ ಎಂದು ಸೂಚಿಸಿದ್ದಾರೆ. 

ಕರ್ನಾಟಕದ ಮುಖ್ಯಮಂತ್ರಿಗಾಗಿ, ಮತ್ತೊಮ್ಮೆ ಗುಜರಾತ್ ಮುಖ್ಯಮಂತ್ರಿ ಆದ ಪ್ರಧಾನಿ

ಕಳೆದ 7 ವರ್ಷಗಳಲ್ಲಿ ಪಕ್ಷದ ಸಭೆಗಳನ್ನು ಹೊರೆತು ಪಡಿಸಿ, ಮೋದಿ ಎಂದೂ ಬಿಜೆಪಿ ಮುಖ್ಯಮಂತ್ರಿಗಳ ಜೊತೆ ತಮ್ಮ ನಿವಾಸದಲ್ಲಿ 20 ನಿಮಿಷಕ್ಕೂ ಅಧಿಕ ಚರ್ಚೆ ನಡೆಸಿಲ್ಲ. ಆದರೆ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ನಂತರ ಪ್ರಧಾನಿ ಭೇಟಿಯಲ್ಲಿ 45 ನಿಮಿಷಗಳ ಸುಧೀರ್ಘ ಮಾತುಕತೆ ನಡೆಯಿತು. ಗುಜರಾತ್ ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಅವರು ಎದುರಿಸಿದ ಸವಾಲುಗಳು, ಅದರಲ್ಲೂ 2 ವರ್ಷದ ಒಳಗೆ ಅವರು ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿ ಸಾಧಿಸಿದ ಯಶಸ್ಸನ್ನು ಮೆಲಕು ಹಾಕುತ್ತಾ, ಮತ್ತೊಮ್ಮೆ ಮುಖ್ಯಮಂತ್ರಿ ಖುರ್ಚಿಯಲ್ಲಿ ವಿಹರಿಸಿ ಬಂದರು.

ಅಲ್ಲಿ ಗುಜರಾತ್ ನಲ್ಲಿ ಮೋದಿ ಸಿಎಂ ಆದ ದಿನಗಳಲ್ಲಿದ್ದ ಸಂದರ್ಭಕ್ಕೂ ಇಲ್ಲಿ ಬೊಮ್ಮಾಯಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ಸಂದರ್ಭಕ್ಕೂ ಬಹಳ ಸಾಮ್ಯತೆಗಳಿವೆ. in fact ಬೊಮ್ಮಾಯಿ ಅವರಿಗೆ "ನಿಭಾಯಿಸಬೇಕಾದ" ಸಂಗತಿಗಳು ಹಲವಾರಿವೆ.

ಮೋದಿ ಸಹ ಗುಜರಾತ್ ನ ಪ್ರಭಾವಿ ನಾಯಕರಾಗಿದ್ದ ಕೇಶುಭಾಯ್ ಪಟೇಲ್ ಅವರನ್ನು ಕೆಳಗಿಳಿಸಿದಾಗ ಸಿಎಂ ಆದವರು. ಸಹಜವಾಗಿಯೇ ಒಂದಷ್ಟು ಆಂತರಿಕ ಅಸಮಾಧಾನಗಳು, ಬಣ ರಾಜಕೀಯಗಳನ್ನು ಎದುರಿಸಿದರು. ಮೋದಿ ಅವರಂತೆಯೇ ಬೊಮ್ಮಾಯಿ ಕೂಡ ಚುನಾವಣೆ ಹತ್ತಿರವಿರುವಾಗ ಸಿಎಂ ಆದವರು ಹಾಗೂ ಅಲ್ಪಾವಾಧಿಯಲ್ಲೇ ಜನ- ಪಕ್ಷದವರ ಮನಸ್ಸನ್ನು ಗೆಲ್ಲುವ ಆಡಳಿತ ನೀಡುವ ಸವಾಲನ್ನು ಎದುರಿಸುತ್ತಿರುವವರು.

ಆದರೆ ಮೋದಿ ತಮ್ಮ ಪೂರ್ವಾಧಿಕಾರಿಯ ತಂತ್ರಗಳನ್ನು ಮೀರಿ ಯಾವುದಕ್ಕೂ ಪಕ್ಕಾಗದೇ ತಮ್ಮದೇ ವೈಖರಿಯನ್ನು ಬೆಳೆಸಿಕೊಂಡು ಅಭಿವೃದ್ಧಿಯತ್ತ ಗಮನಹರಿಸಿದರು. ಈ ವಿಷಯದಲ್ಲಿ ಬೊಮ್ಮಾಯಿ ಅವರ ಮೇಲೆ ಹೆಚ್ಚಾದ ನಿರೀಕ್ಷೆಯೇ ಇದೆ. ಇದಕ್ಕೆ ಕಾಲವೇ ಉತ್ತರಿಸಬೇಕು.

ಕಳೆದ 6 ವರ್ಷಗಳಿಂದ ಬಂಡಾಯ ಶಮನಕ್ಕೊ, ದೆಹಲಿಯ ಅಕ್ಬರ್ ರಸ್ತೆಯ ಬಂಗಲೆಗೂ ಬಿಡಿಸಲಾಗದ ನಂಟು

ಅಕ್ಬರ್ ರಸ್ತೆಯ ಬಂಗಲೆಯಲ್ಲಿ ಈ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಅಮಿತ್ ಶಾ ವಾಸಿಸುತ್ತಿದ್ದರು. ಸಂಸದೀಯ ಮಂತ್ರಿ ಆದ ನಂತರ ಕಳೆದ 2 ವರ್ಷಗಳಿಂದ ಪ್ರಹ್ಲಾದ್ ಜೋಶಿ ಅವರು ಆ ಬಂಗಲೆಗೆ ಶಿಫ್ಟ್ ಆದರು. ಅಂದು ಇಡೀ ದೇಶದ ಬಿಜೆಪಿಯಲ್ಲಿ ಬಂಡಾಯ ಎದ್ದ ಸನ್ನಿವೇಶಗಳಲ್ಲಿ ಆ ಬಂಗಲೆಯೇ ನಾಯಕರಿಗೆ ನೆರವಾಗಿತ್ತು. ಇಂದು ರಾಜ್ಯದ ಬಂಡಾಯ ಶಮನಕ್ಕೆ ಅದೇ ಬಂಗಲೆ ನೆರವಾಗಿದೆ.

ಕಳೆದ ಒಂದು ವಾರದಿಂದ ಸಿಎಂ ತಮ್ಮ ಆಪ್ತರನ್ನು, ಸಚಿವ ಆಕಾಂಕ್ಷಿಗಳನ್ನು, ದೆಹಲಿಯಲ್ಲಿ ಬೀಡು ಬಿಟ್ಟಿದ್ದ ನಾಯಕರನ್ನು ಭೇಟಿ ಆಗುತ್ತಿದ್ದದ್ದು ಅದೇ ಬಂಗಲೆಯಲ್ಲಿ. ಇನ್ನು, ಬಂಡಾಯ ಶಮನಗೊಳಿಸುವಲ್ಲಿ ಜೋಶಿಯವರ ಪ್ರಾಮುಖ್ಯತೆ ಬಗ್ಗೆ ಹೇಳುವ ಅವಶ್ಯಕತೆ ಇಲ್ಲ. ಅನಂತ್ ಕುಮಾರ್ ಸ್ಥಾನವನ್ನು ಸಮರ್ಥವಾಗಿ ಜೋಶಿಯವರು ತುಂಬುತ್ತಿದ್ದಾರೆ ಎನ್ನಬಹುದು.

ಕಾಣೆಯಾಗಿದ್ದಾರೆ ಸಿಎಂ!!

ಮುಖ್ಯಮಂತ್ರಿ ಬೊಮ್ಮಾಯಿ ತಮ್ಮ ಎರಡು ದಿನದ ದೆಹಲಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಈ ಹಿಂದೆ ಬಿಜೆಪಿಯ ಯಾವ ಮುಖ್ಯಮಂತ್ರಿಗೂ ದೊರಕದ bargaining power ಬೊಮ್ಮಾಯಿಗೆ ದೊರಕಿದ್ದು ವಿಶೇಷವೇ ಸರಿ!! 

ದೆಹಲಿಯಲ್ಲಿ 2 ದಿನ ಸತತ ಉಳಿದು ಮೂರು ನಾಲ್ಕು ಬಾರಿ ಪಟ್ಟು ಹಿಡಿದು ಹೈಕಮಾಂಡ್ ಅನ್ನು ಭೇಟಿ ಮಾಡಿ ಪಟ್ಟಿ ಸಿದ್ಧ ಮಾಡುವಲ್ಲಿ ಸಾಕು-ಸಾಕಾಗಿತ್ತು ಅನ್ಸತ್ತೆ. ಇನ್ನು ಕರ್ನಾಟಕ ಭವನದಲ್ಲಿ ಉಳಿದರೆ, ಮಾಧ್ಯಮ ಮತ್ತು ಮಿತ್ರ ಮಂಡಳಿಯ ಪ್ರಶ್ನೆಗೆ ಉತ್ತರಿಸಲು ಆಗುವುದಿಲ್ಲ ಎಂದು ಸಂಸದರಾದ ಸಿದ್ದೇಶ್ವರ ಅವರ ಮನೆಯಲ್ಲೇ ಉಳಿದರು. ಇನ್ನು ಸಿಎಂ ಕಾಣದೆ ಕಂಗಾಲಾಗಿದ್ದ ದೆಹಲಿ ಪತ್ರಕರ್ತರು, ಸಿಎಂ ಕಾಣೆಯಾಗಿದ್ದಾರೆ ಎಂದು ಚಾನಲ್ ನಲ್ಲಿ ದೂರು ನೀಡಿದರು. ಸಿಎಂ ಕಾಣೆಯಾದರೆ ಏನೆಂತೆ.. ಬಿಎಸ್ ವೈ ಮತ್ತು ಬೊಮ್ಮಾಯಿ ರಚಿಸಿದ ಪಟ್ಟಿ ಸದ್ಯಕ್ಕೆ ಕಾಣಲು ಸಿಗುತ್ತಿದೆ...

ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ But ದ್ವೇಷಕ್ಕೂ ಪ್ರೀತಿಯೇ

ರಾಜಕೀಯದಲ್ಲಿ ಮಿತ್ರರು ಇಲ್ಲ ಶತ್ರುಗಳು ಇಲ್ಲ, ಆದರೆ ಅಧಿಕಾರ ಇರುವವರಿಗೆ ಬಹುತೇಕ ಎಲ್ಲರೂ ಮಿತ್ರರೇ. "ಕೆಲವು ಬಾರಿ ಮಿತೃತ್ವ ಕೇವಲ "ಕುಚಿಕು ಕುಚಿಕು" ಎಂದು ಹಾಡು ಹೇಳಲು ಸೀಮಿತ ಆಗುವುದು" ಹೀಗೆ ದೆಹಲಿ ಅಂಗಳದಲ್ಲಿ ಮುಖ್ಯಮಂತ್ರಿಗೆ ಕೇಳುವ ಹಾಗೆ ಹಾಡು ಹೇಳುತ್ತಿದ್ದದ್ದು ಅಶೋಕ್. ಅಂತು ಇಂತೂ ಹಾಡು ಹೇಳಿಕೊಂಡು ಕೊನೆ ಘಳಿಗೆಯಲ್ಲಿ ಮಂತ್ರಿ ಸ್ಥಾನ ಪಡೆದರು. 

ಎಲ್ಲಾ ಸರಿ ಅವರ ಹಾಡು ಈ ಬಾರಿ ಬಿಎಲ್ ಸಂತೋಷ್ ಅವರ ಅಂಗಳಕ್ಕೆ ತಲುಪಲಿಲ್ಲ, but ಅಪರೂಪ ಎನಿಸಿದ್ದು ಪಕ್ಕದ ಕ್ಷೇತ್ರದ ಮುನಿರತ್ನ ಅವರ ಮೊರೆ ತಲುಪಿದ್ದು. ದೆಹಲಿಯಲ್ಲಿ ಎರಡು ದಿನ ಇದ್ದ ಅಶೋಕ್ ರವರಿಗೆ ಸಮಯ ನೀಡದೆ ಇದ್ದದ್ದು ಆಶ್ಚರ್ಯ ಎನಿಸದೆ ಇದ್ದರೂ, ಅಚ್ಚರಿ ಮೂಡಿಸಿದ್ದು ಮುನಿರತ್ನ ಅವರಿಗೆ ಸಿಕ್ಕ ಸಮಯಾವಕಾಶ. followed by ಸಚಿವರಾಗುವ ಅವಕಾಶ. ಯಾವತ್ತೂ ಅಷ್ಟೇ ಅಸಮಾಧಾನಕ್ಕೆ ಪ್ರೀತಿಯ ನೀರೆರೆದರೆ ಪ್ರೀತಿಯ ಹೂವೇ ಅರಳುವುದು ಅಲ್ಲವೇ... 

ದೆಹಲಿಯ ಹೈ ಕಮಾಂಡ್ ಗೊತ್ತಿದ್ದರೆ ಏನಂತೆ, ಕರ್ನಾಟಕದ ಇವತ್ತಿನ ಲಿಸ್ಟ್ ಗೆ ಬಿಎಸ್ ವೈ ಅವರೇ ಹೈ ಕಮಾಂಡ್

ಈ ಬಾರಿಯ ದೆಹಲಿ ನಾಯಕತ್ವ ಸ್ಪಷ್ಟವಾಗಿತ್ತು. ಯಡಿಯೂರಪ್ಪನವರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂದು. ಅದರ ಫಲಿತಾಂಶವೇ ಸಿಪಿ ಯೋಗೇಶ್ವರ್, ಅರವಿಂದ್ ಬೆಲ್ಲದ್, ಯತ್ನಾಳ್ ಸಂಪುಟಕ್ಕೆ ಸೇರಲು ಆಗಲಿಲ್ಲ. ಪೊಲಿಟಿಕಲ್ ಪ್ರಾವೀಣ್ಯತೆ ಮರೆತು ಬಹಿರಂಗವಾಗಿ ಅಂದಿನ ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡಿ, ಏನೋ ಸಾಧಿಸುತ್ತೇನೆ ಎಂದು ಹೊರಟು, ಕೊನೆಗೆ ಇದ್ದ ಹುದ್ದೆಯನ್ನು, ಬರುವ ಅವಕಾಶವನ್ನು ಕಳೆದುಕೊಂಡ ಸಾಲಿನಲ್ಲಿ ನಿಂತವರು ಈ ಮೂವರು.

ಇನ್ನು ಮೈಸೂರು ಚಾಮರಾಜನಗರ ಜಿಲ್ಲಾಧಿಕಾರಿ ಗಲಾಟೆಯಲ್ಲಿ ಸುರೇಶ್ ಕುಮಾರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಾಗ ಹೈಕಮಾಂಡ್ ನಾಯಕರು ತಲೆಕೆಡಿಸಿಕೊಂಡಿರಲಿಲ್ಲ ಎನ್ನಲಾಗಿದೆ. ಹಾಗಾಗಿ ಸದ್ಯ ಅವರನ್ನು ಸಂಪುಟದಿಂದ ಕೈ ಬಿಟ್ಟಿದ್ದು ದೊಡ್ಡ ಸುದ್ದಿ ಅನ್ನಿಸಿಕೊಳ್ಳದಿದ್ದರೂ ವಿಧಾನಸೌಧದ ಪಡಸಾಲೆಯಲ್ಲಿ ದಕ್ಷರಿಗೆ ಬೆಲೆಯೇ ಇಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಡಿಸಿಎಂ ಆಗಿ ಬಡ್ತಿ ನೀಡಿದ ಲಕ್ಷ್ಮಣ್ ಸವದಿ ಅವರಿಗೆ ಸದ್ಯಕ್ಕೆ ರಾಜಕೀಯ ಹೊಡೆತ ಎನ್ನಬಹುದು. ಸಚಿವ ಸಂಪುಟ ದಲ್ಲಿ ಇಲ್ಲದಿದ್ದರೂ, ಪಕ್ಷದಲ್ಲಿ ದೊಡ್ಡ ಹುದ್ದೆ ನೀಡಿ ಮುಂದಿನ ಚುನಾವಣೆಯಲ್ಲಿ ಮುಖ್ಯವೇದಿಕೆಯಲ್ಲಿ ಬಳಸಬೇಕು ಎಂಬುದು ಸದ್ಯ ದೆಹಲಿಯ ಚಿಂತನೆ.

ಹೊಸ ಲಿಸ್ಟ್ ಗೆ ಬಿಎಸ್ವೈ ಹೈಕಮಾಂಡ್ ಆದರೂ, ವಿಜಯೇಂದ್ರ ಪಾಲಿಗೆ ದೆಹಲಿಯೇ ಅಂತಿಮ. ಹಗ್ಗ ಜಗ್ಗಾಟದಲ್ಲಿ ಮೊದಲು ಹಗ್ಗ ಸಡಿಲಗೊಳಿಸಿ ಆಮೇಲೆ ಹಗ್ಗವನ್ನು ಬಿಗಿಗೊಳಿಸುವುದು ನಿಜವಾದ ಆಟ ಅಲ್ಲವೇ...

-ಸ್ವಾತಿ ಚಂದ್ರಶೇಖರ್
swathichandrashekar92@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com