ನಾನು ಬಯಸಿದ ಖಾತೆಯೇ ಬೇರೆ, ನನಗೆ ಸಿಕ್ಕಿದ್ದೇ ಬೇರೆ: ಸಚಿವ ಆನಂದ್ ಸಿಂಗ್ ಅಸಮಾಧಾನ
ನನಗೆ ನಿರೀಕ್ಷೆ ಮಾಡಿದ ಖಾತೆಯನ್ನು ಸಿಎಂ ಬೊಮ್ಮಾಯಿಯವರು ಕೊಟ್ಟಿಲ್ಲ, ನಾನು ಬೇರೆ ಉತ್ತಮ ಖಾತೆಯನ್ನು ನಿರೀಕ್ಷೆ ಮಾಡಿದ್ದೆ ಎಂದು ಸಚಿವರಿಗೆ ಖಾತೆ ಹಂಚಿಕೆಯಾದ ಬೆನ್ನಲ್ಲೇ ಆನಂದ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Published: 07th August 2021 01:17 PM | Last Updated: 07th August 2021 01:39 PM | A+A A-

ಸಚಿವ ಆನಂದ್ ಸಿಂಗ್
ಬೆಂಗಳೂರು: ನನಗೆ ನಿರೀಕ್ಷೆ ಮಾಡಿದ ಖಾತೆಯನ್ನು ಸಿಎಂ ಬೊಮ್ಮಾಯಿಯವರು ಕೊಟ್ಟಿಲ್ಲ, ನಾನು ಬೇರೆ ಉತ್ತಮ ಖಾತೆಯನ್ನು ನಿರೀಕ್ಷೆ ಮಾಡಿದ್ದೆ ಎಂದು ಸಚಿವರಿಗೆ ಖಾತೆ ಹಂಚಿಕೆಯಾದ ಬೆನ್ನಲ್ಲೇ ಆನಂದ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನು ಬಯಸಿದ ಖಾತೆಯೇ ಬೇರೆ, ನನಗೆ ಸಿಕ್ಕಿದ್ದೇ ಬೇರೆ ಎಂದು ಆನಂದ್ ಸಿಂಗ್ ಅವರು ಅಸಮಾಧಾನ ಹೊರಹಾಕಿದ್ದು, ಈ ಬಗ್ಗೆ ನಾಳೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮಾತನಾಡುತ್ತೇನೆ, ನೋಡೋಣ ಏನಾಗುತ್ತದೆ, ಆ ಮೇಲೆ ಏನು ಮಾಡುವುದು ಎಂದು ತೀರ್ಮಾನ ಮಾಡುತ್ತೇನೆ ಎಂದು ಹೇಳಿದ್ದಾರೆ.
ಕಳೆದ ಬಾರಿ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದವರಲ್ಲಿ ನಾನೇ ಮೊದಲಿಗ, ಪಕ್ಷಕ್ಕೆ ನನ್ನದೇ ಆದ ರೀತಿಯಲ್ಲಿ ಸಹಕಾರ, ಕೆಲಸ ಮಾಡಿದ್ದೇನೆ, ನಾನು ಕೇಳಿದ ಖಾತೆಯನ್ನೇ ನನಗೆ ನೀಡಬೇಕಾಗಿತ್ತು ಎಂದಿದ್ದಾರೆ.
ಸಿಎಂ ಮುಂದೆ ಇಂತಹದ್ದೇ ಖಾತೆ ಬೇಕೆಂದು ಬೇಡಿಕೆ ಇಟ್ಟಿದ್ದೆ. ಆದರೆ ನನ್ನ ನಿರೀಕ್ಷೆಯ ಖಾತೆ ಕೊಟ್ಟಿಲ್ಲ. ಬಯಸಿದ ನನಗೆ ಖಾತೆ ಸಿಗದೆ ಇದ್ದರೆ ರಾಜೀನಾಮೆಗೆ ಸಿದ್ಧ ಎಂದಿದ್ದಾರೆ. ಸರ್ಕಾರ ರಚನೆಗೆ ಮೊದಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದೇನೆ. ನನಗೆ ಸರ್ಕಾರದ ಮೇಲೆ ಭರವಸೆ ಇದೆ ನಿರೀಕ್ಷಿತ ಖಾತೆ ಕೊಡ್ತಾರೆ ಅಂತ, ಸರ್ಕಾರಕ್ಕೆ ನಾನು ಕೂಡ ಮನವಿ ಮಾಡಿದ್ದೇನೆ. ಇಂದು ರಾತ್ರಿ ಬೆಂಗಳೂರಿಗೆ ಹೊರಟಿದ್ದೇನೆ, ಸಿಎಂ ಬೊಮ್ಮಾಯಿ ಅವರನ್ನ ಭೇಟಿ ಮಾಡಿ ಚರ್ಚೆ ಮಾಡ್ತೀನಿ. ಸರ್ಕಾರ ಯಾವ ರೀತಿ ಸ್ಪಂದಿಸುತ್ತಾ ಅಂತಾ ಕಾದು ನೋಡುತ್ತೇನೆ. ಸ್ಪಂದಿಸದೆ ಇದ್ದರೆ ನನ್ನ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದರು. ನಿರೀಕ್ಷಿತ ಖಾತೆ ಸಿಕ್ಕಿಲ್ಲ ಎಂದು ರಾಜೀನಾಮೆ ಇಂಗಿತವನ್ನೂ ಆನಂದ್ ಸಿಂಗ್ ವ್ಯಕ್ತಪಡಿಸಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಆನಂದ್ ಸಿಂಗ್ ಗೆ ಪ್ರವಾಸೋದ್ಯಮ, ಪರಿಸರ ಮತ್ತು ಪರಿಸರ ವಿಜ್ಞಾನ ಖಾತೆಯನ್ನು ನೀಡಲಾಗಿದೆ.