ಸಿಎಂ ಖಾತೆ ಹಂಚಿಕೆ ಕಗ್ಗಂಟು: ಬೊಮ್ಮಾಯಿ ಪಟ್ಟಿಗೆ ಸಿಗದ ಕ್ಲಿಯರೆನ್ಸ್; ಸಂಘ ಮೂಲದವರಿಗೆ ಮಹತ್ವದ ಖಾತೆಗೆ ಒತ್ತಡ!

ನೂತನ ಸಚಿವರಿಗೆ ಶೀಘ್ರದಲ್ಲೆ ಖಾತೆ ಹಂಚಿಕೆ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರಾದರೂ ಈ ಪ್ರಕ್ರಿಯೆ ಅಷ್ಟು ಸಲೀಸಾಗಿ ನಡೆಯುವಂತೆ ಕಾಣುತ್ತಿಲ್ಲ.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಬೆಂಗಳೂರು: ನೂತನ ಸಚಿವರಿಗೆ ಶೀಘ್ರದಲ್ಲೆ ಖಾತೆ ಹಂಚಿಕೆ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರಾದರೂ ಈ ಪ್ರಕ್ರಿಯೆ ಅಷ್ಟು ಸಲೀಸಾಗಿ ನಡೆಯುವಂತೆ ಕಾಣುತ್ತಿಲ್ಲ. ಪ್ರಮುಖ ಖಾತೆಗಾಗಿ ಸಂಪುಟದ ಸದಸ್ಯರು ಒತ್ತಡ ತರುತ್ತಿರುವುದೇ ಇದಕ್ಕೆ ಕಾರಣವಾಗಿದೆ. 

ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿ ಎರಡು ದಿನ ಕಳೆದರೂ ಖಾತೆ ಹಂಚಿಕೆಯಾಗಿಲ್ಲ, ಸಿಎಂ ಬೊಮ್ಮಾಯಿ ಈಗಾಗಲೇ 29 ಸಚಿವರಿಗೂ ಖಾತೆ ಹಂಚಿಕೆ ಪಟ್ಟಿ ತಯಾರುಮಾಡಿ ಕಳುಹಿಸಿದ್ದರೂ ಇನ್ನೂ ಅದಕ್ಕೆ ಅನುಮೋದನೆ ಸಿಕ್ಕಿಲ್ಲ.  ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವರು ಮತ್ತು ಶಾಸಕರು ಶುಕ್ರವಾರ ತಡರಾತ್ರಿ ಸಿಎಂ ತುಮಕೂರಿನಿಂದ ಹಿಂದಿರುಗುವ ಮುನ್ನವೇ ಬೊಮ್ಮಾಯಿಯ ಆರ್ ಟಿ ನಗರದ ನಿವಾಸಕ್ಕೆ ಭೇಟಿ ನೀಡಿದರು.

ಶುಕ್ರವಾರ ರಾತ್ರಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ನಂತರ ರಾತ್ರಿ 9.45 ರ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ, ಖಾತೆ ಹಂಚಿಕೆಗಾಗಿ ಪಟ್ಟಿಯನ್ನು  ಬೆಂಗಳೂರಿಗೆ ಮರಳಿದ ತಕ್ಷಣ ರಾಜ್ಯಪಾಲರಿಗೆ ಕಳುಹಿಸುವುದಾಗಿ ಹೇಳಿದರು. ಆದರೆ ಅವರು ಈ ಪಟ್ಟಿಯನ್ನು ಮೊದಲೇ ಕಳುಹಿಸಿದ್ದಾರೆ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ.

ಸಿಎಂ ಮೊದಲೇ ಪಟ್ಟಿಯನ್ನು ಕಳುಹಿಸಿದ್ದು ರಾಜ್ಯಪಾಲರ ಮತ್ತು ಕೇಂದ್ರ ಬಿಜೆಪಿ ನಾಯಕರ ಅನುಮತಿಗಾಗಿ ಕಾಯುತ್ತಿದೆ ಎಂದು ಹೇಳಲಾಗಿದೆ. ಇದರ ನಡುವೆ ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮತ್ತು ಶ್ರೀಮಂತ್ ಪಾಟೀಲ್. ವಿ ಸೋಮಣ್ಣ ಮತ್ತು ಮುರುಗೇಶ್ ನಿರಾಣಿ ಸಿಎಂ ಅವರ ನಿವಾಸದಲ್ಲಿ ಕಾಯುತ್ತಿದ್ದರು ಮತ್ತು ಬೊಮ್ಮಾಯಿ ಮನೆಗೆ ತಲುಪಿದ ತಕ್ಷಣ ಚರ್ಚೆ ಆರಂಭವಾಯಿತು.

‘ಬೆಂಗಳೂರಿಗೆ ತೆರಳುತ್ತಿದ್ದಂತೆ ನೂತನ ಸಚಿವರಿಗೆ ಖಾತೆ ಹಂಚಿಕೆಮಾಡಿ, ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಿಕೊಡಲಾಗುವುದು’ ಎಂದು ಸಿಎಂ ಮೊದಲು ಹೇಳಿದರು. ರಾಜ್ಯಪಾಲರಿಗೆ ಖಾತೆ ಹಂಚಿಕೆ ಪಟ್ಟಿ ಕಳುಹಿಸುವುದು ಕೇವಲ ಶಿಷ್ಟಾಚಾರ, ಖಾತೆ ಹಂಚಿಕೆ ಮಾಡುವ ಸಂಪೂರ್ಣ ಅಧಿಕಾರ ಮುಖ್ಯಮಂತ್ರಿಗಳಿಗೆ ಸಂವಿಧಾನ ನೀಡಿದೆ, ಆದರೆ ಹೈಕಮಾಂಡ್ ನಿಂದ ಇನ್ನೂ ಕ್ಲಿಯರೆನ್ಸ್ ದೊರೆಯದ ಕಾರಣ ಖಾತೆ ಹಂಚಿಕೆ ವಿಳಂಬವಾಗುತ್ತಿದೆ.

ಖಾತೆ ಹಂಚಿಕೆಗೆ ಹೈಕಮಾಂಡ್ ಇನ್ನೂ ಗ್ರೀನ್ ಸಿಗ್ನಲ್ ನೀಡದಿದ್ದರೂ ಈಗಾಗಲೇ ಹಲವರಿಗೆ ಪ್ರಮುಖ ಖಾತೆ ನೀಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಆರ್. ಅಶೋಕ್ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ, ಇದರ ಜೊತೆಗೆ ಯಡಿಯೂರಪ್ಪ ಅವಧಿಯಲ್ಲಿ ಕಾಂಗ್ರೆಸ್-ಜೆಡಿಎಸ್ ತೊರೆದು ಬಂದಿದ್ದ ಶಾಸಕರು ಅದೇ ಖಾತೆಯಲ್ಲಿ ಮುಂದುವರಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಡಾ. ಕೆ ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ, ಬಿ ಸಿ ಪಾಟೀಲ್ ಕೃಷಿ, ಎಸ್ ಟಿ ಸೋಮಶೇಖರ್ ಸಹಕಾರ ಇಲಾಖೆ ನೀಡಲಾಗುವುದು ಎಂದು ತಿಳಿದು ಬಂದಿದೆ ಆದರೆ ಪಕ್ಷದ ತತ್ವ ಸಿದ್ಧಾಂತಗಳು ಹಾಗೂ ಆರ್ ಎಸ್ ಎಸ್ ಹಿನ್ನೆಲೆಯಿಂದ ಬಂದವರಿಗೆ ಪ್ರಮುಖ ಖಾತೆ ನೀಡಬೇಕೆಂದು ಸಂಘ ಪರಿವಾರ ಒತ್ತಡ ಹೇರುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com