ಮುಖ್ಯಮಂತ್ರಿಗೆ ಸಾಲು ಸಾಲು ಸಂಕಟ; ಬೊಮ್ಮಾಯಿಗೆ ತಲೆನೋವಾಯ್ತು ಸಂಪುಟ; ಅಸಮಾಧಾನಿತ ಶಾಸಕರು ಆಡಿದ್ದೇ ಆಟ!
ಸಂಪುಟ ವಿಸ್ತರಣೆ ಬೆನ್ನಲ್ಲಿ ಪ್ರಮುಖ ಖಾತೆಗಳಿಗಾಗಿ ಹಲವು ಸಚಿವರ ಅಸಮಾಧಾನ ಭುಗಿಲೆದ್ದ ಹಿನ್ನಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
Published: 09th August 2021 08:13 AM | Last Updated: 09th August 2021 04:38 PM | A+A A-

ಯಡಿಯೂರಪ್ಪ ಮತ್ತುು ಬೊಮ್ಮಾಯಿ
ಬೆಂಗಳೂರು: ಸಂಪುಟ ವಿಸ್ತರಣೆ ಬೆನ್ನಲ್ಲಿ ಪ್ರಮುಖ ಖಾತೆಗಳಿಗಾಗಿ ಹಲವು ಸಚಿವರ ಅಸಮಾಧಾನ ಭುಗಿಲೆದ್ದ ಹಿನ್ನಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಭಾನುವಾರ ಮಾಜಿ ಸಿಎಂ ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ಭೇಟಿ ನೀಡಿದ ಬಸವರಾಜ ಬೊಮ್ಮಾಯಿ ಅವರು ಖಾತೆ ವಿಚಾರವಾಗಿ ಸುಮಾರು 25ರಿಂದ 30ನಿಮಿಷ ಚರ್ಚೆ ನಡೆಸಿದರು. ಅಸಮಾಧಾನಿತ ಶಾಸಕರ ಮನವೊಲಿಸುವ ಕಾರ್ಯ ಹಾಗೂ ಕೋವಿಡ್- ಪ್ರವಾಹ ಪರಿಸ್ಥಿತಿ ನಿಭಾಯಿಸುವ ಸಂಬಂಧ ಯಡಿಯೂರಪ್ಪ ಅವರು ಸಿಎಂಗ ಸಹಾಯ ಮಾಡುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹಾಗೂ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್, ಶಶಿಕಲಾ ಜೊಲ್ಲೆ ಮತ್ತು ವಿ. ಸೋಮಣ್ಣ ಅವರು ಖಾತೆ ವಿಚಾರದಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ. ಇಂಧನ ಖಾತೆಯ ಮೇಲೆ ಆನಂದ್ ಸಿಂಗ್ ಕಣ್ಣಿಟ್ಟರೆ, ವಸತಿ ಖಾತೆಯ ಮೇಲೆ ಎಂಟಿಬಿ ನಾಗರಾಜ್ ಕಣ್ಣಿಟ್ಟಿದ್ದಾರೆ.
ಇದಲ್ಲದೇ ಶುಕ್ರವಾರ ಸಂಜೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಹಲವು ಶಾಸಕರು ಸಭೆ ನಡೆಸಿರುವುದು ಸಿಎಂ ಗೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ, ಕಾಂಗ್ರೆಸ್-ಜೆಡಿಎಸ್ ನಿಂದ ಬಂದಿರುವ ಶ್ರೀಮಂತ್ ಪಾಟೀಲ್, ಮಹೇಶ್ ಕುಮಟಳ್ಳಿ ಮತ್ತು ಪ್ರತಾಪ್ ಗೌಡ ಪಾಟೀಲ್ ಕೂಡ ಸಭೆ ನಡೆಸಿದ್ದಾರೆ.
ಅಶ್ಲೀಲ ಸಿಡಿ ಪ್ರಕರಣದಲ್ಲಿ ರಾಜಿನಾಮೆ ನೀಡಿರುವ ರಮೇಶ್ ಜಾರಕಿಹೊಳಿ ತನಿಖೆ ನಂತರ ಕ್ಲೀನ್ ಚಿಟ್ ದೊರೆತ ಮೇಲೆ ತಮ್ಮನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ.
ಹೊನ್ನಾಳಿ ಶಾಸಕ ರೇಣುಕಾಚಾರ್ಯ, ಸುರಪುರ ಶಾಸಕ ರಾಜು ಗೌಡ, ಮತ್ತು ಹಾವೇರಿಯ ನೆಹರು ಓಲೇಕಾರ್ ಸೇರಿದಂತೆ ಅಸಮಾಧಾನಿತ ಶಾಸಕರ ಪಟ್ಟಿ ಬೆಳೆಯುತ್ತಲೇ ಇದೆ. ಸಚಿವ ಸ್ಥಾನ ವಂಚಿತ ಶಾಸಕರು ತಮ್ಮ ಮುಂದಿನ ಹೆಜ್ಜೆ ನಿರ್ಧರಿಸಲಿದ್ದಾರೆ.
ಇದಲ್ಲದೇ ಅಸಮಾಧಾನಿತ ಶಾಸಕರ ಜೊತೆ ಯಡಿಯೂರಪ್ಪ ವಿರುದ್ಧ ಕತ್ತಿ ಮಸೆಯುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಯೋಗೇಶ್ವರ್ ಮತ್ತು ಎಚ್ ವಿಶ್ವನಾಥ್ ಸಂಪರ್ಕದಲ್ಲಿರುವುದು ಸಿಎಂ ಗೆ ಮತ್ತೊಂದು ಸಮಸ್ಯೆಯಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸೋತ ಪ್ರತಾಪ್ ಗೌಡ ಪಾಟೀಲ್ ಶನಿವಾರ ಬಾಲಚಂದ್ರ ಜಾರಕಿಹೊಳಿ, ಶ್ರೀಮಂತ ಪಾಟೀಲ್ ಮತ್ತು ಮಹೇಶ್ ಕುಮಟಹಳ್ಳಿ ಅವರೊಂದಿಗೆ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಳಿಸಿದರು. ತಾವು ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಪಕ್ಷ ತಮ್ಮನ್ನು ಗುರುತಿಸಿಲ್ಲ, ಕೆಲವು ಜನರು ನನ್ನನ್ನು ಸೋಲಿಸಲು ಪಿತೂರಿ ಮಾಡಿದ್ದರು, ಹೀಗಾಗಿ ನನಗೆ ಸೂಕ್ತ ಸ್ಥಾನಮಾನ ನೀಡಬೇಕೆಂದು ಕೇಳುತ್ತಿದ್ದಾರೆ. ಪ್ರತಿಯೊಬ್ಬರೂ ಶೇ,ನೂರರಷ್ಟು ತೃಪ್ತಿ ಪಡಿಸಲು ಸಾಧ್ಯವಿಲ್ಲ ಎಂದು ಅರವಿಂದ್ ಬೆಲ್ಲದ್ ತಿಳಿಸಿದ್ದಾರೆ.
ನನ್ನ ಹೆಸರನ್ನು ಸಹ ಮಂತ್ರಿ ಸ್ಥಾನಕ್ಕಾಗಿ ಪರಿಗಣಿಸಲಾಗಿತ್ತು, ಆದರೆ ಎಲ್ಲರಿಗೂ ಒಂದೇ ಸಮಯದಲ್ಲಿ ಅವಕಾಶ ನೀಡಲಾಗುವುದಿಲ್ಲ, ನಾವು ನಮ್ಮ ಸರದಿಗಾಗಿ ಕಾಯಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ. ಪಕ್ಷದ ಹಿರಿಯ ನಾಯಕರು ಸದ್ಯ ಎದ್ದಿರುವ ಅಸಮಾಧಾನವನ್ನು ಹೇಗೆ ಬಗೆಹರಿಸಲಿದ್ದಾರೆ ಎಂಬುದನ್ನು
ಕಾದು ನೋಡಬೇಕಾಗಿದೆ.