ಪ್ರವಾಹ ಪೀಡಿತ ಉತ್ತರ ಕನ್ನಡಕ್ಕೆ ಮಾಜಿ ಸಿಎಂ ಭೇಟಿ: ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳಿ, ಬಿಜೆಪಿ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ
ಜುಲೈ ತಿಂಗಳಿನ ವರುಣನ ಆರ್ಭಟಕ್ಕೆ ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದು, ಈ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕನ್ನಡ ಜಿಲ್ಲೆಯ ಕದ್ರಾ ಮತ್ತು ಮಲ್ಲಾಪುರ ಗ್ರಾಮಗಳಿಗೆ ಭೇಟಿ ನೀಡಿ ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
Published: 03rd August 2021 07:47 AM | Last Updated: 03rd August 2021 07:47 AM | A+A A-

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಅಳಲು ತೋಡಿಕೊಳ್ಳುತ್ತಿರುವ ವೃದ್ಧೆ.
ಕಾರವಾರ: ಜುಲೈ ತಿಂಗಳಿನ ವರುಣನ ಆರ್ಭಟಕ್ಕೆ ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದು, ಈ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕನ್ನಡ ಜಿಲ್ಲೆಯ ಕದ್ರಾ ಮತ್ತು ಮಲ್ಲಾಪುರ ಗ್ರಾಮಗಳಿಗೆ ಭೇಟಿ ನೀಡಿ ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ಪ್ರತೀ ವರ್ಷ ಮಳೆಗಾಲದಲ್ಲಿ ಇದೇ ಪರಿಸ್ಥಿತಿ ಎದುರಾಗುತ್ತದೆ. ಮುನ್ಸೂಚನೆ ನೀಡದೆ ಏಕಾಏಕಿ ಕದ್ರಾ ಡ್ಯಾಂನಿಂದ ನೀರು ಬಿಡುತ್ತಾರೆ. ಗಂಗಾವಳಿ ನದಿ ದಡದಲ್ಲಿರುವ ಜನರ ಪಾಡು ಹೇಳತೀರದಾಗಿದೆ. ಇರಲು ಮನೆಯೂ ಇಲ್ಲ, ಎಲ್ಲವೂ ನೀರಲ್ಲಿ ಕೊಚ್ಚಿಕೊಂಡು ಹೋಗಿದೆ. ಸರ್ಕಾರ ಪರಿಹಾರವನ್ನೂ ನೀಡಿಲ್ಲ ಎಂದು ಅಲ್ಲಿನ ಮಹಿಳೆಯರು ತಮ್ಮ ಗೋಳು ತೋಡಿಕೊಂಡರು.
ಇದೇ ವೇಳೆ ಮಗುವನ್ನು ಎತ್ತಿಕೊಂಡು ಬಂದಿದ್ದ ಮಹಿಳೆಯೊಬ್ಬರು ಸಿದ್ದರಾಮಯ್ಯ ಅವರನ್ನು ಎಳೆದುಕೊಂಡು ಹೋಗುವ ರೀತಿಯಲ್ಲಿ ಹೋಗಿ ಹಾಳಾದ ತಮ್ಮ ಮನೆಯನ್ನು ತೋರಿಸಿದರು. ನಾವು ದಿನಗೂಲಿ ಕಾರ್ಮಿಕರಾಗಿದ್ದು, ಪ್ರವಾಹ ನಮ್ಮ ಬಳಿಯಿದ್ದ ಎಲ್ಲವನ್ನೂ ಕಸಿದುಕೊಂಡಿದೆ ಎಂದು ಕಣ್ಣೀರಿಟ್ಟರು.
ನೆರೆ ಪೀಡಿತರ ಸಂಕಷ್ಟ ಆಲಿಸಿದ ಸಿದ್ದರಾಮಯ್ಯ ಅವರು ನಂತರ ಕದ್ರಾದಲ್ಲಿದ್ದ ಕೆಪಿಸಿಎಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನೆರೆಯಲ್ಲಿ ಜನರ ಬಟ್ಟೆ, ದವಸ-ಧಾನ್ಯ ಕೊಚ್ಚಿಕೊಂಡು ಹೋಗಿದೆ. ಜಲಾಶಯದಿಂದ ನೀರುವ ಬಿಡುವ ಕುರಿತು ಎಷ್ಟು ದಿನ ಮೊದಲು ಎಚ್ಚರಿಕೆ ನೀಡಿದ್ದೀರಿ? ಏಕೆ ಈ ಪರಿಸ್ಥಿತಿ ನಿರ್ಮಾಣವಾಯಿತು? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮೊದಲೇ ಎಚ್ಚರಿಕೆ ನೀಡಿದ್ದರೆ ಏಕೆ ಅವರು ಮನೆ ಖಾಲಿ ಮಾಡುತ್ತಿರಲಿಲ್ಲ. ನೀರು ಬಿಟ್ಟ ಬಳಿಕ ಓಡಾಡಿದ್ದೀರಾ? ಸುರಕ್ಷಿತ ಸ್ಥಳಕ್ಕೆ ಹೋಗಿದ್ದಾರಾ ಎಂದು ಪರಿಶೀಲನೆ ಮಾಡಿದ್ದೀರಾ? ಜನರ ಬಗ್ಗೆ ಯೋಚಿಸಿದ್ದೀರಾ? 2 ವರ್ಷದ ಹಿಂದೆ ಕೂಡ ಇದೇ ರೀತಿ ಆಗಿತ್ತು. ಇದೇನು ಹೊಸದಾಗಿ ನೆರೆ ಆಗಿದ್ದೇ ಎಂದು ಕಿಡಿಕಾರಿದರು.
ಕೆಪಿಸಿಗೆ ಎಷ್ಟು ಜಾಗ ಇದೆ? ಕಾಯಂ ನೌಕರರು ಉಪಯೋಗಿಸದ ಕಟ್ಟಡ ಪಾಳು ಬಿಡುವ ಅಥವಾ ಕೆಡಗುವ ಬದಲು ಗುತ್ತಿಗೆ ಕಾರ್ಮಿಕರಿಗೆ ನೀಡಿ. ನಿಮ್ಮ ಕೆಳಗೆ ಕೆಲಸ ಮಾಡುತ್ತಿರುವವರಲ್ಲವೇ? ಖಾಲಿ ನಿವೇಶನದಲ್ಲಿ ಮನೆ ಕಟ್ಟಲು ಏನು ಸಮಸ್ಯೆ ಆಗಿದೆ ಎಂದು ಪ್ರಶ್ನಿಸಿದರು.
ಶಾಸಕ ಆರ್.ವಿ.ದೇಶಪಾಂಡೆ ಎಲ್ಲಿಯೂ ನೋಟಿಸ್ ನೀಡಿಲ್ಲ ಎಂದು ಆರೋಪಿಸುತ್ತಿದ್ದಾರೆ. ಒಂದೆರಡು ಕಡೆ ಸುಳ್ಳು ಹೇಳಬಹುದು. ಎಲ್ಲರೂ ಸುಳ್ಳು ಹೇಳಲು ಸಾಧ್ಯವೇ? ಸತ್ಯ ಏನಿದೆ ಹೇಳಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಮಾತನಾಡಿರುವ ಕೆಪಿಸಿಎಲ್ ಇಂಜಿನಿಯರ್ ಗಳು ನಾವು ಎಚ್ಚರಿಕೆ ನೀಡಿಯೇ ನೀರನ್ನು ಬಿಡುಗಡೆ ಮಾಡಿದ್ದೆವು. ಇದೀಗ ಗ್ರಾಮಸ್ಥರು ನಮ್ಮ ವಿರುದ್ಧ ಆರೋಪ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆಂದು ಹೇಳಿದರು. ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು ಈ ವಿಚಾರವನ್ನು ಕೆಪಿಸಿಎಲ್ ಎಂಡಿ ಗಮನಕ್ಕೆ ತರುವುದಾಗಿ ಹೇಳಿ ಸಭೆಯನ್ನು ಅಂತ್ಯಗೊಳಿಸಿದರು. ನಂತರ ಮಲ್ಲಾಪುರ ಭೇಟಿಯೊಂದಿಗೆ ತಮ್ಮ ಪ್ರವಾಸವನ್ನು ಅಂತ್ಯಗೊಳಿಸುವುದಕ್ಕೂ ಮುನ್ನ ಗಾಂಧಿನಗರಕ್ಕೂ ಸಿದ್ದರಾಮಯ್ಯ ಅವರು ಭೇಟಿ ನೀಡಿದರು.
ಮಲ್ಲಾಪುರಕ್ಕೆ ಸಿದ್ದರಾಮಯ್ಯ ಅವರು ಭೇಟಿ ನೀಡುತ್ತಿದ್ದಂತೆಯೇ ಗ್ರಾಮಸ್ಥರು ಮುಖ್ಯಮಂತ್ರಿಗಳು ಭೇಟಿ ನೀಡದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು. ಈ ವೇಳೆ ಮಾತನಾಡಿ ಸಿದ್ದರಾಮಯ್ಯ ಅವರು, ಸದನಕ್ಕಿ ಈ ವಿಚಾರ ಕುರಿತು ಧ್ವನಿ ಎತ್ತುವುದಾಗಿ ತಿಳಿಸಿದರು. ಸರ್ಕಾರದ ಗಮನಕ್ಕೆ ಜನರ ಸಂಕಷ್ಟಗಳನ್ನು ತರಲಾಗುತ್ತದೆ. ಕಳೆದ ವರ್ಷವೂ ಈ ಪ್ರದೇಶದಲ್ಲಿ ಪ್ರವಾಹ ಎದುರಾಗಿತ್ತು. ಜನರ ಸಂಕಷ್ಟ ದೂರಾಗಿಸಲು ಸರ್ಕಾರ ಈಗಲೂ ಏನನ್ನೂ ಮಾಡಿಲ್ಲ. ಸರ್ಕಾರದ ಮೇಲೆ ಒತ್ತಡತಂದು ಜನರಿಗೆ ಪರಿಹಾರ ಸಿಗುವಂತೆ ಮಾಡಲಾಗುತ್ತದೆ ಎಂದು ತಿಳಿಸಿದರು.