ಬಿಎಸ್ ವೈ ವಿರುದ್ಧ ಸಿಡಿದಿದ್ದ ಯೋಗೇಶ್ವರ್, ಯತ್ನಾಳ್ ಗೆ ಮುಖಭಂಗ; ಅಶಿಸ್ತು, ಅತಿಯಾದ ಓಲೈಕೆ ಸಹಿಸಲ್ಲ: 'ಹೈ' ಸಂದೇಶ

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ನಿರಂತರವಾಗಿ ಕಹಳೆ ಊದಿದ್ದ ಶಾಸಕರಾದ ಸಿಪಿಯೋಗೇಶ್ವರ್, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅರವಿಂದ್ ಬೆಲ್ಲದ್ ಅವರನ್ನು ಬೊಮ್ಮಾಯಿ ಸಂಪುಟದಿಂದ ಹೊರಗಿಡಲಾಗಿದೆ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ನಿರಂತರವಾಗಿ ಕಹಳೆ ಊದಿದ್ದ ಶಾಸಕರಾದ ಸಿಪಿಯೋಗೇಶ್ವರ್, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅರವಿಂದ್ ಬೆಲ್ಲದ್ ಅವರನ್ನು ಬೊಮ್ಮಾಯಿ ಸಂಪುಟದಿಂದ ಹೊರಗಿಡಲಾಗಿದೆ.

ಇದರ ಜೊತೆಗೆ ಯಡಿಯೂರಪ್ಪ ನಿಷ್ಠ ಬಣದಲ್ಲಿ ಗುರುತಿಸಿಕೊಂಡಿದ್ದ ಶಾಸಕ ರೇಣುಕಾಚಾರ್ಯ ಅವರಿಗೂ ಸಂಪುಟದಲ್ಲಿ ಸ್ಥಾನ ದೊರೆತಿಲ್ಲ.  ಹಲವು ಸಂದರ್ಭಗಳಲ್ಲಿ ಬಹಿರಂಗ ಹೇಳಿಕೆ ನೀಡುವ ಮೂಲಕ ಪಕ್ಷ ಮತ್ತು ಸರ್ಕಾರವನ್ನು ಮುಜುಗರಕ್ಕೆ ತಳ್ಳಿದ್ದ ಶಾಸಕರ ಅಶಿಸ್ತನ್ನು ಸಹಿಸಲಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಹೈಕಮಾಂಡ್ ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಯಡಿಯೂರಪ್ಪ ಅವರ ವಿರುದ್ಧ ಹೇಳಿಕೆ ನೀಡುತ್ತಿದ್ದ ಶಾಸಕರಿಗೆ ಮತ್ತೆ ಸಚಿವ ಸ್ಥಾನ ನೀಡಿದರೇ ಮತ್ತೆ ಬೊಮ್ಮಾಯಿ ವಿರುದ್ಧವು ಕೂಡ ಮಾತನಾಡುವವರನ್ನು ಬೆಂಬಲಿಸಿದಂತಾಗುತ್ತದೆ, ಇದರಿಂದ ತಪ್ಪು ಸದೇಶ ಹೋಗುತ್ತದೆ ಎಂಬ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಿರಂತರವಾಗಿ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತ ಪಡಿಸುತ್ತಲೇ ಬಂದಿದ್ದರು. ಯೋಗೇಶ್ವರ್ ಮತ್ತು ಬೆಲ್ಲದ್ ಹಲವು ಬಾರಿ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಬಯಸಿದ್ದರು.

ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಯೋಗೇಶ್ವರ್ ನಂತರ ಯಡಿಯೂರಪ್ಪ ವಿರುದ್ಧವೇ ತಿರುಗಿಬಿದ್ದಿದ್ದರು, ಇದಾದ ನಂತರ ರೇಣುಕಾಚಾರ್ಯ ಸೇರಿದಂತೆ ಹಲವು ಶಾಸಕರು ಯೋಗೇಶ್ವರ್ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಒತ್ತಡ ಹೇರಿದ್ದರು. 

ನಾಯಕತ್ವ ಬದಲಾವಣೆ ಸಂಬಂಧ ಚರ್ಚೆ ನಡೆಯುತ್ತಿದ್ದ ವೇಳೆ ಸಾಸಕ ರೇಣುಕಾಚಾರ್ಯ ಯಡಿಯೂರಪ್ಪ ಪರ ಸಹಿ ಸಂಗ್ರಹಿಸಿದ್ದರು, ಆದರೆ ಯಾರೂ ತಮ್ಮ ಪರ ಸಹಿ ಹಾಕದಂತೆ ಸ್ವತಃ ಯಡಿಯೂರಪ್ಪ ಅವರೇ ಶಾಸಕರಿಗೆ ಸೂಚಿಸಿದ್ದರು. 

ಇನ್ನೂ ನಾಯಕತ್ವ ಬದಲಾವಣೆ ಚರ್ಚೆ ವೇಳೆ ಸಿಎಂ ಹುದ್ದೆಗೆ ಅರವಿಂದ ಬೆಲ್ಲದ್ ಅವರ ಹೆಸರು ಕೇಳಿ ಬಂದಿತ್ತು.  ಸಂಪುಟ ವಿಸ್ತರಣೆಯಲ್ಲಿ ಯೋಗೇಶ್ವರ್ ಮತ್ತು ಯತ್ನಾಳ್ ಅವರನ್ನು ಸೇರಿಸಬಾರದು ಎಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದರು ಎಂದು ಮೂಲಗಳು ತಿಳಿಸಿವೆ.

ಪಕ್ಷ ಶಿಸ್ತಿಗೆ ಹೆಸರಾಗಿದ್ದು, ಯಾವುದೇ ಕಾರಣಕ್ಕೂ ಅಶಿಸ್ತನ್ನು ಸಹಿಸುವುದಿಲ್ಲ ಎಂದು ಬಿಜೆಪಿ ಹೈಕಮಾಂಡ್ ಸ್ಪಷ್ಟ ಸಂದೇಶ ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com