ನೂತನ ಸಚಿವರಿಗಿಂದು ಖಾತೆ ಹಂಚಿಕೆ: ಎಲ್ಲರ ಚಿತ್ತ ದೆಹಲಿಯತ್ತ

ನೂತನ ಸಚಿವರಿಗೆ ಶುಕ್ರವಾರ ಖಾತೆಗಳ ಹಂಚಿಕೆಯಾಗುವ ಸಂಭವವಿದ್ದು, ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಸುಳಿವು ನೀಡಿದ್ದಾರೆ. ತಮ್ಮ ಸಂಪುಟಕ್ಕೆ ಸೇರ್ಪಡೆಯಾಗಿರುವ 29 ಸಚಿವರಿಗೆ ನಾಳೆ ಖಾತೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಗುರುವಾರ ಹೇಳಿದ್ದಾರೆ.
ಪ್ರಮಾಣವಚನ ಸ್ವೀಕರಿಸಿದ ಸಚಿವರು ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಜೊತೆಗಿರುವುದು
ಪ್ರಮಾಣವಚನ ಸ್ವೀಕರಿಸಿದ ಸಚಿವರು ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಜೊತೆಗಿರುವುದು

ಬೆಂಗಳೂರು: ನೂತನ ಸಚಿವರಿಗೆ ಶುಕ್ರವಾರ ಖಾತೆಗಳ ಹಂಚಿಕೆಯಾಗುವ ಸಂಭವವಿದ್ದು, ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಸುಳಿವು ನೀಡಿದ್ದಾರೆ. ತಮ್ಮ ಸಂಪುಟಕ್ಕೆ ಸೇರ್ಪಡೆಯಾಗಿರುವ 29 ಸಚಿವರಿಗೆ ನಾಳೆ ಖಾತೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಗುರುವಾರ ಹೇಳಿದ್ದಾರೆ.

ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆಯನ್ನು ಆಗಸ್ಟ್ 6ರಂದು ಪೂರ್ಣಗೊಳಿಸುತ್ತೇನೆಂದು ಹೇಳಿದ್ದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟ ರಚನೆಯಾಗಿ 29 ಸಚಿವರು ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ನೂತನ ಸಚಿವರಿಗೆ ಖಾತೆ ಹಂಚಿಕೆ ಕಸರತ್ತು ನಡೆದಿದ್ದು, ಕೆಲ ಪ್ರಭಾವಿ ಸಚಿವರು ಪ್ರಮುಖ ಖಾತೆಗಳಿಗೆ ಪಟ್ಟು ಹಿಡಿದಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. 

ಕೆಲ ಸಚಿವರುಗಳು ಇಂತಹುದೇ ಖಾತೆ ಬೇಕು ಎಂದು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ವರಿಷ್ಠರ ಸಲಹೆ ಮಾರ್ಗದರ್ಶನದಂತೆ ಸಚಿವರುಗಳ ಸಾಮರ್ಥ್ಯಕ್ಕೆ ತಕ್ಕಂತೆ ಖಾತೆ ಹಂಚಲು ಮುಂದಾಗಿದ್ದಾರೆಂದು ತಿಳಿದುಬಂದಿದೆ. 

ಸಾಕಷ್ಟು ಕಸರತ್ತಿನ ನಂತರ ಅಳೆದು-ತೂಗಿ ವರಿಷ್ಠರ ಮಾರ್ಗದರ್ಶನದಂತೆ ಸಚಿವ ಸಂಪುಟ ರಚಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಖಾತೆ ಹಂಚಿಕೆಯಲ್ಲೂ ವರಿಷ್ಠರ ಮಾರ್ಗದರ್ಶನದಂತೆ ಮುಂದುವರೆಯಲು ತೀರ್ಮಾನಿಸಿದ್ದು, ವರಿಷ್ಠರ ಸೂಚನೆಯಂತೆ ಖಾತೆ ಹಂಚಲು ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ. ಹೀಗಾಗಿ ಇದೀಗ ದೆಹಲಿ ವರಿಷ್ಠರ ನಿರ್ಧಾರದತ್ತ ನೂತನ ಸಚಿವರ ಚಿತ್ತ ಹರಿದಿದೆ. 

ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಒಂದು ವಾರದ ನಂತರ, ಬೊಮ್ಮಾಯಿ ಬುಧವಾರ ತಮ್ಮ ಸಂಪುಟಕ್ಕೆ 29 ಸಚಿವರನ್ನು ಸೇರ್ಪಡೆ ಮಾಡಿಕೊಂಡಿದ್ದರು.

ಅದರಲ್ಲಿ 23 ಮಂದಿ ಹಿಂದಿನ ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದವರಾಗಿದ್ದು, 6 ಮಂದಿ ಹೊಸಬರಾಗಿದ್ದಾರೆ. ಕೆಲವು ಮಂತ್ರಿಗಳು ಹಿಂದಿನ ಕ್ಯಾಬಿನೆಟ್‌ನಲ್ಲಿ ತಾವು ಹೊಂದಿದ್ದ ಖಾತೆಗಳನ್ನು ಉಳಿಸಿಕೊಳ್ಳಲು ಆಶಿಸುತ್ತಿದ್ದಾರೆ. ಇನ್ನೂ ಕೆಲವರು ದೊಡ್ಡ ಖಾತೆಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಗೋವಿಂದ ಕಾರಜೋಳ ಹಾಗೂ ಕೆಎಸ್.ಈಶ್ವರಪ್ಪರಂತಹ ಪಕ್ಷದ ಹಿರಿಯ ನಾಯಕರು ತಮ್ಮ ಹಿಂದಿನ ಖಾತೆಗಳನ್ನೇ ಪಡೆದುಕೊಳ್ಳಲು ಬಯಸುತ್ತಿದ್ದಾರೆಂದು ತಿಳಿದುಬಂದಿದೆ. 

ಈ ನಡುವೆ ಸಂಘ ಪರಿವಾರ ಸದಸ್ಯರಿಗೆ ದೊಡ್ಡ ಮಟ್ಟದ ಖಾತೆ ನೀಡಲು ಕೇಂದ್ರೀಯ ನಾಯಕತ್ವ ಹಾಗೂ ಆರ್'ಎಸ್ಎಸ್ ಚಿಂತನೆ ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಇದರಂತೆ ದಶಕಗಳಿಂದ ಸಂಘ ಪರಿವಾರದ ಜೊತೆಗಿದ್ದ ಇದೇ ಮೊದಲ ಬಾರಿಗೆ ಮಂತ್ರಿಗಳಾಗಿರುವ ವಿ ಸುನಿಲ್ ಕುಮಾರ್ ಮತ್ತು ಬಿ.ಸಿ ನಾಗೇಶ್ ಅವರಿಗೆ ದೊಡ್ಡ ಖಾತೆಗಳೇ ದೊರಕುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಪಕ್ಷಕ್ಕೆ ನೂತನವಾಗಿ ಸೇರ್ಪಡೆಗೊಂಡಿರುವ ಎಂಟಿಬಿ ನಾಗರಾಜ್ ಮತ್ತು ಮುನಿರತ್ನ ಅವರಿಗೆ ಸಣ್ಣ ಮಟ್ಟದ ಖಾತೆ ಜವಾಬ್ದಾರಿಗಳನ್ನು ನೀಡಿ, ಶಶಿಕಲಾ ಜೊಲ್ಲೆ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಈ ನಡುವೆ ಸಚಿವರಾದ ಮುರುಗೇಶ್ ನಿರಾಣಿ ಮತ್ತು ಮಾಜಿ ಉಪಮುಖ್ಯಮಂತ್ರಿ ಡಾ ಸಿಎನ್ ಅಶ್ವತ್ಥ್ ನಾರಾಯಣ್ ಅವರಿಗೆ ಒಂದಕ್ಕಿಂತ ಹೆಚ್ಚು ಸಚಿವಾಲಯಗಳ ಉಸ್ತುವಾರಿ ನೀಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com