ಕಾಡೇ ಇಲ್ಲದ ಜಿಲ್ಲೆಯವರನ್ನು ಅರಣ್ಯ ಸಚಿವರಾಗಿ ಮಾಡಿದರೆ ಏನು ಲಾಭ?: ಬಿಜೆಪಿ ಶಾಸಕ ಅಪ್ಪಚ್ಚು ರಂಜನ್
ಸಚಿವ ಸ್ಥಾನ ವಂಚಿತ ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮತ್ತೆ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರ ಹಾಕಿರುವುದು ಕೊಡಗು ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದೆ.
Published: 09th August 2021 09:28 AM | Last Updated: 09th August 2021 09:28 AM | A+A A-

ಅಪ್ಪಚ್ಚು ರಂಜನ್
ಮಡಿಕೇರಿ: ಸಚಿವ ಸ್ಥಾನ ವಂಚಿತ ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮತ್ತೆ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರ ಹಾಕಿರುವುದು ಕೊಡಗು ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದೆ. ಕೆಲವು ನಾಯಕರನ್ನು ಪರೋಕ್ಷವಾಗಿ ಟೀಕಿಸಿರುವುದು ಕೂಡ ಚರ್ಚೆಗೆ ಗ್ರಾಸವಾಗಿದೆ. ಇದು ಪಕ್ಷದ ಭದ್ರಕೋಟೆಯಲ್ಲಿ ಬಿರುಕಿನ ಮುನ್ಸೂಚನೆಯಾ ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿದೆ.
ರಾಜ್ಯ ಸಚಿವ ಸಂಪುಟದ ವಿರುದ್ಧ ತಮ್ಮ ಅಸಮಾಧಾನದ ಹೇಳಿಕೆಗಳನ್ನು ಶಾಸಕ ಅಪ್ಪಚ್ಚು ರಂಜನ್ ಭಾನುವಾರವೂ ಮುಂದುವರಿಸಿದ್ದಾರೆ. ಮಡಿಕೇರಿ ತಾಲೂಕು ಮುಕ್ಕೋಡ್ಲುವಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದ ಅವರು, ಸುದ್ದಿಗಾರರ ಜೊತೆ ಮಾತನಾಡಿ, ''ಅರಣ್ಯವೇ ಇಲ್ಲದ ಜಿಲ್ಲೆಯವರನ್ನು ಅರಣ್ಯ ಮಂತ್ರಿ ಮಾಡಿದರೆ ಕೊಡಗಿನ ಸಮಸ್ಯೆ ಹೇಗೆ ಗೊತ್ತಾಗಲು ಸಾಧ್ಯ?'' ಎಂದು ಪ್ರಶ್ನೆ ಮಾಡಿದ್ದಾರೆ.
ಸಚಿವ ಸಂಪುಟದಲ್ಲಿ ಮಂತ್ರಿಗಳ ಆಯ್ಕೆ ಹೇಗೆ ಮಾಡುತ್ತಾರೆ ಎಂಬುದೇ ತಿಳಿಯುತ್ತಿಲ್ಲ. ಕೊಡಗಿನ ಸಮಸ್ಯೆಗಳ ಬಗ್ಗೆ ಕೆಲವು ಮಂತ್ರಿಗಳು ಖುದ್ದು ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ. ಆದರೆ ಇನ್ನೂ ಕೆಲವರು ಮಾತ್ರ ಸರಿಯಾದ ಮಾಹಿತಿಯೂ ಇಲ್ಲದೇ ಸ್ಥಳ ಪರಿಶೀಲನೆಯನ್ನೂ ಮಾಡದೇ ಕೂತ ಸ್ಥಳದಿಂದಲೇ ಮಾತನಾಡುತ್ತಾರೆ. ಹಾಗಾಗಿ ಕೊಡಗಿನ ಸಮಸ್ಯೆಗಳ ಬಗ್ಗೆ ಅರಿವಿರುವವರನ್ನೇ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕೆಂದು ಹೇಳಿದ ರಂಜನ್, ಸ್ಥಳೀಯರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಿದರೆ ಮಾತ್ರ ಸ್ಥಳೀಯ ಸಮಸ್ಯೆ ಅರಿಯಲು ಸಾಧ್ಯ ಎಂದರು.
ಬಿಜೆಪಿ ಮೂಲಗಳ ಪ್ರಕಾರ ರಂಜನ್ ಅವರಿಗೆ ಸಚಿವ ಸ್ಥಾನ ತಪ್ಪಲು ಪಕ್ಷದ ಜಿಲ್ಲೆಯ ಪ್ರಮುಖ ನಾಯಕರೊಬ್ಬರು ಕಾರಣ ಎಂದು ಹೇಳಲಾಗುತ್ತಿದೆ